16 ಕೆರೆಗಳ ನಿರ್ಮಾತೃ ಮಳವಳ್ಳಿಯ ಕಲ್ಮನೆ ಕಾಮೇಗೌಡ ನಿಧನ: ಆಧುನಿಕ ಭಗೀರಥ ಎಂದಿದ್ದರು ನರೇಂದ್ರ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 17, 2022 | 9:23 AM

ಕಾಮೇಗೌಡರ ಕಾಯಕ ಮೆಚ್ಚಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್​ ಕಿ ಬಾತ್​’ನಲ್ಲಿ ಕಾಮೇಗೌಡರನ್ನು ಶ್ಲಾಘಿಸಿದ್ದರು.

16 ಕೆರೆಗಳ ನಿರ್ಮಾತೃ ಮಳವಳ್ಳಿಯ ಕಲ್ಮನೆ ಕಾಮೇಗೌಡ ನಿಧನ: ಆಧುನಿಕ ಭಗೀರಥ ಎಂದಿದ್ದರು ನರೇಂದ್ರ ಮೋದಿ
ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡ
Follow us on

ಮಂಡ್ಯ: 16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಜಿಲ್ಲೆಯ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ (86) ಸೋಮವಾರ (ಅ 17) ಮುಂಜಾನೆ ಅನಾರೋಗ್ಯದಿಂದ ನಿಧನರಾದರು. ಕಾಮೇಗೌಡರ ಕಾಯಕ ಮೆಚ್ಚಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್​ ಕಿ ಬಾತ್​’ನಲ್ಲಿ ಕಾಮೇಗೌಡರನ್ನು ಶ್ಲಾಘಿಸಿದ್ದರು. ಯೋಗ ದಿನಕ್ಕಾಗಿ ಮೈಸೂರಿಗೆ ಬಂದಿದ್ದ ಪ್ರಧಾನಿಯನ್ನು ಭೇಟಿಯಾಗುವ ಆಸೆಯನ್ನು ಕಾಮೇಗೌಡರು ವ್ಯಕ್ತಪಡಿಸಿದ್ದರು. ಆದರೆ ಅನಾರೋಗ್ಯದಿಂದ ಅದು ಸಾಧ್ಯವಾಗಿರಲಿಲ್ಲ. ಇಬ್ಬರು ಮಕ್ಕಳು ಇದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಕಾಮೇಗೌಡರನ್ನು ಗೌರವಿಸಿತ್ತು.

ಸ್ವಭಾತಃ ಸೂಕ್ಷ್ಮ ಮನಸ್ಸಿನ ಕಾಮೇಗೌಡರು ವೃತ್ತಿಯಲ್ಲಿ ಕುರಿಗಾಹಿ. ವೆಂಕಟಗೌಡ ಮತ್ತು ರಾಜಮ್ಮ ದಂಪತಿಯ ಪುತ್ರ ಕಾಮೇಗೌಡರು ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯಲಿಲ್ಲ. ತಾವಾಯ್ತು, ತಮ್ಮ ಪಾಡಾಯ್ತು ಎಂದು ಕೆಲಸ ಮಾಡಿಕೊಂಡಿದ್ದ ಕಾಮೇಗೌಡರಿಗೆ ಕುರಿಗಳ ಮೇಲಿನ ಪ್ರೀತಿಯೇ ಪರಿಸರ ಕಾಳಜಿಯನ್ನೂ ಬೆಳೆಸಿತು. ಜೂನ್ 28, 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್​ ಕಿ ಬಾತ್​’ನ 66ನೇ ಆವೃತ್ತಿಯಲ್ಲಿ ಕಾಮೇಗೌಡರ ಹೆಸರು ಪ್ರಸ್ತಾಪಿಸಿದ ನಂತರ ಇವರ ಹೆಸರು ಹೆಚ್ಚಿನ ಪ್ರವರ್ಧಮಾನಕ್ಕೆ ಬಂತು. ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮ ‘ಅಸೋಸಿಯೇಟೆಡ್​ ಪ್ರೆಸ್​’ ಸುದೀರ್ಘ ವರದಿಯನ್ನು ಪ್ರಕಟಿಸಿ ಕಾಮೇಗೌಡರ ಹೆಸರನ್ನು ದೇಶ-ವಿದೇಶಗಳಲ್ಲಿ ಹರಡಿತು.

‘ಬಾಯಾರಿದ ಪ್ರಾಣಿ-ಪಕ್ಷಿಗಳಿಗಾಗಿ ತಮ್ಮ ಸ್ವಂತ ಹಣದಿಂದ 16 ಕಟ್ಟೆಗಳನ್ನು ನಿರ್ಮಿಸಿರುವ ಕಾಮೇಗೌಡರು ಎಲ್ಲರಿಗೂ ಮಾದರಿ. ತಮ್ಮ ಕುರಿಗಳನ್ನು ಮೇಯಿಸಲು ಹೋಗಿದ್ದ ಕಾಮೇಗೌಡರಿಗೆ ನೀರಿನ ಮಹತ್ವದ ಅರಿವಾಯಿತು. ಕಠಿಣ ಪರಿಶ್ರಮ ಮತ್ತು ಬೆವರಿನಿಂದ ಜಲಕಾಯಕ ಮಾಡಿದವರು ಅವರು. ಈ ಕೆರೆಗಳಿಂದ ಸುತ್ತಮುತ್ತಲ ಪ್ರದೇಶದಲ್ಲಿ ಹಸಿರು ಆವರಿಸಿಕೊಂಡಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಪರಿಸರಕ್ಕಾಗಿ ಜೀವಮಾನವಿಡೀ ದುಡಿದ ಹಣವನ್ನು ಅವರು ಖರ್ಚು ಮಾಡಿದ್ದರು. ಕೊನೆಗಾಲದಲ್ಲಿ ಆಸರೆಗೊಂದು ಮನೆ, ಮಕ್ಕಳಿಗೆ ಕೆಲಸ, ಕೆರೆಗಳ ಅಭಿವೃದ್ಧಿಗೆ ಭೂಮಿ ಬೇಕು ಎಂದು ಹಂಬಲಿಸಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾಮೇಗೌಡರಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಒದಗಿತ್ತು. ಕಾಮೇಗೌಡರ ಆರೋಗ್ಯ ಪರಿಸ್ಥಿತಿ ಹದಗೆಟ್ಟಾಗ ಆರೋಗ್ಯ ಸುಧಾಕರ ಮುತುವರ್ಜಿ ವಹಿಸಿದ್ದರು. ಸ್ಥಳೀಯ ಆಡಳಿತ ಮತ್ತು ಗ್ರಾಮಸ್ಥರು ಕಾಮೇಗೌಡರ ಕಷ್ಟದ ಸಂದರ್ಭದಲ್ಲಿ ಸ್ಪಂದಿಸಿದ್ದರು.

ಕೆರೆ ನಿರ್ಮಿಸಬೇಕು ಎಂಬ ಪ್ರೇರಣೆ ಒದಗಿದ್ದು ಹೇಗೆ ಎಂಬ ಪ್ರಶ್ನೆಗೆ ಕಾಮೇಗೌಡರು ಅತ್ಯಂತ ಆಸ್ಥೆಯಿಂದ ಉತ್ತರ ಕೊಡುತ್ತಿದ್ದರು. ‘ನೋಡಿ ಸ್ವಾಮಿ ನಾನು ಕುರಿ ಮೇಯಿಸ್ತಿದ್ದ ಕುಂದೂರು ಬೆಟ್ಟದ ಸುತ್ತಮುತ್ತ ಎಲ್ಲೂ ನೀರು ಸಿಗ್ತಾ ಇರ್ಲಿಲ್ಲ. 20 ವರ್ಷಗಳ ಹಿಂದೆ ಗುಡ್ಡದ ಮೇಲಿದ್ದಾಗ ಬಾಯಾರಿಕೆಯಾಗಿ ಪರದಾಡಿದ್ದೆ. ಹತ್ತಿರದ ಮನೆಗೆ ಹೋಗಿ ನೀರು ಕೇಳಿ ಕುಡಿದು ಜೀವ ಉಳಿಸಿಕೊಂಡಿದ್ದೆ. ನಾನೇನೋ ನರಮನುಷ್ಯ ಹೀಗೆ ಮಾಡಿದೆ. ಆದ್ರೆ ಪ್ರಾಣಿಗಳ ಗತಿ ಏನು ಅನ್ನಿಸ್ತು. ಅದ್ಕೆ ಕೆರೆ ಮಾಡುವ ಅಂತ ಶುರು ಮಾಡಿದೆ’ ಎಂದು ಅಂದಿನ ಸಂದರ್ಭ ವಿವರಿಸುತ್ತಿದ್ದರು ಅವರು.

ಕ್ಯಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದುದನ್ನು ಕಂಡಿದ್ದ ಹಲವರು ಗೇಲಿ ಮಾಡಿದ್ದರು. ಕೆಲವರಂತೂ ಇವರಿಗೆ ಹುಚ್ಚು ಹಿಡಿದಿದೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ಪ್ರಕೃತಿಗೆ ಮಾತ್ರ ಕಾಮೇಗೌಡರ ಸಂಕಲ್ಪ ಅರ್ಥವಾಗಿತ್ತು. 16 ಕೆರೆಗಳಲ್ಲಿ ನೀರು ನಿಂತಿದ್ದಲ್ಲದೇ, ಸುಮಾರು 2000 ಗಿಡಗಳು ಮರಗಳಾಗಿ ಬೆಳೆದವು. ಪ್ರಧಾನಿ ಮೋದಿ ಕಾಮೇಗೌಡರ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿದ ನಂತರ, ಅಸೋಸಿಯೇಟೆಡ್ ಪ್ರೆಸ್​ ಸುದೀರ್ಘ ವರದಿ ಪ್ರಕಟಿಸಿದ ನಂತರ ಕಾಮೇಗೌಡರ ಹೆಸರು ಜನಜನಿತವಾಯಿತು.

ಇದನ್ನೂ ಓದಿ: ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ

ಮೋದಿ ಭೇಟಿಗೆ ಹಾತೊರೆದಿದ್ದ ಕಾಮೇಗೌಡರ ಮಾತು ಕೆಳಗಿನ ವಿಡಿಯೊದಲ್ಲಿದೆ. ಇದು ಮಾಧ್ಯಮಗಳಿಗೆ ಕಾಮೇಗೌಡರು ನೀಡಿದ್ದ ಕೊನೆಯ ಸಂದರ್ಶನ

 

 

Published On - 8:47 am, Mon, 17 October 22