ಮಂಡ್ಯ: ಹಿಜಾಬ್ ವಿವಾದಕ್ಕೆ (Hijab Controversy) ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ. ಶಾಲೆ- ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಈ ಮಹತ್ವದ ತೀರ್ಪಿಗೆ ಮಂಡ್ಯದ ವಿದ್ಯಾರ್ಥಿ ಮುಸ್ಕಾನ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಹಿಂದೆ ವಿದ್ಯಾರ್ಥಿ ಮುಸ್ಕಾನ್ ಕಾಲೇಜಿನ ಆವರಣದೊಳಗೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದರು. ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಬೆನ್ನಲ್ಲೆ ವಿಶ್ವ ಮಟ್ಟದಲ್ಲಿ ಬಾರಿ ಚರ್ಚೆಗೆ ಕಾರಣವಾಗಿತ್ತು.
ವಿದ್ಯಾರ್ಥಿನಿ ಮುಸ್ಕಾನ್ ಮನೆ ಮಂಡ್ಯದ ಗುತ್ತಲು ರಸ್ತೆಯಲ್ಲಿದೆ. ತೀರ್ಪು ಬಂದ ಬಳಿಕ ಮಾಧ್ಯಮದವರು ಪ್ರತಿಕ್ರಿಯೆ ಕೇಳಲು ತೆರಳಿದ್ದಾಗ ಮಾತನಾಡಲು ನಿರಾಕರಿಸಿದ್ದಾರೆ. ತೀರ್ಪು ಬರುವ ಮುನ್ನ ಇಂದು ಬೆಳಗ್ಗೆ ಸಂವಿಧಾನ ಹಾಗೂ ನಮ್ಮ ದೇವರ ಮೇಲೆ ವಿಶ್ವಾಸವಿದೆ ಅಂತ ಮುಸ್ಕಾನ್ ಎಂದಿದ್ದರು. ಆದರೆ ತೀರ್ಪು ಬಂದಾಗಿದೆ. ಹಿಜಾಬ್ ಧರಿಸುವಂತಿಲ್ಲ ಅಂತ ಹೈಕೋರ್ಟ್ ತಿಳಿಸಿದೆ.
ಮುಸ್ಕಾನ್ ಮನೆಯವರು ತಮ್ಮ ಮನೆಯ ಬಾಗಿಲು ತೆಗೆಯಲು ನಿರಾಕರಣೆ ಮಾಡಿದ್ದಾರೆ. ನಮ್ಮ ಮಗಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಅಂತ ಮುಸ್ಕಾನ್ ತಂದೆ ಹುಸೇನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಮುಸ್ಕಾನ್ ತಂದೆ ಮಹಮದ್ ಹುಸೇನ್, ಕೋರ್ಟ್ ತೀರ್ಪು ನೀಡಿದೆ. ಘಟನೆ ನಂತರ ಮುಸ್ಕಾನ್ ಕಾಲೇಜಿಗೆ ಹೋಗಿಲ್ಲ. ಇದೇ 24ಕ್ಕೆ ಆಕೆಗೆ ಪರೀಕ್ಷೆ ಇದೆ. ಇಸ್ಲಾಂ ಧರ್ಮದಲ್ಲಿನ ಹಿರಿಯರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಸದ್ಯ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಹೇಳಿದ್ದಾರೆ. ನೋಡೋಣ ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ವಿಶ್ವಾಸವಿದೆ. ಶಿಕ್ಷಣ ಧರ್ಮ ಎರಡು ಸಹಾ ಎರಡು ಕಣ್ಣುಗಳಿದ್ದಂತೆ. ಎರಡನ್ನು ಕಾಪಾಡಿಕೊಂಡು ಸಾಗಬೇಕಿದೆ. ಮುಂದೆ ನೋಡೋಣ ಯಾವ ರೀತಿ ಆಗುತ್ತದೆ ಎಂದು ಹೇಳಿದರು.
ಬೇರೆ ಧರ್ಮದ ಆಚರಣೆಯನ್ನು ಪ್ರಶ್ನಿಸಲು ಬುನಾದಿ ಮಾಡಿಕೊಟ್ಟಿದೆ; ಮುಸ್ಲಿಂ ಮುಖಂಡ ಅನ್ಸರ್ ಅಹಮದ್ ತೀರ್ಪು ಹಿಜಾಬ್ ಪರವಾಗಿ ಬರುತ್ತೆ ಅಂತಾ ಅಂದುಕೊಂಡಿದ್ದೆವು. ಹೈಕೋರ್ಟ್ಗೆ ಮೇಲ್ವನವಿ ಸಲ್ಲಿಸುವ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಚರ್ಚೆ ಮಾಡಲಾಗುವುದು. ಬೇರೆ ಧರ್ಮದವರು ತಮ್ಮ ಆಚರಣೆ ಶಾಲೆಯಲ್ಲಿ ಮಾಡುತ್ತಾರೆ. ಈ ತೀರ್ಪು, ಬೇರೆ ಧರ್ಮದ ಆಚರಣೆಯನ್ನು ಪ್ರಶ್ನಿಸಲು ಬುನಾದಿ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಅದನ್ನು ನಾವು ವಿರೋಧಿಸಬೇಕಾಗುತ್ತದೆ ಅಂತ ಮಂಗಳೂರಿನಲ್ಲಿ ಟಿವಿ9ಗೆ ಮುಸ್ಲಿಂ ಮುಖಂಡ ಅನ್ಸರ್ ಅಹಮದ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ: ಅರ್ಜಿದಾರರ ಪರ ವಕೀಲರಿಂದ ಮಾಹಿತಿ
Published On - 11:30 am, Tue, 15 March 22