ನಾಗಮಂಗಲ ಕೋಮುಗಲಭೆ ಪ್ರಕರಣ: ಡಿಸಿ ವರದಿ ಪರಿಗಣಿಸದೆ ಕಾಟಾಚಾರಕ್ಕೆ ಪರಿಹಾರ, ಸಂತ್ರಸ್ತರ ಆಕ್ರೋಶ

| Updated By: Ganapathi Sharma

Updated on: Nov 25, 2024 | 9:22 AM

ನಾಗಮಂಗಲ ಕೋಮು ಗಲಭೆಯಿಂದಾಗಿ ಅಪಾರ ಆಸ್ತಿ ನಷ್ಟ ಅನುಭವಿಸಿರುವ ಸಂತ್ರಸ್ತರು ಸರ್ಕಾರದಿಂದ ಕಡಿಮೆ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳ ವರದಿಯಲ್ಲಿ 2.66 ಕೋಟಿ ರೂಪಾಯಿ ನಷ್ಟವೆಂದು ತಿಳಿಸಿದ್ದರೂ, ಸರ್ಕಾರ ಕೇವಲ 76 ಲಕ್ಷ ರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಇದೀಗ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ಕೋಮುಗಲಭೆ ಪ್ರಕರಣ: ಡಿಸಿ ವರದಿ ಪರಿಗಣಿಸದೆ ಕಾಟಾಚಾರಕ್ಕೆ ಪರಿಹಾರ, ಸಂತ್ರಸ್ತರ ಆಕ್ರೋಶ
ಡಿಸಿ ವರದಿ ಪರಿಗಣಿಸದೆ ಕಾಟಾಚಾರಕ್ಕೆ ಪರಿಹಾರ, ಸಂತ್ರಸ್ತರ ಆಕ್ರೋಶ
Follow us on

ಮಂಡ್ಯ, ನವೆಂಬರ್ 25: ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ವರದಿ ಪರಿಗಣಿಸದೆ ಸರ್ಕಾರ ಕಾಟಾಚಾರಕ್ಕೆ ಪರಿಹಾರ ಕೊಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಗಲಭೆಯಿಂದಾಗಿ ಆದ ನಷ್ಟಕ್ಕೂ, ಸರ್ಕಾರ ಕೊಟ್ಟ ಪರಿಹಾರಕ್ಕೂ ವ್ಯತ್ಯಾಸವಿದೆ ಎಂದು ಅಂಗಡಿ ಕಳೆದುಕೊಂಡ ಸಂತ್ರಸ್ತರು ಆರೋಪಿಸಿದ್ದು, ರಾಜ್ಯ ಸರ್ಕಾರ ವಿರುದ್ಧ ಸಿಡಿದೆದ್ದಿದ್ದಾರೆ.

ಸಂತ್ರಸ್ತರಿಗೆ ಎರಡು ದಿನ ಹಿಂದಷ್ಟೇ ಸಚಿವ ಎನ್ ಚಲುವರಾಯಸ್ವಾಮಿ ಪರಿಹಾರ ನೀಡಿದ್ದರು. ಇದರ ಬೆನ್ನಲ್ಲೇ ಸಂತ್ರಸ್ತರ ಅಸಮಾಧಾನ ಸ್ಫೋಟಗೊಂಡಿದೆ. ಸರ್ಕಾರ ಕೊಟ್ಟ ಪರಿಹಾರ ವಾಪಸ್​​ ನೀಡುವುದಾಗಿ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

25-30 ಲಕ್ಷ ರೂಪಾಯಿ ನಷ್ಟವಾಗಿದೆ, ಕೊಟ್ಟಿದ್ದು 50 ಸಾವಿರ, 1 ಲಕ್ಷ ರೂಪಾಯಿ ಅಷ್ಟೆ. ಇದಕ್ಕಿಂತ ಹೆಚ್​ಡಿ ಕುಮಾರಸ್ವಾಮಿಯವರೇ ಪರವಾಗಿಲ್ಲ, ವೈಯಕ್ತಿಕವಾಗಿ ಪರಿಹಾರ ಕೊಟ್ಟಿದ್ದಾರೆ. ನಿಮ್ಮ ಪರಿಹಾರ ನೀವೇ ಇಟ್ಟುಕೊಳ್ಳಿ ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ವರದಿಯಲ್ಲೇನಿತ್ತು?

ಮಂಡ್ಯ ಜಿಲ್ಲಾಧಿಕಾರಿಯವರು ಖುದ್ದು ತಜ್ಞರ ತಂಡದಿಂದ ವರದಿ ಸಿದ್ಧಪಡಿಸಿದ್ದರು. ಅವರ ವರದಿಯ ಪ್ರಕಾರ, 1.18 ಕೋಟಿ ರೂಪಾಯಿ ಮೌಲ್ಯದ ಸರಕು ನಾಶವಾಗಿತ್ತು. 1.47 ಕೋಟಿ ರೂಪಾಯಿ ಮೌಲ್ಯದ ಕಟ್ಟಡಗಳು ಸಂಪೂರ್ಣ ಹಾನಿಗೊಳಗಾಗಿದ್ದವು. ಒಟ್ಟು 2.66 ಕೋಟಿ ರೂಪಾಯಿ ನಷ್ಟದ ಮೌಲ್ಯಮಾಪನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿತ್ತು. ಕೋಟಿ ಕೋಟಿ ನಷ್ಟವಾದರೂ ಸರ್ಕಾರ ಕೊಟ್ಟಿದ್ದು ಮಾತ್ರ ಲಕ್ಷಗಳ ಲೆಕ್ಕದಲ್ಲಿ ಮಾತ್ರ. 76 ಲಕ್ಷ ರೂಪಾಯಿ ಪರಿಹಾರ ಕೊಟ್ಟು ಸರ್ಕಾರ ಕೈ ತೊಳೆದುಕೊಂಡಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ಗಲಭೆ ಹಿನ್ನೆಲೆ

ಗಣೇಶೋತ್ಸವ ಪ್ರಯುಕ್ತ ನಡೆದಿದ್ದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ, ಸೆಪ್ಟೆಂಬರ್ 11ರ ರಾತ್ರಿ ನಾಗಮಂಗಲ ಪಟ್ಟಣದಲ್ಲಿ ಗಲಾಟೆ ನಡೆದಿತ್ತು. ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದು ಗಲಭೆ ಶುರುವಾಗಲು ಕಾರಣವಾಗಿತ್ತು. ನಂತರ ಕಲ್ಲು, ದೊಣ್ಣೆ, ಮಾರಕಾಸ್ತ್ರಗಳಿಂದ ದಾಳಿ ಜತೆಗೆ, ಪೆಟ್ರೋಲ್ ಬಾಂಬ್ ಎಸೆಯುವ ಜೊತೆಗೆ ‌ಅಂಗಡಿ ಮುಂಗಟ್ಟಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆಯಲಾಗಿತ್ತು.

ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ: ಬರೊಬ್ಬರಿ 2.66 ಕೋಟಿ ಮೌಲ್ಯದ ಆಸ್ತಿ ನಾಶ

ಗಲಭೆಯಿಂದಾಗಿ ಬರೊಬ್ಬರಿ 2.66 ಕೋಟಿ ಮೌಲ್ಯದ ಆಸ್ತಿ ನಾಶವಾಗಿದೆ ಎಂದು ಸೆಪ್ಟೆಂಬರ್​​ನಲ್ಲಿ ವರದಿ ಸಿದ್ಧಪಡಿಸಲಾಗಿತ್ತು. ವರದಿ ಸಿದ್ದಪಡಿಸಿ, ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೇವೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಮಾಹಿತಿ ನೀಡಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ