
ಮಂಡ್ಯ, ಜನವರಿ 16: ಇನ್ನೇನು 5 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನು ಆಸ್ತಿ ವಿಚಾರಕ್ಕೆ ಆತನ ಸಹೋದರನೇ ತನ್ನ ಮಕ್ಕಳ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್ ಮೃತ ದುರ್ದೈವಿಯಾಗಿದ್ದು, ಮನೆಯ ಕೊಟ್ಟಿಗೆಯಲ್ಲಿದ್ದ ಈತನನ್ನು ಚಾಕುವಿನಿಂದ 2Oಕ್ಕೂ ಹೆಚ್ಚು ಬಾರಿ ಚುಚ್ಚಿ ಸಾಯಿಸಲಾಗಿದೆ. ಲಿಂಗರಾಜು ಮತ್ತು ಅವನ ಮಕ್ಕಳಾದ ಭರತ್ ಹಾಗೂ ದರ್ಶನ್ ಕೊಲೆ ಆರೋಪಿಗಳಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ.
ತಂದೆ ಚಿನ್ನಮರಿಗೌಡ ನಿಧನದ ಬಳಿಕ ಎಲ್ಲ ವ್ಯವಹಾರಗಳನ್ನ ಹಿರಿಯಣ್ಣನಾದ ಲಿಂಗರಾಜು ನೋಡಿಕೊಳ್ಳುತ್ತಿದ್ದ. ಪಿತ್ರಾರ್ಜಿತವಾಗಿ ಬಂದಿದ್ದ 12 ಎಕರೆ ಕೃಷಿ ಭೂಮಿಯನ್ನು ತನ್ನ ತಾಯಿ ಹೆಸರಿಗೆ ಪೌತಿ ಖಾತೆ ಮಾಡಿಸುವ ಬದಲು ತನ್ನ ಹೆಸರಿಗೇ ಲಿಂಗರಾಜು ವರ್ಗಾವಣೆ ಮಾಡಿಸಿಕೊಂಡಿದ್ದ. ಅಲ್ಲದೆ ತಾಯಿ ಹೆಸರಿನಲ್ಲಿ ಖರೀದಿಸಿದ್ದ 6 ಎಕರೆ ಜಮೀನು, ಮೈಸೂರು ಮತ್ತು ಮಂಡ್ಯದಲ್ಲಿದ್ದ 4 ನಿವೇಶನಗಳನ್ನೂ ತನ್ನ ಹೆಸರಿಗೆ ಖಾತೆ ಮಾಡಿಕೊಂಡಿದ್ದ. ಮುಂದೆ ನಮ್ಮ ಪಾಲಿನ ಆಸ್ತಿಯನ್ನ ನಮ್ಮಣ್ಣ ನೀಡುತ್ತಾನೆ ಎಂದು ಯೋಗೇಶ್ ಸೇರಿದಂತೆ ಇಬ್ಬರು ಸಹೋದರರು ಹಾಗೂ ಸಹೋದರಿಯರು ನಂಬಿಕೊಂಡಿದ್ದರು. ಆದರೆ, ಅವರಿಗೆಲ್ಲ ಮೋಸ ಮಾಡಿ ಲಿಂಗರಾಜು ತನ್ನ ಪತ್ನಿ ಹೆಸರಿಗೆ ದಾನಪತ್ರ ಮಾಡುವ ಮೂಲಕ ಸಂಪೂರ್ಣ ಆಸ್ತಿಯನ್ನು ವರ್ಗಾವಣೆ ಮಾಡಿಸಿದ್ದ. ಈ ವಿಚಾರ ತಿಳಿದು ಸಹೋದರಾದ ಕೆಂಪರಾಜು, ಯೋಗೇಶ್ ಪ್ರಶ್ನೆ ಮಾಡಿದಾಗ ಲಿಂಗರಾಜು ಜಗಳ ತೆಗೆದು ಹಲ್ಲೆ ಮಾಡಿದ್ದ. ಬಳಿಕ ಆಸ್ತಿ ವಿಚಾರವಾಗಿ ಯೋಗೇಶ್ ನ್ಯಾಯಾಲಯದ ಮೊರೆಯೋಗಿದ್ದ. ಯೋಗೇಶ್ ಹತ್ಯೆ ಮಾಡಿದ್ರೆ ಉಳಿದವರು ಸೈಲೆಂಟ್ ಆಗುತ್ತಾರೆ ಎಂದು ಕೊಲೆ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ; ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ ಗಂಡ
ಕೊಲೆಯಾದ ಯೋಗೇಶ್ಗೆ ಮದುವೆ ಕೂಡ ನಿಶ್ಚಯವಾಗಿದ್ದು, ನೆಂಟರಿಸ್ಟರಿಗೆಲ್ಲ ಆಹ್ವಾನ ಪತ್ರಿಕೆ ನೀಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ತಿಂಗಳು 21ರಂದು ಹಸೆಮಣೆ ಏರಬೇಕಿತ್ತು. ಆದರೆ ಅಣ್ಣನ ಅಟ್ಟಹಾಸಕ್ಕೆ ಮದುವೆಗೂ ಮೊದಲೇ ತಮ್ಮ ಬಲಿಯಾಗಿದ್ದಾನೆ. ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಅಣ್ಣ ಲಿಂಗರಾಜು ಹೆಸರನ್ನೂ ಯೋಗೇಶ್ ಹಾಕಿಸಿದ್ದು, ಮುಂದೆ ನಿಂತು ಮದುವೆ ಮಾಡಬೇಕಿದ್ದ ಅಣ್ಣನೇ ತನ್ನ ಮಕ್ಕಳ ಜೊತೆ ಸೇರಿ ಯೋಗೇಶ್ನ ಪರಲೋಕಕ್ಕೆ ಕಳುಹಿಸಿದ್ದಾನೆ. ಇನ್ನು ಘಟನೆಯಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾಗೂ ಸಂಬಂಧಿಕರು ಆರೋಪಿ ಲಿಂಗರಾಜು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿರುವ ಪ್ರಸಂಗವೂ ನಡೆದಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ಶೋಧ ಶುರುಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:42 pm, Fri, 16 January 26