ಕೃಷಿಗೆ ನಿಗದಿತ ಪ್ರಮಾಣದ ನೀರು ಬಿಟ್ಟಿಲ್ಲ; ಸಿಎಂ ಸಿದ್ದರಾಮಯ್ಯ ಎದುರು ಸತ್ಯ ಒಪ್ಪಿದ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್
ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿಗಳ ಮುಂದೆ ಕೃಷಿ ಇಲಾಖೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಾಸ್ತವ ಬಿಚ್ಚಿಟ್ಟರು. ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಬೇಕಿತ್ತು. ಶೇ 25ರಷ್ಟು ರೈತರು ಮಾತ್ರ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ಚಾಮರಾಜನಗರ, ಸೆಪ್ಟೆಂಬರ್ 27: ತೀವ್ರ ಬರಗಾಲ ಇರುವ ಕಾರಣ ರೈತರು ಬಿತ್ತನೆಯನ್ನೇ ಮಾಡಿಲ್ಲ. ಚಾಮರಾಜನಗರ (Chamarajanagar) ಜಿಲ್ಲೆಯ ಕೃಷಿ ಬೆಳೆಗೆ 9 ಟಿಎಂಸಿ ನೀರು ಕೊಡಬೇಕಿತ್ತು. ಆದರೆ ಕೇವಲ 7 ಟಿಎಂಸಿ ನೀರು ಕೊಟ್ಟಿದ್ದೇವೆ. ಕೆರೆಗಳಿಗೂ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಎದುರೇ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಸತ್ಯ ಒಪ್ಪಿಕೊಂಡಿದ್ದಾರೆ. ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿಗಳ ಮುಂದೆ ಕೃಷಿ ಇಲಾಖೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಾಸ್ತವ ಬಿಚ್ಚಿಟ್ಟರು.
ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಬೇಕಿತ್ತು. ಶೇ 25ರಷ್ಟು ರೈತರು ಮಾತ್ರ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ಕಳೆದ ವರ್ಷ ಶೇ 96.5 ಬಿತ್ತನೆ ಆಗಿತ್ತು. ಈ ವರ್ಷ ಶೇ 71ಬಿತ್ತನೆ ಆಗಿದೆ. ಮುಂಗಾರು ಮಳೆ ಕೊರತೆ ಆಗಿದೆ. ಅಂದಾಜು ಶೇ 33.50ರಷ್ಟು ಮಳೆ ಕೊರತೆ ಆಗಿದೆ. ಅಂದಾಜು ಶೇ 50ರಷ್ಟು ಬೆಳೆ ನಷ್ಟ ಆಗುತ್ತೆ. 29 ಸಾವಿರ ಹೆಕ್ಟೇರ್ ಬೆಳೆ ನಷ್ಟ ಆಗುತ್ತೆ. ಈ ಸಂಬಂಧ ಸರ್ಕಾರಕ್ಕೆ ವರದಿ ಕಳುಹಿಸಿದ್ದೇವೆ ಎಂದು ಕೃಷಿ ಇಲಾಖೆ ಜೆಡಿ ಮಾಹಿತಿ ನೀಡಿದರು.
ಇದೇ ವೇಳೆ, ನಮ್ಮಲ್ಲಿ ಮಳೆಯೇ ಆಗಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.
ಶಕ್ತಿ ಯೋಜನೆ ಮಾಹಿತಿ ಪಡೆದ ಸಿದ್ದರಾಮಯ್ಯ
ಶಕ್ತಿ ಯೋಜನೆ ಬಗ್ಗೆ ಚಾಮರಾಜನಗರದಲ್ಲಿ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಸಂಚಾರ ಪ್ರಮಾಣ ಹೆಚ್ಚಾಗಿದೆ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಹನೂರು ತಾಲೂಕಿನಲ್ಲಿ ಸ್ವಲ್ಪ ಸಮಸ್ಯೆಯಿದೆ ಎಂದು ಅಧಿಕಾರಿ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನೀನ್ಯಾಕೆ ಇಲ್ಲಿ ಇರೋದು? ಸಮಸ್ಯೆ ಇದೆ ಅಂತಾ ಹೇಳೋಕಾ? ಅಥವಾ ಪರಿಹಾರ ಮಾಡೋಕಾ? ವಿದ್ಯಾರ್ಥಿಗಳ ಪ್ರಯಾಣಕ್ಕೆ ಏನಾದ್ರೂ ತೊಂದರೆಯಿದೆಯಾ? ಎಂದು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗ್ತಿಲ್ಲ ಎಂದ ಸಾರಿಗೆ ಅಧಿಕಾರಿ ಅಶೋಕ್ ಉತ್ತರ ನೀಡಿದರು. ಬಳಿಕ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸುವಂತೆ ಸಿದ್ದರಾಮಯ್ಯ ತಾಕೀತು ಮಾಡಿದರು.
ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು; ಸಿದ್ದರಾಮಯ್ಯ
ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು, ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದು ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಈಗಾಗಲೇ 4 ಗ್ಯಾರಂಟಿ ಜಾರಿಯಾಗಿದ್ದು, ಜನವರಿಯಲ್ಲಿ 5ನೇ ಗ್ಯಾರಂಟಿ ಜಾರಿ ಮಾಡಲಾಗುವುದು. ಜನರಿಗೆ ಗ್ಯಾರಂಟಿ ತಲುಪಿಸುವ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಹಣ ಕೊಡುವ ಬಗ್ಗೆ ಸರ್ವೇ ಮಾಡಿದ್ದೇವೆ. ಶೇ 90ರಷ್ಟು ಜನ ಅಕ್ಕಿ ಕೇಳುತ್ತಿದ್ದಾರೆ ಎಂದು ಆಹಾರ ಇಲಾಖೆ ನಿರ್ದೇಶಕ ಯೋಗಾನಂದ್ ಅವರು ಸಿಎಂಗೆ ಮಾಹಿತಿ ನೀಡಿದರು.
ಅಧಿಕಾರಿಗಳ ವಿರುದ್ಧ ಹಲವು ಬಾರಿ ಸಿಟ್ಟಾದ ಸಿದ್ದರಾಮಯ್ಯ
ಸಭೆಯ ವೇಳೆ ಅಧಿಕಾರಿಗಳ ವಿರುದ್ಧ ಹಲವು ಬಾರಿ ಸಿದ್ದರಾಮಯ್ಯ ಸಿಟ್ಟಾದರು. ಗೃಹಜ್ಯೋತಿ ಯೋಜನೆ ಬಗ್ಗೆ ಮಾಹಿತಿ ಪಡೆದ ಅವರು, ರಾಜ್ಯದಲ್ಲಿ ಶೇ 53ರಷ್ಟು ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. ಚಾಮರಾಜನಗರದಲ್ಲಿ ಎಷ್ಟು ಬಳಕೆ ಆಗುತ್ತದೆ ಎಂದು ಪ್ರಶ್ನಿಸಿದರು. ಅಷ್ಟೇ ಬರುತ್ತೆ ಎಂದು ಉತ್ತರಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಎಷ್ಟು ಅಂತ ಸರಿಯಾಗಿ ಹೇಳು ಎಂದು ಮರುಪ್ರಶ್ನೆ ಹಾಕಿದರು. ನಿನಗೆ ಈ ವಿಚಾರ ಗೊತ್ತಿಲ್ಲ ಅಂದ್ರೆ ಏನ್ ಕೆಲಸ ಮಾಡುತ್ತೀಯಾ? ದಿನಾಲೂ ನೀನು ಆಫೀಸ್ಗೆ ಬರಲ್ವಾ ಅಂತಾ ಅಧಿಕಾರಿಯನ್ನು ಪ್ರಶ್ನಿಸಿದರು. ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀಯಾ ಎಂದು ತರಾಟೆಗೆ ತೆಗೆದುಕೊಂಡರು.