ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಸ್ವಕ್ಷೇತ್ರ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಿಸಲು ಮುಂದಾಗಿದ್ದಾರೆ. ನಾಳೆ ಬುಧವಾರ (ಸೆಪ್ಟೆಂಬರ್ 1) ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಪ್ರವಾಸ ಕೈಗೊಳ್ಳಲಿದ್ದು, ನಾಳೆಯೇ ಅವರು ಸ್ವಂತ ಮನೆ ಕಟ್ಟಲು ಗುದ್ದಲಿ ಪೂಜೆ ನಡೆಸಲಿದ್ದಾರೆ. ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ ಗೆದ್ದ ಬಳಿಕ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡಿ ಅಲ್ಲಿಯೇ ವಾಸಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಭರವಸೆ ನೀಡಿದ್ದರು. ಈ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ಸಂಸದೆ ಸುಮಲತಾ ಅಂಬರೀಶ್ ಸ್ವಂತ ಮನೆ ಕಟ್ಟಿಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಅವರು ನೆರವೇರಿಸಲಿದ್ದಾರೆ.
ಈಹಿಂದೆ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ವಾಸವಿರುವುದಿಲ್ಲ ಎಂದು ಹಲವು ಬಾರಿ ಟೀಕಿಸಿದ್ದರು ಎಂಬುದನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು
ಪ್ರತಿ ಶಾಲೆಯಲ್ಲೂ ಕನಿಷ್ಠ ಒಂದು ಗುಂಟೆಯಾದರೂ ಆಟದ ಮೈದಾನ ಇರಬೇಕು: ಕ್ರೀಡಾ ಸಚಿವ ನಾರಾಯಣಗೌಡ
ಹಾವೇರಿ: ರಾಜ್ಯದ ಬಹುತೇಕ ಶಾಲೆಗಳಲ್ಲಿ ಮೈದಾನಗಳೇ ಇಲ್ಲ. ಹೀಗಾಗಿ ಪ್ರತಿ ಶಾಲೆಯಲ್ಲೂ ಕನಿಷ್ಠ ಒಂದು ಗುಂಟೆಯಾದರೂ ಮೈದಾನ ಇರಬೇಕೆಂದು ನೋಟಿಸ್ ಹೊರಡಿಸಲಾಗುವುದು ಎಂದು ಹಾವೇರಿಯಲ್ಲಿ ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು. ಕ್ರೀಡಾ ಉತ್ತೇಜನಕ್ಕೆ ನಮ್ಮ ಸರಕಾರ ಬದ್ಧವಾಗಿದೆ. ಬಹುತೇಕ ಶಾಲೆಗಳಲ್ಲಿ ಕ್ರೀಡಾಂಗಣಗಳಿಲ್ಲ. ಹೀಗಾಗಿ ಪ್ರತಿ ಶಾಲೆಯಲ್ಲೂ ಆಟದ ಮೈದಾನ ಇರುವಂತೆ ವ್ಯವಸ್ಥೆ ಮಾಡುವಂತೆ ನೊಟೀಸ್ ನೀಡಲಾಗುವುದು. ಕನಿಷ್ಠ ಒಂದು ಗಂಟೆ ಆಟವಾಡಲು ಅವಕಾಶ ಆಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗುವುದು. ಪಾಠದ ಜೊತೆಗೆ ಆಟವೂ ಮುಖ್ಯ. ಒಂದು ವೇಳೆ ಮಕ್ಕಳಿಗೆ ಆಟಕ್ಕೆ ಅವಕಾಶ ನೀಡದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನಾವು ಸರಕಾರದ ಅಭಿವೃದ್ಧಿಗೆ ಹೊರಟವರು. ಟೀಕೆ ಟಿಪ್ಪಣಿಗಳಿಗೆ ಹೋಗಿ ಕಾಲ ಕಳೆಯೋದು ಬೇಡ. ಅವರು ಮಾತಾಡಿಕೊಳ್ಳಲಿ, ಏಕೆಂದರೆ ಅವರು ವಿರೋಧ ಪಕ್ಷದಲ್ಲಿರುವವರು. ಟೀಕೆ ಟಿಪ್ಪಣಿಗಳನ್ನ ಮಾಡದಿದ್ದರೆ ಅವರಿಗೆ ಜೀರ್ಣಕ್ರಿಯೆ ಆಗುವುದಿಲ್ಲ. ಅಭಿವೃದ್ಧಿ ಮಾಡೋಣ, ಒಳ್ಳೆಯ ಮುಖ್ಯಮಂತ್ರಿಗಳು ಇದ್ದಾರೆ. ಮಾಜಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅವರ ನಿರ್ದೇಶನವೂ ಇದೆ. ಬಸವರಾಜ ಬೊಮ್ಮಾಯಿ ಅವರಿಗೂ ಒಳ್ಳೆಯ ಕೆಲಸಗಳನ್ನ ಮಾಡುವ ಇಚ್ಛೆಯಿದೆ. ನಾವೆಲ್ಲ ಸೇರಿ ಶಕ್ತಿ ತುಂಬಿ, ಅಭಿವೃದ್ಧಿ ಕಡೆಗೆ ಹೋಗೋಣ ಎಂದು ಅವರು ಹಾವೇರಿಯ ಜಿಲ್ಲಾ ಕ್ರೀಡಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ವೀಕ್ಷಣೆ ನಂತರ ಅವರು ಕರೆ ನೀಡಿದರು. ಅಲ್ಲದೇ, ಜಿಲ್ಲಾ ಕ್ರೀಡಾಂಗಣದ ವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು.
(MP Sumalatha Ambarish started to build a house in Mandya)
Published On - 3:43 pm, Tue, 31 August 21