ಮಂಡ್ಯ: XUV 700 ಕಾರಿನ ಆಸೆಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ರೈತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 18, 2023 | 7:58 AM

ಆನ್​ಲೈನ್ ಮೂಲಕ ವಸ್ತುಗಳನ್ನ ಖರೀದಿಸಿದಕ್ಕಾಗಿ ಲಕ್ಕಿ ಡ್ರಾದಲ್ಲಿ XUV 700 ಕಾರನ್ನ ಗೆದ್ದಿರುವುದಾಗಿ ನಂಬಿಸಿ 7 ಲಕ್ಷದ 23 ಸಾವಿರ ಪೀಕಿದ ಸೈಬರ್​ ಖದೀಮರು.

ಮಂಡ್ಯ: XUV 700 ಕಾರಿನ ಆಸೆಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ರೈತ
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಸಂಜೀವ್ ಗೌಡ ಎಂಬುವವರ ಪತ್ನಿ ನ್ಯೂ ಇಯರ್ ಆಫರ್​ನಲ್ಲಿ ಮಿಶೋ(Meesho)ಆ್ಯಪ್​ ಮೂಲಕ ಆನ್​ಲೈನ್​ಲ್ಲಿ ಕೆಲ ವಸ್ತುಗಳನ್ನ ಖರೀದಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಂಜೀವ್ ಗೌಡರ ಮನೆಗೆ ಪೋಸ್ಟಲ್ ಮೂಲಕ ಒಂದು ಕೂಪನ್​ ಕಳುಹಿಸಿದ್ದ ಸೈಬರ್ ಚೋರರು ಕೂಪನ್​ನನ್ನು ಸ್ಕ್ರ್ಯಾಚ್ ಮಾಡಿ ನೋಡಿದಾಗ ಮಹೇಂದ್ರ XUV 700 ಗೆದ್ದಿರುವುದಾಗಿ ಬಿಂಬಿಸಿದ್ದಾರೆ. ಲಕ್ಕಿ ಡ್ರಾದಲ್ಲಿ ನೀವು ಕಾರನ್ನ ಗೆದ್ದಿರುವುದಾಗಿ ಸಂಪರ್ಕಿಸಿದ್ದಾರೆ ಸೈಬರ್ ಖದೀಮರು.

ಕಾರು ಬೇಕಾ ಅಥವ ಹಣ ಬೇಕಾ ಎಂದು ಪ್ರಶ್ನಿಸಿದ್ದಾರೆ. ಹಣ ಬೇಕೆಂದು ಸಂಜೀವ ಗೌಡ ತಿಳಿಸಿದಾಗ 29 ಲಕ್ಷದ 60 ಸಾವಿರ ನಕಲಿ ಚೆಕ್​ನ್ನು ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ಹಣ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಕೆಲ ಚಾರ್ಜಸ್ ನೀಡಬೇಕೆಂದು ಪುಸಲಾಯಿಸಿದ್ದ ವಂಚಕರು ಅವರ ಮಾತನ್ನ ನಂಬಿ ಮನೆಯಲ್ಲಿದ್ದ ಚಿನ್ನಾಭರಣ ಗಿರವಿ ಇಟ್ಟು ಸೈಬರ್ ಚೋರರ ಖಾತೆಗೆ ಹಂತ ಹಂತವಾಗಿ 7ಲಕ್ಷದ 23 ಸಾವಿರ ಹಣ ಹಾಕಿದ್ದಾರೆ. ಪದೇ ಪದೇ ಹಣ ಪೀಕಿದ್ದರಿಂದ ಅನುಮಾನಗೊಂಡ ಸಂಜೀವ್ ಗೌಡ ಮಂಡ್ಯದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತ ಹಣವೂ ಇಲ್ಲದೆ ಅತ್ತ ಕಾರು ಸಿಗದೆ ಸಂಜೀವ್ ಗೌಡ ಹಾಗೂ ಆತನ ಪತ್ನಿ ಪರಿತಪ್ಪಿಸುತ್ತಿದ್ದಾರೆ. ಸದ್ಯ ಸೈಬರ್ ಚೋರರಿಗಾಗಿ ಪೊಲೀಸರಿಂದ ಶೋಧಕಾರ್ಯ ಆರಂಭ ಮಾಡಿದ್ದು, ಕೊಲ್ಕತ್ತಾದಿಂದ ಕರೆ ಮಾಡಿ ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:57 am, Wed, 18 January 23