ಮಂಡ್ಯ, ಮೇ 10: ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ (Keragodu Hanuman Dhwaja) ತೆರವು ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹನುಮ ಧ್ವಜ ತೆರವುಗೊಳಿಸಿದ್ದನು ವಿರೋಧಿಸಿ ಹಿಂದೂ ಕಾರ್ಯಕರ್ತರು (Hindu Activists) ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತರಿಗೆ ಕೆರಗೋಡು ಠಾಣೆ ಪೊಲೀಸರು ನೋಟಿಸ್ (Notice) ಜಾರಿ ಮಾಡಿದ್ದಾರೆ. ಅಲ್ಲದೆ “ರೌಡಿ ಶೀಟ್ ತೆರೆಯುವ ಸಂಬಂಧ ಏಳು ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ಧ್ವಜ ಸ್ಥಂಭ ವಿಚಾರದಲ್ಲಿ ಅನ್ಯಕೋಮಿನ ಜನರನ್ನು ಹೆದರಿಸುವುದು, ಬೆದರಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಚೋದನೆ ನೀಡಿದ್ದೀರಿ. ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರೀಯವಾಗಿರುವುದರಿಂದ ಏಕೆ ನಿಮ್ಮ ಮೇಲೆ ಕರಗೋಡು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಬಾರದೆಂದು ನಿಮ್ಮ ಸಮಜಾಯಿಸಿಯನ್ನು ಈ ನೋಟಿಸ್ ತಲುಪಿದ ಏಳು ದಿನಗಳ ಒಳಗೆ ಠಾಣೆಗೆ ಹಾಜರಾಗಿ ಮಾಹಿತಿ ಸಲ್ಲಿಸಬೇಕು ಎಂದು ಕೆರಗೋಡು ಠಾಣೆ ಪೊಲೀಸರು ವಿಶ್ವ ಹಿಂದೂ ಪರಿಷತ್ನ ಮೈಸೂರು ಭಾಗದ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು, ಕಾರ್ತಿಕ್, ಹರೀಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಮೂವರ ವಿರುದ್ಧ ಗಲಭೆಗೆ ಪ್ರಚೋದನೆ ಆರೋಪದಡಿ ಕಲಂ 143, 341, 353, 149 ಸೆಕ್ಷನ್ ಅಡಿಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೆರಗೋಡು ಗ್ರಾಮಕ್ಕೆ ಬರ್ತಿಯಾ, ತಾಕತ್ ಇದ್ಯಾ?: ಶಾಸಕ ರವಿ ಗಣಿಗ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ವಿಹೆಚ್ಪಿ ಮುಖಂಡ
ಇನ್ನು ರೌಡಿ ಶೀಟ್ ತೆರೆಯುವ ಬಗ್ಗೆ ಪೊಲೀಸರು ನೋಟಿಸ್ ನೀಡಿರುವುದನ್ನು ಖಂಡಿಸಿ ವಕೀಲರು ಹಾಗೂ ಹಿಂದೂ ಕಾರ್ಯಕರ್ತರು ಇಂದು (ಮೇ 11) ಬೆಳಗ್ಗೆ 11 ಗಂಟೆಗೆ ಕೆರಗೋಡಿನಲ್ಲಿ ಪ್ರತಿಭಟನೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ವಿವಾದಿತ ಧ್ವಜಸ್ತಂಭದಿಂದ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಹೋರಾಟ ಹತ್ತಿಕ್ಕಲು ಮುಂದಾಗಿದೆ. ಪೊಲೀಸರ ಮೂಲಕ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ಮಾಡಲಿದ್ದಾರೆ.
ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನಪಿಗಾಗಿ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮಸ್ಥರು 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಿದ್ದರು. ಧ್ವಜ ಹಾರಿಸಿದ್ದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದಾಗಿದೆ. ಅಲ್ಲದೇ ಧ್ವಜ ಹಾರಿಸಿದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿ ತಾಲೂಕು ಪಂಚಾಯಿತಿಗೆ ದೂರು ನೀಡಿದ್ದರು. ದೂರಿನ್ವಯ ತಾಲೂಕು ಪಂಚಾಯಿತಿ ಅಧಿಕಾರಿಗಳು ಧ್ವಜವನ್ನು ತೆರವುಗೊಳಿಸಲು ಬಂದಿದ್ದರು. ಇದಿಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.
ಬಳಿಕ ಪೊಲೀಸರು ಗ್ರಾಮಕ್ಕೆ ಆಗಮಿಸಿ ಧ್ವಜ ತೆರವುಗೊಳಿಸಲು ಮುಂದಾದರು. ಆಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದರು. 144 ಸೆಕ್ಷನ್ ಜಾರಿಯಾದ ಬಳಿಕವೂ ಪ್ರತಿಭಟನಾಕಾರರು ಸ್ಥಳದಿಂದ ತೆರಳದ ಹಿನ್ನೆಲೆಯಲ್ಲಿ ಲಾಠಿ ಜಾರ್ಜ್ ಮಾಡಲಾಗಿತು. ಕೊನೆಗೂ ಪೊಲೀಸರು ಧ್ವಜ ತೆರವುಗೊಳಿಸಿದ್ದರು.
ಇದಾದ ಬಳಿಕ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಜನವರಿ 29 ರಂದು ಹನುಮ ಧ್ವಜ ಇಳಿಸಿದ್ದನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಕೆರಗೋಡಿನಿಂದ ಮಂಡ್ಯದವರೆಗೂ ಪಾದಯಾತ್ರೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ