ಮಂಡ್ಯ: ಜಿಲ್ಲೆಯ ಹಲಗೂರಿನಲ್ಲಿ ಧಾರಾಕಾರ ಮಳೆ ಸುರಿದಿರುವ ಹಿನ್ನೆಲೆಯಲ್ಲಿ (Rain in Mandya) ಮಳವಳ್ಳಿ ತಾಲ್ಲೂಕು ಟಿ.ಕೆ.ಹಳ್ಳಿಯಲ್ಲಿರುವ ಕಾವೇರಿ ನೀರಿನ ಜಲರೇಚಕ ಯಂತ್ರಾಗಾರ (ಪಂಪ್ಸ್ಟೇಷನ್) ಜಲಾವೃತಗೊಂಡಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಏರುಪೇರಾಗಿದೆ. ಇಲ್ಲಿಂದಲೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಯಂತ್ರಾಗಾರಕ್ಕೆ ಹಾನಿಯಾದ ವಿಚಾರ ತಿಳಿದ ತಕ್ಷಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಪ್ರವಾಸ ಕೈಗೊಂಡಿದ್ದು, ಟಿ.ಕೆ.ಹಳ್ಳಿಗೆ ಧಾವಿಸುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಇಂದು (ಸೆ 5, ಸೋಮವಾರ) ಮಧ್ಯಾಹ್ನ ಮಂಡ್ಯಕ್ಕೆ ತೆರಳಲಿದ್ದು, ಟಿಕೆ ಹಳ್ಳಿಯಲ್ಲಿರುವ ಬೆಂಗಳೂರು ನೀರು ಸರಬರಾಜು ಮಂಡಳಿಯ ಘಟಕಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಮಳೆ ನೀರು ನುಗ್ಗಿ ಯಂತ್ರೋಪಕರಣಗಳು ಮುಳುಗಡೆಯಾಗಿರುವ ಕಾರಣ ಬೆಂಗಳೂರಿಗೆ ನೀರು ಸರಬರಾಜು ಬಂದ್ ಆಗುವ ಸಾಧ್ಯತೆಯಿದೆ. ವಿಧಾನಸೌಧ ಹಾಗೂ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಲ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಅಲ್ಲಿಂದ ನೇರವಾಗಿ ಮಂಡ್ಯಕ್ಕೆ ತೆರಳಲಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಾಲತಾಣದ ಪ್ರಕಾರ ಬೆಂಗಳೂರಿಗೆ ಕಾವೇರಿಯಿಂದ ಪ್ರಸ್ತುತ ಪ್ರತಿದಿನ 1,450 ದಶಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. 57 ನೆಲಮಟ್ಟದ ಜಲಾಶಯಗಳು ಹಾಗೂ 39 ಓವರ್ಹೆಡ್ ಟ್ಯಾಂಕ್ಗಳು ಇವೆ. ಒಂದು ದಿನಕ್ಕೆ ಸರಾಸರಿ 10.15 ಲಕ್ಷ ಮನೆಗಳಿಗೆ ನೀರು ಸರಬರಾಜಾಗುತ್ತಿದೆ.
ಬೆಂಗಳೂರಿಗೆ ನೀರು ಪೂರೈಕೆ ಸಮಸ್ಯೆ: ಮುಖ್ಯಮಂತ್ರಿ ಪ್ರತಿಕ್ರಿಯೆ
ಮಂಡ್ಯದಲ್ಲಿ ಧಾರಾಕಾರ ಮಳೆಯಿಂದ ಟಿ.ಕೆ.ಹಳ್ಳಿ ಘಟಕದಲ್ಲಿ ತೊಂದರೆ ಆಗಿದೆ. ಟಿ.ಕೆ.ಹಳ್ಳಿ ಕುಡಿಯುವ ನೀರಿನ ಘಟಕಕ್ಕೆ ನಾನು ಭೇಟಿ ನೀಡುತ್ತೇನೆ. ಈಗಾಗಲೇ BWSSB ಸಿಬ್ಬಂದಿ ಮತ್ತು ಎಂಜಿನಿಯರ್ಗಳು ಅಲ್ಲಿಗೆ ಹೋಗಿದ್ದಾರೆ. ಇಂದು ಸಂಜೆಯೊಳಗೆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಮಹದೇವವಪುರ, ಬೊಮ್ಮನಹಳ್ಳಿಯಲ್ಲಿ ಹೆಚ್ಚು ಮಳೆ ಆಗಿದೆ. ಬಿಬಿಎಂಪಿ ಕಮಿಷನರ್ ಜತೆಗೂ ಮಾತನಾಡಿದ್ದೇನೆ. ಎರಡು ಎಸ್ಡಿಆರ್ಎಫ್ ತಂಡವನ್ನು ಸ್ಥಳಕ್ಕೆ ಕಳಿಸಲು ಸೂಚಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆ: ಭಾಗಶಃ ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ
Published On - 11:20 am, Mon, 5 September 22