ಸದನದಲ್ಲಿ ಪ್ರತಿಭಟನೆ ಮುಂದುವರಿಸಿದ ವಿಪಕ್ಷ ಬಿಜೆಪಿ, ನನ್ನ ಹೇಳಿಕೆಗೆ ಬದ್ಧ ಎಂದ ಜಮೀರ್
Zameer Ahmed Khan Speaker Remark : ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಬಿಜೆಪಿ ಧರಣಿ ಮುಂದುವರೆಸಿಸದೆ. ಸಚಿವ ಸ್ಥಾನದಿಂದ ಜಮೀರ್ ಅಹಮ್ಮದ್ ಅವರನ್ನು ವಜಾ ಮಾಡಬೇಕೆಂದು ವಿಪಕ್ಷ ಪಟ್ಟು ಹಿಡಿದಿದೆ. ಇನ್ನು ಇತ್ತ ಜಮೀರ್ ತಮ್ಮ ಹೇಳಿಕೆಗೆ ಬದ್ಧ ಎಂದು ಗುಡುಗಿದ್ದಾರೆ. ಅಷ್ಟಕ್ಕೂ ಜಮೀರ್ ಹೇಳಿದ್ದೇನು ಎನ್ನುವುದನ್ನು ಅವರೇ ಹೇಳಿದ್ದಾರೆ ನೋಡಿ.
ಬೆಳಗಾವಿ, (ಡಿಸೆಂಬರ್ 11): ಸಚಿವ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ಅವರು ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕರ್ನಾಟಕ ಸ್ಪೀಕರ ಸ್ಥಾನದ ಬಗ್ಗೆ ಮಾತನಾಡಿರುವುದಕ್ಕೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದಲ್ಲಿ ಅಧಿವೇಶನದಲ್ಲಿ ಧರಣಿ ಮುಂದುವರೆಸಿದೆ. ಸ್ಕೀಕರ್ ಸ್ಥಾನಕ್ಕೆ ಅಪಮಾನ ಮಾಡಿದ ಜಮೀರ್ ಅಹಮ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದೆ. ಆದ್ರೆ, ಇತ್ತ ಜಮೀರ್ ಅಹಮ್ಮದ್ ಮಾತ್ರ ತಮ್ಮ ಹೇಳಿಕೆ ಬದ್ಧ ಎಂದು ಗುಡುಗಿದ್ದಾರೆ. ಅಷ್ಟಕ್ಕೂ ಜಮೀರ್ ಹೇಳಿದ್ದೇನು? ವಿಪಕ್ಷ ಹೇಳವುದೇನು? ಇಲ್ಲಿದೆ ನೋಡಿ.
ಜಮೀರ್ ಹೇಳಿದ್ದೇನು?
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್, ನನ್ನ ಹೇಳಿಕೆಗೆ ನಾನು ಬದ್ಧ. ಇದ್ದಕ್ಕಿದ್ದಂತೆ ಈ ವಿಷಯ ಎತ್ತಿಕೊಳ್ಳುವುದು ಏನಿತ್ತು? ನಾನು ಏನು ತಪ್ಪು ಮಾತಾಡಿದ್ದೇನೆ? ಹೈದರಾಬಾದ್ ಸಭೆಯಲ್ಲಿ ಯಾರೋ ಒಬ್ಬ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಅವಕಾಶ ಕೊಡಲ್ಲ ಎಂದು ಹೇಳಿದರು. ಆಗ ನಿನ್ನ ತಪ್ಪು ಭಾವನೆಯಿದೆ ಕರ್ನಾಟಕದಲ್ಲಿ 17 ಜನರಿಗೆ ಟಿಕೆಟ್ ಕೊಟ್ಟಿದ್ದಾರೆ, ಅದರಲ್ಲಿ ಒಂಬತ್ತು ಜನ ಗೆದ್ದಿದ್ದಾರೆ. 9ರಲ್ಲಿ ಐದು ಜನರಿಗೆ ಅಧಿಕಾರ ಕೊಟ್ಟಿದ್ದಾರೆ. ನನ್ನ, ರಹೀಮ್ ಖಾನ್ ಅವರನ್ನು ಮಂತ್ರಿ ಮಾಡಿದ್ದಾರೆ. ಸಲೀಂ ಅಹ್ಮದ್ ಅವರನ್ನು ಚೀಫ್ ವಿಪ್ ಮಾಡಿದ್ದಾರೆ, ನಜೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ, ಕರ್ನಾಟಕದಲ್ಲಿ ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಸ್ಪೀಕರ್ ಅವರಿಗೆ ನನ್ನನ್ನು ಸೇರಿದಂತೆ ಬಿಜೆಪಿ ಅವರು ನಮಸ್ಕಾರ ಮಾಡಬೇಕು ಎಂದು ಹೇಳಿದ್ದೇನೆ. ಇದು ಹೇಗೆ ಅಪಮಾನ ಆಗುತ್ತದೆ? ಎಂದು ಪ್ರಶ್ನಿಸಿದರು.
ಪೀಠಕ್ಕೆ ಎಲ್ಲರೂ ನಮಸ್ಕಾರ ಮಾಡಲೇಬೇಕು ತಾನೇ? ಕಾಂಗ್ರೆಸ್ ಪಕ್ಷ ಸ್ಪೀಕರ್ ಸ್ಥಾನ ಕೊಟ್ಟಿದೆ. ಯಾರೇ ಇದ್ದರೂ ಪೀಠಕ್ಕೆ ನಮಸ್ಕಾರ ಮಾಡಲೇಬೇಕು ತಾನೇ? ಅಂತಹ ಸ್ಥಾನ ಕಾಂಗ್ರೆಸ್ ಕೊಟ್ಟಿದೆ ಎಂದು ಹೇಳಿದ್ದೇನೆ. ಹಿಂದುಗಳು ನಮಸ್ಕಾರ ಮಾಡಬೇಕು ಎಂದು ನಾನು ಹೇಳಿದ್ದೀನಾ? ಬಿಜೆಪಿ ಅವರಿಗೆ ಯಾವ ವಿಷಯ ಇರಲಿಲ್ಲ. ಹಾಗಾಗಿ ಇವತ್ತು ಈ ವಿಷಯ ತೆಗೆದುಕೊಂಡಿದ್ದಾರೆ. ಇದಕ್ಕೆ ಸ್ಪಷ್ಟನೆ ಕೊಡಲು ನಾನು ಸಿದ್ದವಾಗಿದ್ದೇನೆ. ಅದನ್ನು ಕೇಳಲು ಬಿಜೆಪಿಯವರು ರೆಡಿಯಾಗಿಲ್ಲ. ಬಿಜೆಪಿಯಲ್ಲಿ ಗೊಂದಲ ಇದ್ದು, ಹೊಂದಾಣಿಕೆಯಿಲ್ಲ. ಹೀಗಾಗಿ ಅವರ ಹೈಕಮಾಂಡ್ ನಿಂದ ಸೂಚನೆ ಬಂದಿದೆ. ಆದ್ದರಿಂದ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ನಾನೇನೂ ತಪ್ಪು ಹೇಳಿಲ್ಲ ಎಂದರು.
ವಿಪಕ್ಷ ನಾಯಕ ಅಶೋಕ್ ಹೇಳುವುದೇನು?
ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿ, ಕರ್ನಾಟಕದ ಇತಿಹಾಸದಲ್ಲಿ ಸ್ಪೀಕರ್ ಸ್ಥಾನದ ಬಗ್ಗೆ ಅಗೌರವವಾಗಿ ಹೇಳಿದ್ರೆ ಅದು ಕಾಂಗ್ರೆಸ್ನ ಈ ಸಿದ್ದರಾಮಯ್ಯ ಸರ್ಕಾರದಲ್ಲಿ. ಸಂವಿಧಾನ ಹೇಗೆ ಗೌರವಿಸಬೇಕು. ಸಂವಿಧಾನ ಆಶೋತ್ತರಗಳನ್ನು ಎಲ್ಲವನ್ನೂ ಮೀರಿ ಅವರ ನಡವಳಿಕ ಬಗ್ಗೆ ಸ್ಪೀಕರ್ ಬೋಧನೆ ಮಾಡಿದ್ರು. ಸ್ಪೀಕರ್ ಸ್ಥಾನ ನ್ಯಾಯಾಧೀಶರ ಸ್ಥಾನ. ಎಲ್ಲರನ್ನೂ ಮೀರಿದ ಸ್ಥಾನ ಸ್ಪೀಕರ್ ಸ್ಥಾನ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಗೌರವ ಸ್ಥಾನ ನೀಡಿದ್ದಾರೆ. ಸ್ಪೀಕರ್ ಬಂದಾಗ ಎದ್ದು ಗೌರವ ಕೊಡುತ್ತೇವೆ. ಆದ್ರೆ, ಸಚಿವ ಜಮೀರ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಸ್ಪೀಕರ್ ಸ್ಥಾನಕ್ಕೆ ಮುಸ್ಲಿಂ ವ್ಯಕ್ತಿಯನ್ನ ಮಾಡಿದ್ದೇವೆ. ಆ ಸ್ಥಾನಕ್ಕೆ ಹಿಂದೂಗಳು ತಲೆ ಬಾಗಬೇಕು ಅಂತ ಹೇಳಿದ್ದಾರೆ. ಅವರ ಅರ್ಥದಲ್ಲಿ ಮುಸ್ಲಿಂ ಧರ್ಮದವರು ಉನ್ನತ ಸ್ಥಾನದವರು. ಅವರ ಅಡಿಯಲ್ಲಿ ಹಿಂದೂಗಳು ಸಲಾಂ ಹೊಡೆದು ಅವರ ಕೆಳಗೆ ಕೂರಬೇಕು ಎಂದು ಹೇಳಿಕೆ ನೀಡಿದ್ದಾರೆ. ಒಂದು ಕಡೆ ಸ್ಪೀಕರ್ ಸಂವಿಧಾನದ ಬಗ್ಗೆ ಹೇಳುತ್ತಾರೆ. ಒಂದೇ ಒಂದು ಮಾತು ಜಮೀರ್ ಹೇಳಿದ್ದು ಸರಿಯಲ್ಲ ಅಂತ ಹೇಳಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ಸಿದ್ದರಾಮಯ್ಯ ಹೇಳಿದ್ದಾರೆ ಮೌಲ್ವಿಗಳಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ. ಚಾರಿಟಬಲ್ ಟ್ರಸ್ಟ್ ಮಾಡಿದ್ರೆ ಅದಕ್ಕೂ ದುಡ್ಡು ಜಾಸ್ತಿ. ಇಂದು ಬಿಲ್ ಮಂಡನೆ ಮಾಡಿದ್ದು ಹೆಚ್ಚು ಹಣ ಹೊಡೆಯೋ ಕೆಲಸ ಆಗುತ್ತಿದೆ. ಓಟಿಗಾಗಿ ಮೌಲ್ವಿಗಳ ಓಲೈಕೆ ಹಾಗೂ ಸ್ಪೀಕರ್ ಕುರ್ಚಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ಹುಚ್ಚು ಹಿಡಿದವರು ಕೊಡುವ ಹೇಳಿಕೆ. ಸಂವಿಧಾನ ಅನುಚ್ಛೇದ ಸಬ್ ಕ್ಲಾಸ್ ಅಡಿಯಲ್ಲಿ ಇದು ಉಲ್ಲಂಘನೆ ಆಗಿದೆ. ಜಮೀರ್ ಮೇಲೆ ಕೇಸ್ ಹಾಕಬೇಕಿತ್ತು ಹಾಕಿಲ್ಲ. ಸ್ಪೀಕರ್ ತಮ್ಮ ಸ್ಥಾನ ಎತ್ತಿ ಹಿಡಿಯಬೇಕಿತ್ತು. ಆದ್ರೆ ಕಿವಿಗೆ ಹೆಡ್ ಫೋನ್ ಹಾಕಿಕೊಂಡು ಬಿಲ್ ಮಂಡನೆ ಮಾಡಿದ್ರು. ಪ್ರಜಾಪ್ರಭುತ್ವ ದಮನ ಮಾಡಿ, ಮುಸ್ಲಿಂ ಓಲೈಕೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯೆಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ
ಬಿಜೆಪಿ, ಜೆಡಿಎಸ್ ಸದಸ್ಯರ ಧರಣಿ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮಧ್ಯೆಪ್ರವೇಶಿಸಿದ್ದು,ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಸಂವಿಧಾನದ ಬಿಕ್ಕಟ್ಟು ಅಲ್ಲ.ನಮ್ಮ ಪಕ್ಷ ಸಂವಿಧಾನಕ್ಕೆ ಗೌರವ ಕೊಡುತ್ತದೆ. ಸಂವಿಧಾನ ಬದ್ಧವಾಗಿ ಸರ್ಕಾರ ನಡೆಸುವವರು ನಾವು. ಸ್ಪೀಕರ್ಗೆ ನಾವು, ಬಿಜೆಪಿಯವರೂ ಗೌರವ ಕೊಡಬೇಕು ಎಂದೆ ಹೇಳಿದ್ದಾರೆ. ಶಾಸಕರಿಗೆ ಚ್ಯುತಿ ಬರುವಂತೆ ಹೇಳಿಲ್ಲಂದು ಜಮೀರ್ ಹೇಳಿದ್ದಾರೆ. ಚ್ಯುತಿ ಬಂದಿದ್ದರೆ ಮೊದಲ ವಾರವೇ ಏಕೆ ಧರಣಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Mon, 11 December 23