ಮಂಡ್ಯ, ಡಿಸೆಂಬರ್ 12: ಸರ್ಕಾರದ ನಿರ್ಲಕ್ಷ್ಯದಿಂದ ಅಕ್ಕಿಯ (Rice) ಕೃತಕ ಅಭಾವ ಸೃಷ್ಟಿಯಾಗಲಿದೆಯೇ ಎಂಬ ಅನುಮಾನ ಇದೀಗ ಸೃಷ್ಟಿಯಾಗಿದೆ. ಭತ್ತಕ್ಕೆ (Paddy) ಬೆಂಬಲ ಬೆಲೆ ಕಡಿಮೆ ಇದೆ. ಇಷ್ಟೇ ಅಲ್ಲದೆ, ಭತ್ತ ಖರೀದಿ ಕೇಂದ್ರವನ್ನು ಸರ್ಕಾರ ಇನ್ನೂ ಆರಂಭಿಸಿಲ್ಲ. ಹೀಗಾಗಿ ಮಂಡ್ಯ (Mandya) ಜಿಲ್ಲೆಯ ರೈತರು ದಲ್ಲಾಳಿಗಳಿಗೆ ಭತ್ತ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಅಕ್ಕಿಯ ಕೃತಕ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ಸರ್ಕಾರ, ಜಿಲ್ಲಾಡಳಿತದ ನಿರ್ಲಕ್ಷ್ಯದ ಪರಿಣಾಮ ಜಿಲ್ಲೆಯ ರೈತರು ಬೆಳೆದ ಭತ್ತ ದಲ್ಲಾಳಿಗಳ ಪಾಲಾಗುತ್ತಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತವರು ಜಿಲ್ಲೆಯಲ್ಲಿಯೇ ಅನ್ನದಾತರು ದಲ್ಲಾಳಿಗಳ ಮೊರೆಹೋಗುವಂತಾಗಿದೆ.
ಒಂದೆಡೆ ಜಿಲ್ಲೆಯಲ್ಲಿ ಭತ್ತ ಕಟಾವು ಆರಂಭವಾಗಿದೆ. ಆದರೆ, ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದೇ ಇಲ್ಲ. ಬಯೋಮೆಟ್ರಿಕ್ ನೆಪವೊಡ್ದಿ ಮಂಡ್ಯ ಜಿಲ್ಲಾಡಳಿತ ಭತ್ತ ಖರೀದಿ ಕೇಂದ್ರ ಆರಂಭಿಸಿಲ್ಲ. ಮತ್ತೊಂದೆಡೆ ಭತ್ತಕ್ಕೆ ಕಡಿಮೆ ಬೆಂಬಲ ಬೆಲೆಯೂ ನಿಗದಿ ಮಾಡಲಾಗಿದೆ. ಇದರ ಲಾಭ ಪಡೆಯುತ್ತಿರುವ ದಲ್ಲಾಳಿಗಳು ಸರ್ಕಾರದ ಬೆಂಬಲ ಬೆಲೆಗಿಂತಲೂ ಹೆಚ್ಚಿನ ಬೆಲೆ ನೀಡಿ ಭತ್ತ ಖರೀದಿಸುತ್ತಿದ್ದಾರೆ.
ಎ ಗ್ರೇಡ್ ಭತ್ತಕ್ಕೆ ಸರ್ಕಾರ 2203 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಅತ್ತ ದಪ್ಪ ಭತ್ತಕ್ಕೆ 2250 ರೂ, ಸಣ್ಣ ಭತ್ತಕ್ಕೆ 3000 ರೂ.ರಂತೆ ದಲ್ಲಾಳಿಗಳು ರೈತರಿಂದ ಖರೀದಿ ಮಾಡುತ್ತಿದ್ದಾರೆ. ಪ್ರತೀ ಬಾರಿಯೂ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಭತ್ತ ಖರೀದಿಸುತ್ತಿದ್ದ ದಲ್ಲಾಳಿಗಳು ಈ ಬಾರಿಯೂ ಖರೀದಿ ಮಾಡಿ ಸಂಗ್ರಹಿಸಿಡುವ ತಂತ್ರ ಅನುಸರಿಸುತ್ತಿದ್ದಾರೆ.
ಅಕ್ಕಿ ಬೆಲೆ ಹೆಚ್ಚಾಗಿರುವ ಜೊತೆಗೆ ಬೇಸಿಗೆ ಬೆಳೆಗೆ ನೀರಿಲ್ಲದೇ ಇರುವುದರಿಂದ ಹೆಚ್ಚಿನ ಹಣ ಕೊಟ್ಟು ದಲ್ಲಾಳಿಗಳು ಭತ್ತ ಖರೀದಿಸುತ್ತಿದ್ದಾರೆ. ರೈತರೂ ಸಹ ಅನಿವಾರ್ಯವಾಗಿ ದಲ್ಲಾಳಿಗಳಿಗೆ ಭತ್ತ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಕುರಿತ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ
ಈ ಮಧ್ಯೆ, ಸರ್ಕಾರ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸುವ ಜೊತೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಜಿಲ್ಲಾಡಳಿತ 13 ಭತ್ತ ಖರೀದಿ ಕೇಂದ್ರಕ್ಕೆ ಸ್ಥಳ ನಿಗದಿ ಮಾಡಿದೆ. ಆದರೆ, ಹತ್ತು ದಿನಗಳ ಹಿಂದೇಯೇ ಆರಂಭಗೊಳ್ಳಬೇಕಾದ ಖರೀದಿ ಕೇಂದ್ರ ಇನ್ನೂ ಆರಂಭವಾಗಿಲ್ಲ. ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ಕೊಯ್ಲು ಹಾಗೂ ಮಾರಾಟ ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:28 am, Tue, 12 December 23