ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಐಪಿಎಲ್ ಬೆಟ್ಟಿಂಗ್(IPL Betting) ದಂಧೆಯಿಂದಾಗಿ ಇಡೀ ಕುಟುಂಬವೇ ಬೀದಿಗೆ ಬಿದ್ದಿದೆ. ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ಕಟ್ಟುವ ಪ್ರತಿಯೊಬ್ಬರೂ ಈ ಸುದ್ದಿಯನ್ನು ಓದಲೇ ಬೇಕು. ಇದು ಬೆಟ್ಟಿಂಗ್ ಭೂತಕ್ಕೆ ಸಿಲುಕಿ ಕುಟುಂಬವನ್ನೆ ಬೀದಿಗೆ ತಂದ ಮಹಾಪುರುಷನ ಕಥೆ.
ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಸೋತು ಪತಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಪತಿಯ ಆಸರೆಯಲ್ಲಿ ಜೀವನ ನಡೆಸುತ್ತಿದ್ದ ಹೆಂಡತಿ ಅನ್ನಪೂರ್ಣ ಮತ್ತು ಮಕ್ಕಳು ಈಗ ಅನಾಥರಾಗಿ ಬೀದಿಗೆ ಬಿದ್ದಿದ್ದಾರೆ. 20 ದಿನದ ಪುಟ್ಟ ಹಸುಗೂಸಿನೊಂದಿಗೆ ಬಾಣಂತಿ ಅನ್ನಪೂರ್ಣ ಅನ್ನ ನೀರಿಲ್ಲದೆ ನಡು ಬೀದಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ತಿನ್ನಲು ಆಹಾರವಿಲ್ಲದೆ, ಮಲಗಲು ಸ್ಥಳವಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ. ಜೊತೆಗೆ ಅನ್ನಪೂರ್ಣ ತಮ್ಮ ವಯೋ ವೃದ್ಧ ತಂದೆ, ಇಬ್ಬರು ಮಕ್ಕಳೊಂದಿಗೆ ಬೀದಿಯಲ್ಲೇ ಜೀವನ ನಡೆಸುವಂತಹ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ: Gandhada Gudi: ವಿಶೇಷಚೇತನ ಮಕ್ಕಳಿಗೆ ‘ಗಂಧದ ಗುಡಿ’ ಪ್ರದರ್ಶನ; ಸಹಾಯಕರ ನೆರವಿನಿಂದ ಸಾರಾಂಶ ತಿಳಿದ ಮಕ್ಕಳು
ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಮೈ ತುಂಬಾ ಸಾಲ ಮಾಡಿಕೊಂಡಿದ್ದ ಸುರೇಶ್, ಸಾಲಗಾರರ ಕಾಟ ತಾಳಲಾರದೆ ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಮೂರು ತಿಂಗಳ ಗರ್ಭಿಣಿ ಇರುವಾಗ್ಲೆ ಪತ್ನಿ ಅನ್ನಪೂರ್ಣಗೆ ಕೈ ಕೊಟ್ಟು ಸುರೇಶ್ ಎಸ್ಕೇಪ್ ಆಗಿದ್ದು ಹೊಟ್ಟೆಪಾಡಿಗಾಗಿ ಕುಣಿಗಲ್ ನಿಂದ ಮದ್ದೂರಿನ ಹೆಮ್ಮನಹಳ್ಳಿಗೆ ಅನ್ನಪೂರ್ಣ ವಲಸೆ ಬಂದಿದ್ದಾರೆ. ಆಗಿನಿಂದಲೂ ಬಟ್ಟೆ ವ್ಯಾಪಾರ, ಕೂಲಿ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗ ಅನ್ನಪೂರ್ಣಗೆ 20 ದಿನಗಳ ಹಿಂದೆಯಷ್ಟೇ ಡೆಲಿವರಿಯಾಗಿದ್ದು ಇರಲು ಮನೆಯಿಲ್ಲದೆ, ತಿನ್ನಲು ಅನ್ನವಿಲ್ಲದೆ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಹೆಮ್ಮನಹಳ್ಳಿ ಗ್ರಾಮಸ್ಥರು ಕೊಟ್ಟ ಊಟ ತಿಂಡಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಬಾಣಂತಿ ಅನ್ನಪೂರ್ಣ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
Published On - 9:09 am, Mon, 14 November 22