ಮಂಡ್ಯ, ನವೆಂಬರ್ 24: ಸೊಸೆ ಸಾವಿನಿಂದ ನೊಂದು ಅತ್ತೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ (death) ಹೃದಯವಿದ್ರಾವಕ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅನಾರೋಗ್ಯದಿಂದ ನಿನ್ನೆ ಸಂಜೆ ಸುಶೀಲಾ(42) ಮೃತಪಟ್ಟರೆ, ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹುಚ್ಚಮ್ಮ(75) ಸಾವನ್ನಪ್ಪಿದ್ದಾರೆ. ಅತ್ತೆ-ಸೊಸೆ ಸಾವಿನಿಂದ ಕುಟುಂಬ ದುಃಖದಲ್ಲಿ ಮುಳುಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಪ್ರವಾಸಿಗರ ಕಾರುಗಳ ನಡುವೆ ಅಪಘಾತ ಸಂಭವಿಸಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರು ಸವಾರರು ಗಾಯಗೊಂಡಿದ್ದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯಿಂದಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತ್ತಿದ್ದು, ಪ್ರಯಾಣಿಕರು ಪರದಾಡಿದ್ದಾರೆ. ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳೀಯರು ಮತ್ತು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಕೋಲಾರ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಕೋಲಾರ ಹೊರವಲಯದ ಟಮಕ ಬಳಿ ನಡೆದಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಸುಮಾರು 65 ವರ್ಷದ ಹಾಗೂ 35 ವರ್ಷದ ವ್ಯಕ್ತಿಗಳು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ರಾಮನಗರ: ಹೊತ್ತಿ ಉರಿದ ಕಾರು ಕೇಸ್ಗೆ ಟ್ವಿಸ್ಟ್! ದಂಪತಿ ಮೇಲೆ ಹಲ್ಲೆ, ದರೋಡೆ
ಕೋಲಾರ ಕಡೆಯಿಂದ ಮುಳಬಾಗಿಲು ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಅಪಚಿತ ವಾಹನ ಪತ್ತೆಗೆ ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ.
ತುಮಕೂರು: ತಾಲೂಕಿನ ಓಬಳಾಪುರ ಬಳಿ ಬೈಕ್ ಮತ್ತು ಓಮ್ನಿ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಓಮ್ನಿಯಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ತುಮಕೂರು ಕಡೆಯಿಂದ ಬೈಕ್ ತೆರಳುತ್ತಿದ್ದು, ಕೊರಟಗೆರೆ ಕಡೆಯಿಂದ ಓಮ್ನಿ ಕಾರು ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ನೆಲಮಂಗಲ: ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ರಶ್ಮಿ(25) ನೇಣಿಗೆ ಶರಣಾಗಿದ್ದಾರೆ. 7 ವರ್ಷದ ಹಿಂದೆ ತುಮಕೂರಿನ ಮಂಜುನಾಥ್ ಜೊತೆ ವಿವಾಹವಾಗಿತ್ತು. ಮಾದನಾಯಕನಹಳ್ಳಿಯಲ್ಲಿ ಮಂಜುನಾಥ್ ಕುಟುಂಬ ವಾಸವಿದ್ದರು. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಆಸ್ಪತ್ರೆಗೆ ಮೃತದೇಹ ಸ್ಥಳಾಂತರಿಸಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.