ಮಂಡ್ಯ, ಜನವರಿ 20: ಶ್ರೀರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ (Siddaramaiah) ರನ್ನೇ ಕರೆದಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಅಲ್ವಾ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಸದಸ್ಯರನ್ನೇ ಪ್ರಧಾನಿ ನರೇಂದ್ರ ಮೋದಿ ಕರೆದಿಲ್ಲ. ಅಪೂರ್ಣ ರಾಮಮಂದಿರ ಉದ್ಘಾಟನೆಗೆ ಅನೇಕ ಮಠಗಳು ವಿರೋಧಿಸಿವೆ. ಲೋಕಸಭೆ ಚುನಾವಣೆಗಾಗಿ ಶ್ರೀರಾಮಮಂದಿರ ಉದ್ಘಾಟಿಸುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ನಮಗೂ ಸಂತಸ, ನಾವು ರಾಮಭಕ್ತರೇ. ಚುನಾವಣೆ ದೃಷ್ಟಿಯಿಂದ ಉದ್ಘಾಟನೆ ಮಾಡುವುದು ಹೆಚ್ಚು ದಿನ ನಡೆಯಲ್ಲ. ದೇವರು, ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರದಲ್ಲಿ ರಜೆ ಘೋಷಣೆ ಮಾಡಿ, ಇಡೀ ದೇಶಕ್ಕೆ ರಜೆ ಕೊಡಿಸಲಿ. ಅಪರೂಪಕ್ಕೆ ಉತ್ತರಪ್ರದೇಶ ಸಿಎಂ ಯೋಗಿರನ್ನು ಪಕ್ಕಕ್ಕೆ ಕರೆದುಕೊಳ್ಳುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಲ್ಲ, ಎಲ್ಲಾ ಮೋದಿಯವರೇ. ಮೋದಿಯ ದೊಡ್ಡ ಫೋಟೋಗಳು, ರಾಮನ ಚಿಕ್ಕ ಫೋಟೋ ಹಾಕಿದ್ದಾರೆ. ದೇವರನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸ್ಪರ್ಧಿಸಿ ಗೆದ್ದು ತೋರಿಸಲಿ: ಆರ್ ಅಶೋಕ್ ಸವಾಲು
ಭಾರತೀಯ ಜನತಾ ಪಕ್ಷದವರಿಗೆ ಜನ ಉತ್ತರ ಕೊಡುವ ದಿನ ಬರುತ್ತದೆ. ಈ ಚುನಾವಣೆಯಲ್ಲೇ ಬರಬಹುದು ಅಥವಾ ಮುಂದೆಯೂ ಆಗಬಹುದು ಎಂದಿದ್ದಾರೆ.
ಸಂಸದೆ ಸುಮಲತಾ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆಯೇ ಆಗಿಲ್ಲ. ನನಗೂ ಮತ್ತು ಬೇರೆಯವರಿಗೂ ಕೆಲವು ವ್ಯತ್ಯಾಸಗಳು ಇದೆ. ಹೀಗಾಗಿ ಚರ್ಚೆ ಆಗದ ವಿಚಾರ ಪ್ರಸ್ತಾಪಿಸಲ್ಲ. ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಡಿಸಿಎಂ ಡಿಕೆ ಶಿವಕುಮಾರ್ ವಿರೋಧ ಬಗ್ಗೆ ನನಗೆ ಗೊತ್ತಿಲ್ಲ.
ಗೆದ್ದ ಬಳಿಕ ಸುಮಲತಾ ನನ್ನ ಬಳಿ ರಾಜಕಾರಣ ಚರ್ಚೆ ಮಾಡಿಲ್ಲ. ಆಗಾಗ ಆಕಸ್ಮಿಕ ಭೇಟಿಯಾದಾಗ ವಿಶ್ವಾಸದಲ್ಲಿ ಮಾತನಾಡಿದ್ದೇವೆ ಅಷ್ಟೇ. ಕೆಲವು ಕಡೆ ಸ್ಪರ್ಧಿಸಿ ಎಂದು ಸಚಿವರಿಗೆ ಹೈಕಮಾಂಡ್ ಹೇಳಿದ್ದು ಸತ್ಯ. ಆದರೆ ಮಂಡ್ಯ ಲೋಕಸಭೆ ಕ್ಷೇತ್ರದ ವಿಚಾರದಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ.
ಎಂಎಲ್ಸಿ ಮಧು ಮಾದೇಗೌಡರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮಧುಮಾದೇಗೌಡರ ಜೊತೆಗೆ ನಾನು ಮಾತನಾಡಿದ್ದೇನೆ. ಕೆಲವು ಸಮಸ್ಯೆಗಳ ಬಗ್ಗೆ ಮಾದೇಗೌಡರು ಮಾತಾಡಿದ್ದಾರೆ. ಸಮಸ್ಯೆಗಳು ಪಕ್ಷದ ಆಂತರಿಕ ವಿಚಾರ, ಹೇಳಲು ಆಗಲ್ಲ. ನಮ್ಮ ಜೊತೆ ಚುನಾವಣೆಯಲ್ಲಿ ಸಕ್ರೀಯವಾಗಿರಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಮಾಡಲಿ. ನಮಗೆ ಸ್ಥಳೀಯ ಅಭ್ಯರ್ಥಿ ಇದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.