ಮಂಡ್ಯ, ಫೆಬ್ರವರಿ 14: ಕೆಆರ್ಎಸ್ ಅಣೆಕಟ್ಟೆಯಿಂದ (KRS Dam) ಕೇವಲ ಐದಾರು ಕಿಲೋಮೀಟರ್ ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ (Babybetta) ಮತ್ತೆ ಕಲ್ಲು ಗಣಿಗಾರಿಕೆ (Mining) ಸದ್ದು ಮಾಡಲಿದೆಯೇ ಎಂಬ ಅನುಮಾನ ಇದೀಗ ಬಲವಾಗಿದೆ. ಮಂಡ್ಯದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ಗೆ ಸರ್ಕಾರ ಸದ್ದಿಲ್ಲದೆ ತಯಾರಿ ನಡೆಸಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ. ರೈತರ ವಿರೋಧದ ನಡುವೆಯೂ ಟ್ರಯಲ್ ಬ್ಲಾಸ್ಟಿಂಗ್ಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೆಆರ್ಎಸ್ ಅಣೆಕಟ್ಟೆಗೆ ಹಾನಿಯಾಗಬಹುದು ಎಂಬ ಕಾರಣದಿಂದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಲಾಗಿತ್ತು. ಈ ಹಿಂದಿನ ಬಿಜೆಪಿ ಸರ್ಕಾರ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿತ್ತು. ಡ್ಯಾಂ ಸುತ್ತಮುತ್ತ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಇತ್ತೀಚೆಗಷ್ಟೆ ಹೈಕೋರ್ಟ್ ಸಹ ಆದೇಶ ನೀಡಿತ್ತು. ಕೆಆರ್ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆಗೆ ನಿರ್ಬಂಧ ಹೇರಿ ಕರ್ನಾಟಕ ಹೈಕೋರ್ಟ್ ಜನವರಿ 8ರಂದು ಆದೇಶ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಆದೇಶ ನೀಡಿತ್ತು. ಈಗ ಕಾಂಗ್ರೆಸ್ ಸರ್ಕಾರದಿಂದ ಮತ್ತೆ ಟ್ರಯಲ್ ಬ್ಲಾಸ್ಟಿಂಗ್ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಮುಂದಿನ ತಿಂಗಳು ತಜ್ಞರ ತಂಡದಿಂದ ಬೇಬಿ ಬೆಟ್ಟ ಹಾಗೂ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ನಡೆಯಲಿದೆ. ಟ್ರಯಲ್ ಬ್ಲಾಸ್ಟ್ ನಂತರ ಸಿದ್ಧಪಡಿಸುವ ವರದಿ ಆಧರಿಸಿ ಗಣಿಗಾರಿಕೆಗೆ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಟ್ರಯಲ್ ಬ್ಲಾಸ್ಟ್ ಬಗ್ಗೆ ಸ್ವತಃ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ ನೀಡಿದ್ದಾರೆ.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಟ್ರಯಲ್ ಬ್ಲಾಸ್ಟಿಂಗ್ ಪರ ವಹಿಸಿರುವುದು ಅವರು ಗಣಿ ಮಾಲೀಕರ ಪ್ರಭಾವಕ್ಕೆ ಮಣಿದರೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮೇಲುಕೋಟೆ ಶಾಸಕ ದರ್ಶನ್ ಪೂರ್ಣ ಬೆಂಬಲ ನೀಡಿದ್ದಾರೆ. ಇದಕ್ಕೆ ರಾಜ್ಯ ರೈತಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಟ್ರಯಲ್ ಬ್ಲಾಸ್ಟಿಂಗ್ಗೆ ರೈತ ಸಂಘದ ವಿರೋಧ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಟ್ರಯಲ್ ಬ್ಲಾಸ್ಟ್ಗೆ ನಿರ್ಧರಿಸಲಾಗಿತ್ತು. ಆಗ ರೈತ ಸಂಘಧಿಂದ ಗೋಬ್ಯಾಕ್ ಚಳುವಳಿ ಮೂಲಕ ಟ್ರಯಲ್ ಬ್ಲಾಸ್ಟ್ ತಡೆಯುವಂತೆ ಮಾಡಲಾಗಿತ್ತು. ಸರ್ಕಾರ ಬದಲಾದರೂ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ರೈತ ಸಂಘ ಹೇಳಿದೆ.
ಇದನ್ನೂ ಓದಿ: ಕೆಆರ್ಎಸ್ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆ ನಿರ್ಬಂಧ: ಕರ್ನಾಟಕ ಹೈಕೋರ್ಟ್ ಆದೇಶ
ಶಾಸಕ ದರ್ಶನ್ ಪುಟ್ಟಣ್ಣಯ್ಯಗೂ ರೈತಸಂಘಕ್ಕೂ ಸಂಬಂಧ ಇಲ್ಲ. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಲು ಬಿಡುವುದಿಲ್ಲ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 am, Wed, 14 February 24