Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಮಂಗಲ: ಪಾತ್ರೆ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ, ಸಿಸಿಟಿವಿಗೆ ಕಲ್ಲೆಸೆದು ಸಾಕ್ಷ್ಯನಾಶಕ್ಕೆ ಯತ್ನ, ವಿಡಿಯೋ ಬಹಿರಂಗ

ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದಿದ್ದ ಕೋಮುಗಲಭೆ ಪೂರ್ವನಿಯೋಜಿತ ಕೃತ್ಯ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ, ಈ ಆರೋಪಗಳಿಗೆ ಪುಷ್ಟಿ ಕೊಡುವಂಥ ಕೆಲವು ವಿಡಿಯೋಗಳು ಬಯಲಾಗಿವೆ. ಪಾತ್ರೆ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಸಿಸಿಟಿವಿಗೆ ಕಲ್ಲೆಸೆದು ಸಾಕ್ಷ್ಯನಾಶಕ್ಕೆ ಯತ್ನಿಸಿದ ವಿಡಿಯೋ ಇದೀಗ ಬಯಲಾಗಿವೆ.

Follow us
ಪ್ರಶಾಂತ್​ ಬಿ.
| Updated By: Ganapathi Sharma

Updated on: Sep 17, 2024 | 12:59 PM

ಮಂಡ್ಯ, ಸೆಪ್ಟೆಂಬರ್ 17: ಮಂಡ್ಯದ ನಾಗಮಂಗಲ ಕೋಮು ಗಲಭೆಗೆ ಮೊದಲೇ ಸಂಚು ಹೂಡಿರುವುದಕ್ಕೆ ಘಟನೆ ಸಂಬಂಧಿತ ಒಂದೊಂದು ವಿಡಿಯೋಗಳೇ ಸಾಕ್ಷಿ ಹೇಳುತ್ತಿವೆ. ಗಲಭೆಯ ರಹಸ್ಯಗಳು ದಿನೇ ದಿನೇ ಬಯಲಾಗುತ್ತಲೇ ಇವೆ. ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದರೂ ಪೊಲೀಸರೇ ಅಸಹಾಯಕರಾಗಿ ನಿಂತಿರುವ ವಿಡಿಯೋ ಸೋಮವಾರ ಬಯಲಾಗಿತ್ತು. ಇದೀಗ ಗಲಭೆ ವೇಳೆ ಸಾಕ್ಷ್ಯನಾಶಕ್ಕೆ ಯತ್ನಿಸಿರುವ ಮತ್ತೊಂದು ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಾತ್ರೆ ಅಂಗಡಿಗೆ ಪೆಟ್ರೋಲ್ ಸುರಿದು ಕಿಡಿಗೇಡಿಗಳಿಂದ ಬೆಂಕಿ

ಕಿಡಿಗೇಡಿಗಳು ಮೊದಲೇ ಸಿದ್ಧತೆ ಮಾಡಿಕೊಂಡು ಏಕಾಏಕಿ ಪಾತ್ರೆ ಅಂಗಡಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚಿರುವುದು ಸಿಸಿಟಿವಿ ದೃಶ್ಯದದಿಂದ ಬಯಲಾಗಿದೆ. ಸೆಪ್ಟೆಂಬರ್ 11ರ ರಾತ್ರಿ 10.47ರ ಸುಮಾರಿಗೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವತ್ತು ಕಿಡಿಗೇಡಿಗಳ ಕೃತ್ಯಕ್ಕೆ ಇಡೀ ಪಾತ್ರೆ ಅಂಗಡಿಯೇ ಭಸ್ಮ ಆಗಿತ್ತು.

ಬೆಂಕಿ ಹಚ್ಚುವ ವೇಳೆ ಸಿಸಿಟಿವಿಗೆ ಕಲ್ಲೆಸೆದು ಸಾಕ್ಷ್ಯನಾಶಕ್ಕೆ ಯತ್ನ

ನಾಗಮಂಗಲ ಗಲಭೆ ಪೂರ್ವನಿಯೋಜಿತ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ದುಷ್ಕರ್ಮಿಗಳು ಯಾವಾಗ ಪಾತ್ರೆ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾರೋ, ಕೃತ್ಯ ಯಾರಿಗೂ ಗೊತ್ತಾಗಬಾರದು ಎಂದು ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾರೆ. ಬೆಂಕಿ ಹಚ್ಚುವ ವೇಳೆ ಸಿಸಿಟಿವಿಗೂ ಕಲ್ಲೆಸೆದು ಅಟ್ಟಹಾಸ ಮೆರೆದಿದ್ದಾರೆ.

ನಾಗಮಂಗಲ ಗಲಭೆಗೆ ಇದೆಯಾ ಬಾಂಗ್ಲಾ ವಲಸಿಗರ ನಂಟು?

ಈ ಮಧ್ಯೆ, ನಾಗಮಂಗಲ ಗಲಭೆಗೆ ಬಾಂಗ್ಲಾದೇಶ ವಲಸಿಗರ ನಂಟಿದೆ ಎಂದು ಜೆಡಿಎಸ್​ ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ. ಮಂಡ್ಯದಲ್ಲಿ ಬಾಂಗ್ಲಾ ದೇಶದವರು ಕೂಡ ಇದ್ದಾರೆ. ಅವರು ಹೇಗೆ ಬಂದಿದ್ದಾರೆ ಗೊತ್ತಿಲ್ಲ. ಪೆಟ್ರೋಲ್ ಬಾಂಬ್​ ಅನ್ನು ಸಾಮಾನ್ಯ ಜನರು ಎಸೆಯಲು ಸಾಧ್ಯವಿಲ್ಲ, ನಿಪುಣರಿಂದಷ್ಟೇ ಸಾಧ್ಯ. ತನಿಖೆಯನ್ನ ಎನ್​ಐಎಗೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎನ್​ಐಎಯಿಂದ ಮಾತ್ರ ತನಿಖೆ ಸಾಧ್ಯ: ಶೋಭಾ ಕರಂದ್ಲಾಜೆ

ನಾಗಮಂಗಲ ಗಲಭೆಯ ಹಿಂದೆ ಕೇರಳದ ಕೈವಾಡ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ಹೇಳಿದ್ದಾರೆ. ಎನ್​​ಐಎಯಿಂದ ಮಾತ್ರ ಪ್ರಕರಣದ ತನಿಖೆ ಮಾಡಲು ಸಾಧ್ಯ. ಕರ್ನಾಟಕ ಪೊಲೀಸರಿಗೆ ಇಂದು ಸತ್ವ ಇಲ್ಲ. ಯಾಕೆಂದರೆ, ಪೊಲೀಸರ ಕೈಯನ್ನು ರಾಜ್ಯ ಸರ್ಕಾರ ಕಟ್ಟಿ ಹಾಕಿದೆ. ಪೊಲೀಸರು ಕೇವಲ ರಾಜ್ಯ ಸರ್ಕಾರ ಹೇಳಿದಂತೆ ಮಾಡುತ್ತಾರೆ ಅಷ್ಟೆ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ: ರಕ್ಷಣೆ ಮಾಡಿ ಎಂದು ಅಂಗಲಾಚಿದರೂ ಕೈ ಕಟ್ಟಿ ನಿಂತ ಪೊಲೀಸರು

ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಇದು ಚಿಕ್ಕ ಘಟನೆ ಎಂದಿದ್ದಾರೆ. ಸಿಎಂ, ಗೃಹಸಚಿವರಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎನ್​ಐಎ ತನಿಖೆಯಿಂದ ಯಾರು ಕುಮ್ಮಕ್ಕು ನೀಡಿದ್ದಾರೆಂಬುದನ್ನು ತಿಳಿಯಲು ಸಾಧ್ಯ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ