ಮಂಡ್ಯ: ವಿಸಿ ನಾಲೆಗೆ ಈಜಲು ತೆರಳಿದ್ದ ಬೆಂಗಳೂರಿನ ಐವರು ನೀರುಪಾಲು
ಮಂಡ್ಯ ತಾಲೂಕಿನ ದೊಡ್ಡ ಕೊತ್ತಗೆರೆ ಗ್ರಾಮದ ಬಳಿ ವಿಸಿ ನಾಲೆಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ಮಂಗಳವಾರ ನಡೆದಿದೆ.
ಮಂಡ್ಯ: ತಾಲೂಕಿನ ದೊಡ್ಡ ಕೊತ್ತಗೆರೆ ಗ್ರಾಮದ ಬಳಿ ವಿಸಿ ನಾಲೆಯಲ್ಲಿ (VC Channel) ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ಮಂಗಳವಾರ ನಡೆದಿದೆ. ಮೃತ ದುರ್ದೈವಿಗಳು ಬೆಂಗಳೂರಿನ ನೀಲಸಂದ್ರ ಮೂಲದ ನಿವಾಸಿಗಳಾಗಿದ್ದು, ಮೆಹತಾ (10), ಅನಿಷಾ ಬೇಗಂ (34), ತಸ್ಮಿಯಾ (22), ಅಶ್ರಕ್ (28), ಅತೀಕ್ (22) ಎಂದು ಗುರುತಿಸಲಾಗಿದೆ. ಇವರು ರಂಜಾನ್ ಬಳಿಕ ರಜೆಗೆಂದು ಹಲ್ಲಗೆರೆಯ ಅಜ್ಜಿ ಮನೆಗೆ ಬಂದಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಮೂರು ಮೃತದೇಹಗಳನ್ನು ವಿಸಿ ನಾಲೆಯಿಂದ ಹೊರ ತೆಗೆಯಲಾಗಿದೆ. ಉಳಿದ ಎರಡು ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ರಾಯಚೂರಿನಲ್ಲಿಯೂ ಇಂಥದ್ದೇ ಘಟನೆ ಸಂಭವಿಸಿದ್ದು, ಜಿಲ್ಲೆಯ ಸಿರವಾರ ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬರ ಮೃತಪಟ್ಟಿದ್ದಾನೆ. ಮೃತನನ್ನು ನವಾಜ್(13) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಟಿಪ್ಪರ್ ಲಾರಿ ಡಿಕ್ಕಿ, ಬೈಕ್ ಸವಾರ ದುರ್ಮರಣ
ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ ಬಳಿ ಟಿಪ್ಪರ್ ಲಾರಿ ಡಿಕ್ಕಿಯಾಗಿ ಓರ್ವ ಸವಾರ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ಅಪಘಾತದ ಬಳಿಕ ಟಿಪ್ಪರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರನ್ನು ರಾಯಚೂರು ಮೂಲದ ರಫೀಕ್ (20) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೇಂಟರ್ ಆಗಿದ್ದ ರಫೀಕ್ ಯಶವಂತಪುರದಲ್ಲಿ ವಾಸವಿದ್ದರು. ಬೆಳಗ್ಗೆ ಮನೆಗೆ ಪೇಂಟಿಂಗ್ ಮಾಡಲು ತೆರಳುತ್ತಿದ್ದರು. ಆ ಸಂದರ್ಭ ಅಪಘಾತ ಸಂಭವಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ