ಕೆರಗೋಡು ಗ್ರಾಮಕ್ಕೆ ಬರ್ತಿಯಾ, ತಾಕತ್ ಇದ್ಯಾ?: ಶಾಸಕ ರವಿ ಗಣಿಗ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ವಿಹೆಚ್ಪಿ ಮುಖಂಡ
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಖಂಡಿಸಿ ಇಂದು ಮಂಡ್ಯ ನಗರ ಬಂದ್ಗೆ ಕರೆ ನೀಡಿದ ವಿಹೆಚ್ಪಿ ಬಜರಂಗದಳ ಪ್ರತಿಭಟನೆ ನಡೆಸುತ್ತಿದೆ. ಹಿಂದೂ ಕಾರ್ಯಕರ್ತರು ಪಾದರಕ್ಷೆ ಕಳಚಿಟ್ಟು ಹನುಮಾನ್ ಚಾಲೀಸ್ ಪಠಣೆ ಮಾಡಿದರು. ಪ್ರತಿಭಟನೆ ವೇಳೆ ಸ್ಥಳೀಯ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ವಿಹೆಚ್ಪಿ ಮುಖಂಡ ಬಸವರಾಜ್, ಇನ್ನು ಮುಂದೆ ಕೆರಗೋಡಿಗೆ ಬರುತ್ತೀಯಾ ಎಂದಿದ್ದಾರೆ.
ಮಂಡ್ಯ, ಫೆ.9: ಕೆರಗೋಡು (Keragodu) ಗ್ರಾಮದಲ್ಲಿ ಧ್ವಜ ತೆರವು ಖಂಡಿಸಿ ಮಂಡ್ಯ ನಗರ ಬಂದ್ ಹಿನ್ನೆಲೆ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ಶಾಸಕ ರವಿಕುಮಾರ್ ಗಣಿಗ (Ravikumar Ganiga) ವಿರುದ್ಧ ಹರಿಹಾಯ್ದ ವಿಹೆಚ್ಪಿ (VHP) ಮುಖಂಡ ಬಸವರಾಜು, ನಾಯಿ ಬಾಲವನ್ನ ಅಲುಗಾಡಿಸಬೇಕು, ಬಾಲ ನಾಯಿಯನ್ನ ಅಲುಗಾಡಿಸಲು ಆಗಲ್ಲ. ಲೋ ಎಂಎಲ್ಎ, ಸ್ಥಳೀಯ ಶಾಸಕ ಇನ್ಮುಂದೆ ಕೆರಗೋಡು ಗ್ರಾಮಕ್ಕೆ ಬರ್ತಿಯಾ? ಬರೋದಿಕ್ಕೆ ತಾಕತ್ತು ಇದ್ಯಾ ಎಂದರು.
ಮಂಡ್ಯ ಜಿಲ್ಲೆಯ ಜನ ಮದುವೆಗೆ ಹೋದರೂ ಮುಯ್ಯಿಹಾಕೋದು ಮರೆಯುವುದಿಲ್ಲ. ಹಾಗೆಯೇ ನಿಮ್ಮ ಲಾಟಿ ಏಟಿನ ದೌರ್ಜನ್ಯವನ್ನ ನಾವು ಮರೆಯುವುಲ್ಲ. ಮಂಡ್ಯ ಎಸ್ಪಿ ಲಾಠಿ ಚಾರ್ಜ್ ಮಾಡಿಸಿ ದೌರ್ಜನ್ಯ ಮಾಡುತ್ತಿದ್ದಾರೆ. ನೀವು ಇಲ್ಲೆ ಶಾಶ್ವತವಾಗಿ ಇರುವುದಿಲ್ಲ, ನೆನಪಿರಲಿ. ನಾವೇನು ಪಾಕಿಸ್ತಾನದ ಧ್ವಜ ಹಾಕಿದ್ದೇವಾ. ನಮ್ಮ ಧರ್ಮದ ಧ್ವಜ ಹಾಕೆದ್ದೇವೆ ಎಂದರು.
ಯಾವ ಉದ್ದೇಶಕ್ಕೆ ಧ್ವಜ ತೆರವು ಮಾಡಿದ್ದೀರಿ ಎಂದು ಮಂಡ್ಯ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದ ಬಸವರಾಜು, ತಾಕತ್ತಿದ್ದರೆ ಮಂಡ್ಯದ ಖಭ್ರಸ್ತಾನ್ ಬಳಿಯ ಒತ್ತುವರಿ ತೆರವು ಮಾಡಿ ಎಂದು ಸವಾಲು ಹಾಕಿದರು.ಶ್ರೀರಂಗಪಟ್ಟಣದ ಮೂಡಲ ಆಂಜನೇಯಸ್ವಾಮಿ ದೇವಾಲಯಕ್ಕೆ ನ್ಯಾಯ ಕೊಡಿ ಎಂದರು.
ಇದನ್ನೂ ಓದಿ: ಕೆರಗೋಡು ಹನುಮ ಧ್ಜಜ ವಿವಾದ: ಹಿಂದೂ ಪರ ಸಂಘಟನೆಗಳಿಂದ ಮಂಡ್ಯ ಬಂದ್, ಬಿಗಿ ಪೊಲೀಸ್ ಭದ್ರತೆ
ಕೇವಲ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತೀರಾ? ನೀವು ಗುಂಡು ಹಾರಿಸಿದರೂ ಅದೇ ಜಾಗದಲ್ಲಿ ನಾವು ಹನುಮಧ್ವಜ ಹಾರಿಸುತ್ತೇವೆ. ತಾಕತ್ತಿದ್ದರೆ ಬಂದು ತಡೆಯಿರಿ. ಸಿದ್ದರಾಮಯ್ಯ ಅಲ್ಲ ನಿಮ್ಮ ಪಪ್ಪು ರಾಹುಲ್ ಗಾಂಧಿ ಬಂದರೂ ನಮ್ಮನ್ನ ತಡೆಯಲು ಆಗಲ್ಲ. ಲಾಲ್ ಚೌಕ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು ನಾವು. ನಮಗಿಂತಲೂ ರಾಷ್ಟ್ರಧ್ವಜಕ್ಕೆ ಗೌರವ ನೀವು ಕೊಡುತ್ತೀರಾ? ನಮಗೆ ರಾಷ್ಟ್ರಧ್ವಜಕ್ಕೂ ಗೌರವ ಕೊಡುವುದು ಗೊತ್ತು ಎಂದರು.
ರಾಜ್ಯ ಆಳುತ್ತಿರುವವನ ಹೆಸರು ರಾಮ, ಬುದ್ಧಿ ಎಲ್ಲವೂ ರಾವಣನದ್ದು
ಭಜರಂಗ ದಳ ಪ್ರಾಂತ ಸಂಯೋಜಕ ಮುರುಳಿಕೃಷ್ಣ ಮಾತನಾಡಿ, ಧ್ವಜ ಇಳಿಸಿದವರಿಗೆ ಸಂದೇಶ ರವಾನೆಯಾಗಬೇಕು. ಇಲ್ಲಿ ಜಾತಿ, ಪಕ್ಷ ಇಲ್ಲ. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಹನುಮ, ಭಗವಾಧ್ವಜ ಹಾರಿಸುವ ಶಕ್ತಿ ಇದೆ. ಫೆ.14ರಂದು ಅಬುದಾಬಿಯಲ್ಲಿ ಹಿಂದೂ ಮಂದಿರ ನಿರ್ಮಾಣ ಆಗುತ್ತಿದೆ ಎಂದರು.
ಈ ರಾಜ್ಯ ಆಳುತ್ತಿರುವವನ ಹೆಸರು ಮಾತ್ರ ರಾಮ, ಬುದ್ಧಿ ಎಲ್ಲವೂ ರಾವಣನದ್ದು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮುರಳಿಕೃಷ್ಣ, ಸಿದ್ದರಾಮಯ್ಯ ಅವರು ಮುಸ್ಲಿಂರ ಓಲೈಕೆ ಮಾಡುತ್ತಿದ್ದಾರೆ. ಕೆರಗೋಡು ಗ್ರಾಮಸ್ಥರು ಹಾಕಿದ್ದ ಹನುಮ ಧ್ವಜ ಇಳಿಸುತ್ತಾರೆ. ಇನ್ನೂ ನೂರು ಕೇಸ್ ಹಾಕಿದರೂ ನಮ್ಮ ಸಂಕಲ್ಪ ಒಂದೇ. ನಮ್ಮ ಭಜರಂಗ ದಳ ಕೆರಗೋಡು ಜನರ ಜೊತೆ ಇರುತ್ತದೆ ಎಂದರು.
ದೇಶದ ಕಾನೂನು ಗೌರವಿಸಿ ಸುಮ್ಮನಿದ್ದೇವೆ. ಇಲ್ಲವಾದಲ್ಲಿ 10 ನಿಮಿಷದಲ್ಲೇ ಅದೇ ಸ್ಥಳದಲ್ಲಿ ಹನುಮ ಧ್ವಜ ಹಾರಿಸುತ್ತಿದ್ದೆವು. ಭಾವನೆಗಳ ಜೊತೆ ಚೆಲ್ಲಾಟ ಆಡುತ್ತೀರಾ? ಹನುಮ ಧ್ವಜ ಪ್ರಶ್ನಿಸುವವರು ಪೊಲೀಸ್ ಠಾಣೆ, ಶಾಸಕನ ಮನೆ ಬೆಂಕಿ ಹಾಕಿದಾಗ ಯಾಕೆ ಪ್ರಶ್ನೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.
ಮಂಡ್ಯ ಹಿಂದುತ್ವದ ಫ್ಯಾಕ್ಟರಿ
ರೈತರ ನಾಡು ಮಂಡ್ಯ. ಮಂಡ್ಯದ ಗಂಡು ಮಕ್ಕಳು ಇವತ್ತು ನಿಶ್ಚಯ ಮಾಡುತ್ತಾರೆ. ಮಂಗಳೂರು ಮಾತ್ರವಲ್ಲ, ಮಂಡ್ಯವನ್ನ ಹಿಂದುತ್ವದ ಫ್ಯಾಕ್ಟರಿ ಆಗಿ ತಯಾರು ಮಾಡುತ್ತೇವೆ. ತಾಕತ್ ಇದ್ದರೇ ತಡೆಯಿರಿ. ಇದು ಸಿಎಂ ಸಿದ್ದರಾಮಯ್ಯಗೆ ನೇರ ಸವಾಲ್ ಎಂದರು.
ಹನುಮ ಧ್ವಜ ವಿಜಯದ ಸಂಕೇತ. ಅದೇ ಜಾಗದಲ್ಲಿ ವಿಜಯದ ಸಂಕೇತದ ಹನುಮ ಧ್ವಜ ಹಾರಿಸುವುದೇ ನಮ್ಮ ಸಂಕಲ್ಪ. ನಾವು ಮನವಿ ಮಾಡುವ ಕಾಲದಲ್ಲಿ ಇಲ್ಲ. ಮಂಡ್ಯದ ಜನ ಆಗ್ರಹ ಮಾಡುತ್ತಿದ್ದೇವೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣದ ಕೆಲಸ ಖಂಡಿಸುತ್ತೇವೆ. ಮಂಡ್ಯ ಚಲೋಗೆ ಕರೆ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದರು.
ರಾಮನ ಹೆಸರಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ರಾವಣನ ವಿಚಾರ ಧಾರೆ ಹಂಚುತ್ತಿದ್ದಾರೆ. ಹಿಂದುತ್ವದ ವಿಚಾರ ಬಂದಾಗ ನಮ್ಮ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಾರೆ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಕೊಡುವ ಕಾಲ ಹತ್ತಿರ ಬರುತ್ತಿದೆ. ಯಾವುದೇ ತ್ಯಾಗ, ಹೋರಾಟ ಮಾಡಿ ಆದರೂ ಸಹಸ್ರ ಹನುಮ ಭಕ್ತರ ಮೂಲಕ ಹನುಮ ಧ್ವಜ ಹಾರಿಸುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ