ಕೆಆರ್​ಎಸ್ ಸುತ್ತಮುತ್ತ ಕಲ್ಲುಗಣಿಗಾರಿಕೆ: ಹೈಕೋರ್ಟ್​ನಲ್ಲಿ ಲೈಸೆನ್ಸ್ ಅಮಾನತು ಪ್ರಶ್ನಿಸಿದ 17 ಕ್ವಾರಿ ಮಾಲೀಕರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 12, 2022 | 6:16 PM

ಸರ್ಕಾರದ ನೊಟೀಸ್​ಗೆ ಗಣಿ ಮಾಲೀಕರು ಉತ್ತರಿಸಿದ ಮೂರು ವಾರಗಳ ಒಳಗೆ ಲೈಸೆನ್ಸ್ ಬಗ್ಗೆ ಸರ್ಕಾರ ನಿರ್ಧರಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತು.

ಕೆಆರ್​ಎಸ್ ಸುತ್ತಮುತ್ತ ಕಲ್ಲುಗಣಿಗಾರಿಕೆ: ಹೈಕೋರ್ಟ್​ನಲ್ಲಿ ಲೈಸೆನ್ಸ್ ಅಮಾನತು ಪ್ರಶ್ನಿಸಿದ 17 ಕ್ವಾರಿ ಮಾಲೀಕರು
ಕೆಆರ್​ಎಸ್ ಜಲಾಶಯ ಮತ್ತು ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ (ಕೆಆರ್​ಎಸ್) ಸುತ್ತಮುತ್ತ ಕಲ್ಲುಗಣಿಯಲ್ಲಿ ತೊಡಗಿದ್ದ 17 ಕಲ್ಲು ಕ್ವಾರಿಗಳ ಮಾಲೀಕರು ತಮ್ಮ ಲೈಸೆನ್ಸ್ ಅಮಾನತು ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಹೈಕೋರ್ಟ್​ ವಿಭಾಗೀಯ ಪೀಠದಲ್ಲಿ ಬುಧವಾರ (ಜ.12) ಕಲ್ಲುಗಣಿ ಮಾಲೀಕರ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭ ಸರ್ಕಾರದ ಪರವಾಗಿ ವಾದ ಮಂಡಿಸಿದ ಸರ್ಕಾರಿ ವಕೀಲ ಮಹೇಂದ್ರ, ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಧಕ್ಕೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ನೊಟೀಸ್​ಗೆ ಉತ್ತರಿಸಿದ ಮೂರು ವಾರಗಳ ಒಳಗೆ ಲೈಸೆನ್ಸ್ ಬಗ್ಗೆ ಸರ್ಕಾರ ನಿರ್ಧರಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತು.

ಮಂಡ್ಯ ಜಿಲ್ಲೆಯಲ್ಲಿ ಕಲ್ಲುಗಣಿಗಳಿಂದ ಕೆಆರ್​ಎಸ್​ಗೆ ಧಕ್ಕೆಯಾಗಿದೆ ಎಂಬ ಆರೋಪಗಳು ಗಂಭೀರವಾಗಿ ಕೇಳಿಬಂದಿತ್ತು. ಸಂಸದೆ ಸುಮಲತಾ ಮತ್ತು ಮಂಡ್ಯ ಜಿಲ್ಲೆಯ ಇತರ ಶಾಸಕರೊಂದಿಗೆ ಈ ಸಂಬಂಧ ಹಲವಾರು ಬಾರಿ ವಾಕ್ಸಮರವೂ ನಡೆದಿತ್ತು. ಸುಮಲತಾ ಅವರು ಗ್ರಾಮಗಳಲ್ಲಿ ಸಂಚರಿಸಿ ಕಲ್ಲುಗಣಿಗಳಿಂದ ಆಗುತ್ತಿರುವ ಅನಾಹುತದ ಬಗ್ಗೆ ಜನರ ಅಹವಾಲು ಆಲಿಸಿದ್ದರು.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಧಿಕಾರಿಗಳು ಕ್ವಾರಿಗಳ ಮೇಲೆ ದಾಳಿ ನಡೆಸಿದಾಗ ನಿಷೇಧಿತ ಸ್ಫೋಟಕಗಳು ಪತ್ತೆಯಾಗಿದ್ದವು. ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ 11 ಡಿಟೊನೇಟರ್​ಗಳು, 20 ಜೆಲಿಟಿನ್ ಕಡ್ಡಿಗಳು ಸಿಕ್ಕಿದ್ದವು.

ಬೇಬಿಬೆಟ್ಟದ ಅಕ್ರಮ ಗಣಿಗಾರಿಕೆ ಬಗ್ಗೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಾತನಾಡಿದ್ದ ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ, ಹಲವು ತಿಂಗಳುಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿಯಿದೆ. ಎಲ್ಲ ಅಧಿಕಾರಿಗಳಿಗೂ ಎಚ್ಚರಿಕೆ ಕೊಟ್ಟಿದ್ದೇನೆ. ಬೇಬಿಬೆಟ್ಟದಲ್ಲಿರುವ ಎರಡು-ಮೂರು ಗಣಿಗಳಿಗೆ ಬೇರೆ ಕಡೆ ಫ್ರಿ ಆಫ್ ಕಾಸ್ಟ್ ಅವಕಾಶ ಕೊಡಿ ಅಂತ ಡಿಸಿಯವರಿಗೆ ಹೇಳಿದ್ದೇನೆ. ಗಣಿಗಾರಿಕೆ ನಡೆಯಲೇಬೇಕು ಕಲ್ಲು ಜಲ್ಲಿ ಎಂ ಸ್ಯಾಂಡ್ ಬೇಕೇ ಬೇಕಾಗುತ್ತದೆ. ಅಧಿಕೃತವಾಗಿ ಅನುಮತಿ ಪಡೆದುಕೊಂಡವರು ಕ್ರಮಬದ್ದವಾಗಿ ನಡೆಸಲಿ. ಹಲವರು ರಾಯಲ್ಟಿ ಕಟ್ಟುತ್ತಿಲ್ಲ, ರಾಯಲ್ಟಿ ಸರಿಯಾಗಿ ಕಟ್ಟಿಕೊಂಡು ಹೋಗಬೇಕು ಎಂದು ಹೇಳಿದ್ದರು.

ನೂರು ಲಾರಿ ಜಲ್ಲಿ ಹೊಡೆದು ಐದು ಹತ್ತು ಲಾರಿಗೆ ರಾಯಲ್ಟಿ ಕಟ್ಟೋದು ತಪ್ಪು. ರಸ್ತೆಗಳು, ಪರಿಸರ ಹಾಳಾಗ್ತಿದೆ. ಎಸ್​ಪಿ ಮಟ್ಟದ ಅಧಿಕಾರಿಗಳಿಗೂ ಅಕ್ರಮ ಗಣಿ ಬಗ್ಗೆ ತೆಗೆದುಕೊಳ್ಳೋದಕ್ಕೆ ಹೇಳಿದ್ದೇವೆ. ಶಿವಮೊಗ್ಗ ಸ್ಪೋಟದ ತರಹ ಇಲ್ಲಿ ನಡೆದರೆ ಡ್ಯಾಂಗೆ ಎಫೆಕ್ಟ್ ಆಗತ್ತೆ ಎಂಬ ಭಯದ ವಾತಾವರಣ ಇದೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬೇಡವೇ ಬೇಡ. ಟೋಟಲ್ ಆಗಿ ಬೇಬಿ ಬೆಟ್ಟದ ಗಣಿಗಾರಿಕೆ ನಿಲ್ಲಬೇಕು. ಡ್ಯಾಂ ರಕ್ಷಣೆ‌ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಪಾದ ಯಾತ್ರೆಗೆ ಹೈಕೋರ್ಟ್‌ ಕೆಂಡಾಮಂಡಲ, ಪಾದ ಯಾತ್ರೆ ತಡೆಯಲು ಸರ್ಕಾರ ಅಸಮರ್ಥವಾಗಿದೆಯೇ ಎಂದು ಪ್ರಶ್ನೆ
ಇದನ್ನೂ ಓದಿ: Mekedatu Padayatra: ಹೈಕೋರ್ಟ್‌ ಆದೇಶ ನೀಡಿದ್ರೆ ಪಾದಯಾತ್ರೆ ನಿಲ್ಲಿಸುತ್ತೇವೆ: ಸಿದ್ದರಾಮಯ್ಯ ಹೇಳಿಕೆ