ಮಂಡ್ಯ ಸೆ.28: ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗದೆ, ನದಿಗಳಲ್ಲಿ ನೀರಿಲ್ಲದೆ ಜಲಾಶಯಗಳು ಬತ್ತುತ್ತಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ನೀರು ಪೂರೈಸುವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜ ಸಾಗರ (KRS) ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಹೀಗಿದ್ದರೂ ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಕಾವೇರಿ (Cauvery) ಜಲ ನಿಯಂತ್ರಣ ಸಮಿತಿ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. 49.45 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 2023ರ ಸೆಪ್ಟೆಂಬರ್ 27 ರಂದು 20.54 ಟಿಎಂಸಿ ನೀರು ಇತ್ತು. 2011ರ ಬಳಿಕ ಇದು ಎರಡನೇ ಬಾರಿ ಜಲಾಶಯದಲ್ಲಿ ಅತ್ಯಂತ ಕಡಿಮೆ ನೀರು ಸಂಗ್ರಹವಾಗಿದೆ.
ಈ ಹಿಂದೆ 2016ರಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಲಾಶಯದಲ್ಲಿ 14.84 ಟಿಎಂಸಿಗೆ ನೀರು ಸಂಗ್ರಹವಾಗಿತ್ತು. 2015 ಮತ್ತು 2016 ರಲ್ಲಿ ಹೊರತುಪಡಿಸಿ ಉಳಿದ ವರ್ಷಗಳಲ್ಲಿ 43 ಟಿಎಂಸಿ ನೀರು ಶೇಖರಣೆಯಾಗಿತ್ತು. 2021 ರಲ್ಲಿ 35.35 ಟಿಎಂಸಿ ನೀರು ಸಂಗ್ರಹವಾಗಿತ್ತು. 2015ರ ಸೆಪ್ಟೆಂಬರ್ 27 ರಂದು 25.1 ಟಿಎಂಸಿ ನೀರು ಇತ್ತು. ಆದರೆ ಮುಂಗಾರು ಮಳೆ ನಂತರ ನವೆಂಬರ್ ವೇಳೆಗೆ ಜಲಾಶಯದಲ್ಲಿ ಸುಮಾರು 33 ಟಿಎಂಸಿಗಳಷ್ಟು ನೀರು ಸಂಗ್ರಹವಾಗಿತ್ತು. ಇದು ಕಾವೇರಿ ಕೊಳ್ಳದ ಜನರಲ್ಲಿ ಸಂಸತ ಮೂಡಿಸಿತ್ತು.
ಇದನ್ನೂ ಓದಿ: ಸೆ.28ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ಮಾಹಿತಿ ಪ್ರಕಾರ, 2017 ರಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು. ಸೆಪ್ಟೆಂಬರ್ 27ರ ವೇಳೆಗೆ ಜಲಾಶಯದಲ್ಲಿ 28.58 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಅಕ್ಟೋಬರ್‌ನಲ್ಲಿ ಅಕಾಲಿಕ ಮಳೆಯಾದ ಪರಿಣಾಮ ಸುಮಾರು 34 ಟಿಎಂಸಿಗೆ ಏರಿಕೆ ಆಯ್ತು ಎಂದು ತಿಳಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶದ ಪ್ರಕಾರ ಈ ವರ್ಷ ಕೆಆರ್‌ಎಸ್‌ನಿಂದ ನಿರಂತರವಾಗಿ ನೀರು ಬಿಡುಗಡೆ ಮಾಡುತ್ತಿರುವುದರಿಂದ, ಸೆ.27ರ ವೇಳೆಗೆ ಜಲಾಶಯದಲ್ಲಿ ನೀರಿನ ಮಟ್ಟವು 97 ಅಡಿಗೆ ಕುಸಿದಿದೆ. ಕಳೆದ ವರ್ಷ ಈ ವೇಳೆಗೆ 123.92 ಅಡಿ ನೀರು ಇತ್ತು.
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಬುಧವಾರದ ವೇಳೆಗೆ ಗರಿಷ್ಠ ಮಟ್ಟಕ್ಕಿಂತ ಶೇ 50 ರಷ್ಟು ನೀರು ಕಡಿಮೆಯಾಗಿದೆ. ನಾಲ್ಕು ಪ್ರಮುಖ ಅಣೆಕಟ್ಟುಗಳ ಒಟ್ಟು ಸಂಗ್ರಹ ಸಾಮರ್ಥ್ಯವು 114.57 ಟಿಎಂಸಿ ಆಗಿದ್ದು, ಸೆಪ್ಟೆಂಬರ್ 27ರ ವೇಳೆಗೆ 59.43 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ನಾಲ್ಕು ಅಣೆಕಟ್ಟುಗಳಲ್ಲಿ 111.86 ಟಿಎಂಸಿ ನೀರು ಇತ್ತು.
ಕಬಿನಿ ಡ್ಯಾಂ (13.52 ಟಿಎಂಸಿ) ಹೇಮಾವತಿ ಡ್ಯಾಂ (18.42 ಟಿಎಂಸಿ ಅಡಿ) ಮತ್ತು ಹಾರಂಗಿ ಡ್ಯಾಂ (6.95 ಟಿಎಂಸಿ ಅಡಿ) ನೀರು ಇದೆ. ಹಾರಂಗಿಯ ಒಟ್ಟು ಸಂಗ್ರಹ ಸಾಮರ್ಥ್ಯ 8.50 ಟಿಎಂಸಿ, ಕಬಿನಿ 19.52 ಟಿಎಂಸಿ ಮತ್ತು ಹೇಮಾವತಿ 37.10 ಟಿಎಂಸಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ