ಮಂಡ್ಯ, ಫೆಬ್ರವರಿ 23: ನಾಗಮಂಗಲ (Nagamangala) ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯಬೆಟ್ಟದಲ್ಲಿ ನಾಡಬಾಂಬ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹರಿಯಂತ್ ಪಾಟೀಲ್, ಪಾರ್ಥ ಗಾಯಗೊಂಡ ವಿದ್ಯಾರ್ಥಿಗಳು. ಹರಿಯಂತ್ ಪಾಟೀಲ್ ಮತ್ತು ಪಾರ್ಥ ಜೈನಬಸದಿ ಶಾಲೆಯಲ್ಲಿ ಓದುತ್ತಿದ್ದಾರೆ.
ವಿದ್ಯಾರ್ಥಿಗಳು ರವಿವಾರ (ಫೆ.23) ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ಕೆ ತೆರಳಿದ್ದರು. ಸ್ವಚ್ಛತೆ ಮಾಡುವಾಗ ಕಸದ ರಾಶಿಗೆ ವಿದ್ಯಾರ್ಥಿಗಳು ಕೈ ಹಾಕುತ್ತಿದ್ದಂತೆ ನಾಡ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀರ್ವತೆಗೆ ಓರ್ವನ ಅಂಗೈ ಛಿದ್ರಗೊಂಡಿದೆ. ಮತ್ತೊಬ್ಬನ ಮುಖದ ಭಾಗಕ್ಕೆ ಗಾಯವಾಗಿದೆ.
ಕಾಡು ಹಂದಿ ಬೇಟೆಗೆ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದ ನಾಗೇಶ್ ಎಂಬುವವರು ರಾತ್ರಿ ವೇಳೆ ಕಾಡು ಹಂದಿ ಸೇರಿದಂತೆ ವನ್ಯಜೀವಿಗಳ ಬೇಟೆಯನ್ನು ಕಸುಬಾಗಿಸಿಕೊಂಡಿದ್ದರು. ಅದಕ್ಕಾಗಿ ತನ್ನ ಮನೆಯಲ್ಲಿ ಮದ್ದು, ಗುಂಡು ತಯಾರಿ ಮಾಡುತ್ತಿದ್ದರು. ಈ ವೇಳೆ ಮನೆಯಲ್ಲಿದ್ದ 18 ವರ್ಷದ ತನ್ನ ಮಗನನ್ನು ಸಹ ಜೊತೆಯಾಗಿಸಿಕೊಂಡು, ಮದ್ದು, ಗುಂಡು ತಯಾರಿ ಮಾಡುತ್ತಿದ್ದರು.
ಇದನ್ನೂ ಓದಿ: ಫಲವನಹಳ್ಳಿ ಅರಣ್ಯ ವಲಯದಲ್ಲಿ 32 ಜೀವಂತ ನಾಡಬಾಂಬ್ ಪತ್ತೆ: ಇಬ್ಬರ ಬಂಧನ
ಈ ವೇಳೆ ತಯಾರಾಗಿದ್ದ ಮದ್ದು, ಗುಂಡು ಆಕಸ್ಮಿಕವಾಗಿ ತಂದೆ, ಮಗನ ಮುಂದೆಯೇ ಸ್ಫೋಟಗೊಂಡು ಮಗ ಪ್ರವನ್ ಮನೆಯಲ್ಲೇ ಸಾವನ್ನಪಿದ್ದರು. ತಂದೆ ನಾಗೇಶ್ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಜೊತೆಗೆ ಸ್ಫೋಟದ ರಭಸಕ್ಕೆ ಮನೆಯ ಮೇಲ್ಚಾವಣಿ ಸಹ ಪೀಸ್ ಪೀಸ್ ಆಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಪುಡಿ ಪುಡಿಯಾಗಿದ್ದವು.
Published On - 12:09 pm, Sun, 23 February 25