ಮಂಡ್ಯ: ಮಂಡ್ಯವನ್ನ ಕಬ್ಜ ಮಾಡಲು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಮಾರ್ಚ್ 12ರಂದು ಬೆಂಗಳೂರು-ಮೈಸೂರು ಹೈವೇ ಲೋಕಾರ್ಪಣೆ(Bengaluru-Mysuru Highway) ಮಾಡಲು ಸಕ್ಕರೆ ನಾಡಿಗೆ ಆಗಮಿಸುತ್ತಿರುವ ಮೋದಿ ಹೈವೇ ಲೋಕಾರ್ಪಣೆ ವೇಳೆ ರೋಡ್ ಶೋ(Modi Road Show) ನಡೆಸಲಿದ್ದಾರೆ. ಈ ಹಿನ್ನೆಲೆ ಮೋದಿ ಸಂಚರಿಸುವ ಮಾರ್ಗದಲ್ಲಿ ಡ್ರೋನ್ ಹಾರಾಟ ನಿಷೇಧ ಹೇರಿ ಮಂಡ್ಯ ಜಿಲ್ಲಾಧಿಕಾರಿ ಗೋಪಾಲಕೃಷ್ಣರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಮಾರ್ಚ್ 12ಕ್ಕೆ ಮಂಡ್ಯದಲ್ಲಿ ಮೋದಿ ಮೆಗಾ ರೋಡ್ ಶೋ ಹಿನ್ನಲೆ ಡ್ರೋನ್ ಹಾಗೂ ಹೆಲಿಕ್ಯಾಮ್ ಹಾರಿಸಲು ಜಿಲ್ಲಾಡಳಿತ ನಿಷೇಧ ಹೇರಿದೆ. ಭದ್ರತಾ ಹಿತಾದೃಷ್ಠಿಯಿಂದ 15 ಕಿಲೋ ಮೀಟರ್ ವರೆಗೂ ಡ್ರೋನ್ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಎಸ್.ಪಿ.ಜಿ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಏರಿಯಲ್ ಸರ್ವೆ ನಡೆಸಿದೆ. ವಿಶೇಷ ಭದ್ರತಾ ತಂಡದ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಮಾನವ ರಹಿತ ಎಲೆಕ್ಟ್ರಿಕಲ್ ವಸ್ತು ಹಾಗೂ ಹೆಲಿಕಾಪ್ಟರ್ ಹಾರಟಕ್ಕೂ ನಿಷೇಧ ಹೇರಲಾಗಿದೆ. ಡ್ರೋನ್ ಅಥವಾ ಹೆಲಿಕ್ಯಾಮ್ ಹಾರಿಸಿದರೆ ಕಾನೂನು ರೀತಿಯ ಕ್ರಮ ತೆಗೆದು ಕೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇವೆ. ದೇಶಾದ್ಯಂತ ಗೆದ್ದು ಬೀಗಿದ ಬಿಜೆಪಿಗೆ ಹಳೆ ಮೈಸೂರು ಭಾಗ ಕಬ್ಬಿಣದ ಕಡಲೆ ಆಗಿದೆ. ಹೀಗಾಗಿ ಹಳೆ ಮೈಸೂರು ಭಾಗವನ್ನ ಕಬ್ಜ ಮಾಡಲೇ ಬೇಕಂದು ಪಣ ತೊಟ್ಟಿರೊ ಬಿಜೆಪಿ ಹೈ ಕಮಾಂಡ್ ದಕ್ಷಿಣ ದಂಡಯಾತ್ರೆಗೆ ಚಾಲನೆ ಕೊಟ್ಟಿದೆ. ಚುನಾವಣಾ ಚಾಣಕ್ಯ ಮಂಡ್ಯದ ಗೆಜ್ಜಲಗೆರೆಗೆ ಭೇಟಿ ನೀಡಿ ಮೆಗಾ ಡೈರಿ ಉದ್ಘಾಟನೆ ಮಾಡಿದ್ದರು. ಸದ್ಯ ಈಗ ಮಂಡ್ಯ ಅಖಾಡಕ್ಕೆ ಸ್ವತಃ ಪ್ರಧಾನಿ ಮೋದಿ ಅವರೇ ಎಂಟ್ರಿ ಕೊಡುತ್ತಿದ್ದಾರೆ. ಮಂಡ್ಯದಲ್ಲಿ ರೋಡ್ ಶೋ ನಡೆಸುವ ಮೂಲಕ ನಘರವಾಗಿ ಗೆಜ್ಜಲಗೆರೆ ಕಾಲೋನಿಗೆ ಎಂಟ್ರಿ ಕೊಡಲಿದ್ದಾರೆ. ಮಂಡ್ಯದಿಂದ ಬೈ ರೋಡ್ ನಲ್ಲಿ ಬರುವ ನಮೋ ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟಿಸಿ ಬಳಿಕ ಗೆಜ್ಜಲಗೆರೆ ಕಾಲೋನಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಮಾರ್ಚ್ 12ರಂದು ಮೈಸೂರು ಮೂಲಕ ಚಾಪರ್ ನಲ್ಲಿ ಮಂಡ್ಯದ ಪಿಇಎಸ್ ಕಾಲೇಜ್ ಹೆಲಿಪ್ಯಾಡ್ ಗೆ ಮೋದಿಯ ಚಾಪರ್ ಬಂದು ಲ್ಯಾಂಡ್ ಆಗಲಿದೆ. ಅಲ್ಲಿಂದ ನೇರವಾಗಿ ವಿಶೇಷ ವಾಹನದ ಮೂಲಕ ಫ್ಯಾಕ್ಟರಿ ಸರ್ಕಲ್ ವರೆಗೂ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಗೆಜ್ಜಲಗೆರೆ ಕಾಲೋನಿಯಲ್ಲಿ ಒಂದೂವರೆ ಲಕ್ಷ ಜನ ಭಾಗಿಯಾಗುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮತ ಬೇಟೆಯಾಡಲಿದ್ದಾರೆ. ಮೋದಿ ಎಂಟ್ರಿಯಿಂದ ಸ್ಥಳೀಯ ನಾಯಕರಲ್ಲಿ ಉತ್ಸಾಹ ಇಮ್ಮಡಿಯಾಗಲಿದೆ. ಹಳೆ ಮೈಸೂರು ಭಾಗ ಹಾಗೂ ಮಂಡ್ಯದಲ್ಲಿ ಬಿಜೆಪಿ ಗೆಲ್ಲಲು ಅನುಕೂಲವಾಗಲಿದೆ. ಮೋದಿ ಎಂಟ್ರಿಯಿಂದ ದಳಪತಿಗಳ ಭದ್ರಕೋಟೆ ಛಿದ್ರವಾಗೋದು ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆ.ಆರ್ ಪೇಟೆ ಬಳಿಕ ಇನ್ನುಳಿದ ಕ್ಷೇತ್ರಗಳಲ್ಲಿ ಬಿಜೆಪಿ ನಿಶ್ಚಿತ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ನಮೋ ಆಗಮನ ಮಂಡ್ಯದಲ್ಲಿ ಬಿಜೆಪಿಗೆ ರಾಜಕೀಯವಾಗಿ ಶಕ್ತಿ ಹೆಚ್ಚಿಸಲಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:25 am, Thu, 9 March 23