ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಾನದಲ್ಲಿ ಬೆತ್ತಲಾದ ಯುವಕ, ಸಿಬ್ಬಂದಿ ಕೈಗೆ ಸಿಗದೆ ಹುಚ್ಚಾಟ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ನಾಡಿನ ಪ್ರತಿಷ್ಠಿತ ಪುಣ್ಯ ಕ್ಷೇತ್ರಗಳಲ್ಲಿ ಒಂದು. ನಿನ್ನೆಯಿಂದ ಆರಂಭವಾಗಿರುವ ದನುರ್ಮಾಸದ ಪೂಜೆ ಮುಗಿಸಿದ್ದ ದೇವಾಲಯದ ಸಿಬ್ಬಂದಿ ರಾತ್ರಿ 9 ಗಂಟೆ ಸುಮಾರಿಗೆ ದೇವಾಲಯಿಂದ ಹೊರ ಹೋಗಲು ಸಿದ್ಧತೆ ನಡೆಸಿರುವಾಗಲೇ ದೇವಾಲಯಕ್ಕೆ ರಾಮ್ ಕುಮಾರ್ ಎಂಬ ಯುವಕ ಪ್ರವೇಶ ಮಾಡಿದ್ದಾನೆ.

ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಾನದಲ್ಲಿ ಬೆತ್ತಲಾದ ಯುವಕ, ಸಿಬ್ಬಂದಿ ಕೈಗೆ ಸಿಗದೆ ಹುಚ್ಚಾಟ
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನ
Edited By:

Updated on: Dec 17, 2021 | 2:55 PM

ಮಂಡ್ಯ: ಅದು ನಾಡಿನ ಹೆಸರಾಂತ ಪುಣ್ಯ ಕ್ಷೇತ್ರ. ಭೂಮಿ ಮೇಲಿನ ವೈಕುಂಠ ಎಂದೇ ಕರೆಯಲ್ಪಡುವ ಆ ಕ್ಷೇತ್ರಕ್ಕೆ ಪ್ರತೀ ನಿತ್ಯ ದೇಶದ ಮೂಲೆ ಮೂಲೆಯಿಂದಲೂ ಸಾವಿರಾರು ಭಕ್ತರು ಭೇಟಿ ನೀಡಿ ಭಗವಂತನ ಕೃಪೆಗೆ ಪಾತ್ರವಾಗುತ್ತಾರೆ. ಹೀಗೆ ಅಪಾರ ಜನರು ಆರಾಧಿಸುವ ಆ ಪವಿತ್ರ ಸ್ಥಳದಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ. ಮಾದಕ ವ್ಯಸನಿಯಾಗಿದ್ದ ಯುವಕನೊಬ್ಬ ದೇವಾಲಯಕ್ಕೆ ನುಗ್ಗಿದ್ದು ಗರ್ಭಗುಡಿಯಲ್ಲೇ ಬೆತ್ತಲೆಯಾಗಿ ಹುಚ್ಚಾಟ ಮೆರೆದಿದ್ದಾನೆ. ರಾತ್ರಿ ಪೂಜೆ ಮುಗಿದ ನಂತರ ದೇವಾಲಯದ ಒಳಗೆ ನುಗ್ಗಿದ್ದ ಆತ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ದೇವಸ್ಥಾನದಲ್ಲಿ ಪುಂಡಾಟ ನಡೆಸಿದ್ದು ಆತನ ಪುಂಡಾಟ ದೇವಾಲಯದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ನಾಡಿನ ಪ್ರತಿಷ್ಠಿತ ಪುಣ್ಯ ಕ್ಷೇತ್ರಗಳಲ್ಲಿ ಒಂದು. ನಿನ್ನೆಯಿಂದ ಆರಂಭವಾಗಿರುವ ದನುರ್ಮಾಸದ ಪೂಜೆ ಮುಗಿಸಿದ್ದ ದೇವಾಲಯದ ಸಿಬ್ಬಂದಿ ರಾತ್ರಿ 9 ಗಂಟೆ ಸುಮಾರಿಗೆ ದೇವಾಲಯಿಂದ ಹೊರ ಹೋಗಲು ಸಿದ್ಧತೆ ನಡೆಸಿರುವಾಗಲೇ ದೇವಾಲಯಕ್ಕೆ ರಾಮ್ ಕುಮಾರ್ ಎಂಬ ಯುವಕ ಪ್ರವೇಶ ಮಾಡಿದ್ದಾನೆ. ಇದ್ಯಾರಪ್ಪ ದೇವಾಲಯದ ಬಾಗಿಲು ಹಾಕುವ ವೇಳೆಗೆ ದೇವಸ್ಥಾನಕ್ಕೆ ಬರುತ್ತಿದ್ದಾನೆ ಎಂದು ಕೊಂಡು ಆತನನ್ನೇ ಹಿಂಬಾಲಿಸಿದ ದೇವಾಲಯದ ಭದ್ರತಾ ಸಿಬ್ಬಂದಿ ಆತನನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ದೇವಾಲಯದ ಒಳಭಾಗಕ್ಕೆ ಬಂದ ರಾಮ್ ಕುಮಾರ್ ನೇರವಾಗಿ ಚೆಲುವನಾರಾಯಣಸ್ವಾಮಿಯ ಮೂಲ ಮೂರ್ತಿ ಇರುವ ಗರ್ಭಗುಡಿಯ ಒಳಗೆ ನುಗ್ಗಲು ಯತ್ನಿಸಿದ್ದ. ಮೊದಲೇ ಮಾದಕ ವಸ್ತುವನ್ನ ಸೇವಿಸಿದ್ದ ಆತನನ್ನ ನಿಯಂತ್ರಿಸಲು ದೇವಾಲಯದ ಸಿಬ್ಬಂದಿ ಹರ ಸಾಹಸಪಟ್ಟಿದ್ದಾರೆ.

ಎಷ್ಟೇ ಪ್ರಯತ್ನ ಪಟ್ಟರೂ ಆತ ಅವರಿಂದ ತಪ್ಪಿಸಿಕೊಂಡು ಗರ್ಭಗುಡಿಯೊಳಗೆ ನುಗ್ಗಿದ್ದಾನೆ. ಅಲ್ಲಿಯೇ ಇದ್ದ ದೇವಾಲಯದ ಪ್ರಧಾನ ಅರ್ಚಕರು ಮತ್ತು ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ ಹೊರ ದಬ್ಬಲು ಯತ್ನಿಸಿದರೂ ಅವರಿಂದ ತಪ್ಪಿಸಿಕೊಂಡು ಹೊರ ಓಡಿ ಮತ್ತೆ ಗರ್ಭಗುಡಿ ಪ್ರವೇಶ ಮಾಡಿದ್ದಾನೆ. ಅಲ್ಲಿಂದ ಆತನನ್ನ ಎಳೆದು ತರುವ ಸಂದರ್ಭದಲ್ಲಿ ಆತ ತನ್ನ ಬಟ್ಟೆ ಬಿಚ್ಚಿ ದೇವರ ಮುಂದೆಯೇ ಬೆತ್ತಲಾಗಿ ಗರ್ಭಗುಡಿಯ ಬಾಗಿಲ ಬಳಿಯೇ ನಿಂತ ಘಟನೆ ನಡೆದಿದೆ. ಸದ್ಯ ಯುವಕನ ಹುಚ್ಚಾಟವನ್ನು ತಡೆಯಲಾಗದ ಸಿಬ್ಬಂದಿ ಕಡೆಗೂ ಆತನನ್ನು ದೇವಸ್ಥಾನದ ಹೊರಕ್ಕೆ ದಬ್ಬಿದ್ದಾರೆ.

ಅಮ್ ಆದ್ಮಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಯುವಕ
ದೇವರ ಮುಂದೆಯೇ ಬೆತ್ತಲಾಗಿ ಹುಚ್ಚಾಟ ನಡೆಸಿರುವ ರಾಮ್ ಕುಮಾರ್ ಮೇಲುಕೋಟೆಯ ನಿವಾಸಿಯೇ ಆಗಿದ್ದು ಅಮ್ ಆದ್ಮಿ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದಾನೆ ಎನ್ನಲಾಗಿದೆ. ಕಳೆದ ಹಲವು ದಿನಗಳಿಂದಲೂ ಮಾದಕ ವ್ಯಸನಿಯಾಗಿದ್ದ ರಾಮ್ ಕುಮಾರ್ ನಿನ್ನೆಯೂ ಮಾದಕ ಮತ್ತಿನಲ್ಲೇ ದೇವಸ್ಥಾನಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ದೇವಾಲಯದ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ. ಯಾಕಂದ್ರೆ ಆತ ದೇವಾಲಯಕ್ಕೆ ಬಂದ ಸಂದರ್ಭದಲ್ಲಿ ಏನೇನೋ ಕನವರಿಸುತ್ತಿದ್ದನಂತೆ. ಮಾತಿನ ಮೇಲೆ ಹಿಡಿತವಿಲ್ಲದೆ, ಬುದ್ದಿಯ ಮೇಲೂ ಹಿಡಿತವಿಲ್ಲದೆ ವರ್ತಿಸುತ್ತಿದ್ದ ಎಂದು ತಿಳಿಸಿದ್ದಾರೆ.

ಮೇಲುಕೋಟೆ ಎಂದರೆ ಭಕ್ತರ ಪಾಲಿನ ಆರಾಧ್ಯ ದೈವ ನೆಲೆಸಿರುವ ಭೂಮಿಯ ಮೇಲಿನ ವೈಕುಂಟ ಎಂದೇ ಖ್ಯಾತಿಯಾಗಿದೆ. ಇಲ್ಲೂ ಮಾದಕ ವಸ್ತುಗಳು ಸಿಕ್ತವೆ ಎನ್ನುವುದಾದರೆ ಹೇಗೆ ಎಂದು ಪ್ರಶ್ನಿಸುತ್ತಿರುವ ದೇವಾಲಯದ ಪರಿಚಾರಕರು ಪೊಲೀಸರು ಈ ಬಗೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡುವುದಾಗಿ ದೇವಾಲಯದ ಆಡಳಿತಾಧಿಕಾರಿ ಮಂಗಳಮ್ಮ ತಿಳಿಸಿದ್ದಾರೆ.

ಮೇಲುಕೋಟೆಯಲ್ಲಿನ ತಂಗಿಯಕೊಳದ ನೀರು ಮಲಿನ ಗೊಂಡು ಸುದ್ದಿಯಲ್ಲಿತ್ತು. ಇದಾದ ಬೆನ್ನಲ್ಲೇ ದೇಗುಲದ ಕಳಸ ಮುರಿದದ್ದು ಭಕ್ತರಲ್ಲಿ ಆತಂಕ ಉಂಟು ಮಾಡಿತ್ತು. ಆದ್ರೆ ಇದೀಗ ಯುವಕನ ಈ ಪುಂಡಾಟ ನಡೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇನ್ನಾದರೂ ದೇವಾಲಯದ ಸಿಬ್ಬಂದಿ ಇನ್ನಷ್ಟು ಭದ್ರತೆ ಕೈಗೊಳ್ಳುವ ಮೂಲಕ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಮನವಿ ಮಾಡಿದ್ದಾರೆ.

ವರದಿ: ರವಿ ಲಾಲಿಪಾಳ್ಯ, ಟಿವಿ9 ಮಂಡ್ಯ

ಇದನ್ನೂ ಓದಿ: ಶಾಸಕ ರಮೇಶ್ ಕುಮಾರ್ ಹೇಳಿಕೆಯಿಂದ ಮುಜುಗರಕ್ಕೀಡಾದ ಕಾಂಗ್ರೆಸ್; ಪಕ್ಷದ ನಾಯಕರಿಂದಲೂ ಖಂಡನೆ