
ಮಂಡ್ಯ, ನವೆಂಬರ್ 18: ಜಿಲ್ಲೆಯ ಶಿವನಸಮುದ್ರದ ಬಳಿಯ ನಾಲೆಯಲ್ಲಿ (Canal) ಮೂರು ದಿನ ಸಿಲುಕಿ ಪರದಾಡಿದ್ದ ಕಾಡಾನೆಯನ್ನು (Wild Elephant) ಸತತ ಕಾರ್ಯಾಚರಣೆ ಬಳಿಕ ಇದೀಗ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕ್ರೇನ್ ಮೂಲಕ ನಾಲೆಯಿಂದ ಕಾಡಾನೆಯನ್ನು ಮೇಲೆತ್ತಿದ್ದಾರೆ. ಸದ್ಯ ಚಿಕಿತ್ಸೆ ನೀಡಿ ಹಲಗೂರು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.
10 ರಿಂದ 15 ವರ್ಷ ಪ್ರಾಯದ ಕಾಡಾನೆ ಆಹಾರ ಅರಸಿ ಬಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವವಸಮುದ್ರ ಬಳಿಯ ನಾಲೆಗೆ ಬಿದ್ದಿದೆ. ಖಾಸಗಿ ಪವರ್ ಸ್ಟೇಷನ್ಗೆ ನೀರು ಸರಬರಾಜು ಮಾಡುವ ನಾಲೆಯಲ್ಲೇ 3 ದಿನದಿಂದ ಸಿಲುಕಿತ್ತು. ಸ್ಥಳದಲ್ಲೇ ಬೀಡುಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಾಡಾನೆಗೆ ಆಹಾರ ನೀಡಿದ್ದರು.
ಇದನ್ನೂ ಓದಿ: ಚಾಮರಾಜನಗರ ತಮಿಳುನಾಡು ಗಡಿ ದಿಂಬಂ ಘಾಟ್ನಲ್ಲಿ ಕಾಡಾನೆ ಉಪಟಳ: ವಿಡಿಯೋ ವೈರಲ್
ನಾಲೆಯಿಂದ ಆನೆಯನ್ನ ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ನಿನ್ನೆ ಪ್ರಯತ್ನ ಪಟ್ಟಿದ್ದರು. ಆದರೆ ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಚರಣೆಗೆ ತೊಡಕಾಗಿತ್ತು. ಇಂದು ನಾಲೆಯ ನೀರನ್ನು ತಗ್ಗಿಸಿ ಕಾರ್ಯಚರಣೆ ಮಾಡಲಾಗಿದೆ.
ಮೊದಲಿಗೆ ಪಟಾಕಿ ಸಿಡಿಸಿ ತಾನಾಗಿಯೇ ಕಾಡಾನೆ ಮೇಲಕ್ಕೆ ಬರುವಂತೆ ಮಾಡಲಾಗಿದೆ. ಆದರೆ ಅದು ಸಾಧ್ಯವಾಗಿಲ್ಲ. ಇನ್ನು ಅರಣ್ಯ ಇಲಾಖೆ ಇಟ್ಟಿರುವ ಕಂಟೇನರ್ನ್ನು ಕಾಡಾನೆ ದೂಡಿದೆ. ಬಳಿಕ ಅರಿವಳಿಕೆ ಚುಚ್ಚುಮದ್ದು ನೀಡಲಾಗಿದೆ. ಚುಚ್ಚುಮದ್ದು ನೀಡುತ್ತಿದ್ದಂತೆ ಕಾಡಾನೆ ಕೂಗಾಡಿ ಆರ್ಭಟಿಸಿದೆ.
2 ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಕಾಡಾನೆ ಪ್ರಜ್ಞೆತಪ್ಪಿ ನಾಲೆಯಲ್ಲೇ ಕುಸಿದುಬಿದ್ದಿದೆ. ಬಳಿಕ ಸಿಬ್ಬಂದಿ ನಾಲೆಗೆ ಇಳಿದು ಕಾಡಾನೆಯ ಕಾಲುಗಳಿಗೆ ಬೆಲ್ಟ್ ಕಟ್ಟಿ ಕಬ್ಬಿಣದ ಮ್ಯಾಟ್ ಮೇಲೆ ಮಲಗಿಸಿ ಕ್ರೇನ್ ಮೂಲಕ ನಾಲೆಯಿಂದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆತ್ತಿದ್ದಾರೆ.
ಇದನ್ನೂ ಓದಿ: ವಿರಾಜಪೇಟೆ: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ಸೊಂಡಿಲಿನಿಂದ ಎತ್ತಿ ರಕ್ಷಿಸಿದ ಕಾಡಾನೆ ಹಿಂಡು
ಸುರಕ್ಷಿತವಾಗಿ ಮೇಲೆತ್ತಿ ಲಾರಿ ಮೂಲಕ ಸ್ಥಳಾಂತರಿಸಿದ್ದಾರೆ. ಸದ್ಯ ಕಾಡಾನೆಗೆ ಚಿಕಿತ್ಸೆ ನೀಡಿ ಹಲಗೂರು ಅರಣ್ಯ ಪ್ರದೇಶಕ್ಕೆ ಅರಣ್ಯ ಸಿಬ್ಬಂದಿ ಬಿಟ್ಟಿದ್ದಾರೆ. ಆ ಮೂಲಕ ಕಾಡಾನೆ ರಕ್ಷಣಾ ಕಾರ್ಯಾಚರಣೆ ಯಶಸ್ವಿ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.