ಮಂಡ್ಯ, ಜ.28: ಕೆರಗೋಡು ಗ್ರಾಮದಲ್ಲಿ (Keragodu) ನುಮ ಧ್ವಜ ತೆರವುಗೊಳಿಸಿದ್ದಕ್ಕೆ ಕೆರಳಿದ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು, ಕಾರ್ಯಕರ್ತರು, ಸ್ಥಳೀಯರು ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಮಹಿಳೆಯರು, ಸಣ್ಣ ಮಕ್ಕಳು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದ ಆರ್.ಅಶೋಕ್, ಅಶ್ವತ್ಥನಾರಾಯಣ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಕೆಲವು ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾರೀ ವಿರೋಧ ಹಾಗೂ ಪ್ರತಿಭಟನೆಯ ನಡುವೆ ಜಿಲ್ಲಾಡಳಿತವು ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದರು. ಹೀಗಿದ್ದರೂ ತಣ್ಣಗಾಗದ ಹಿಂದೂ ಕಾರ್ಯಕರ್ತರು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಮತ್ತೆ ಧ್ವಜಸ್ತಂಭದತ್ತ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅಶೋಕ್ ಮತ್ತಿತರರನ್ನು ವಶಕ್ಕೆ ಪಡೆದರು. ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಅಶೋಕ್, ಮಧ್ಯಾಹ್ನದ ನಂತರ ರಾಷ್ಟ್ರಧ್ವಜ ಏರಿಸಿ ನಿಯಮ ಉಲ್ಲಂಘನೆ ಮಾಡಲಾಗಿದೆ, ಮಹಿಳೆಯರ ಮೇಲೆ ಲಾಠಿ ಬೀಸಲಾಗಿದೆ. ಹನುಂತನ ದೇವಸ್ಥಾನದ ಮುಂದೆ ಕೇಸರಿ ಧ್ವಜ ಹಾರಿಸಲು ಯಾರ ಅನುಮತಿ ಬೇಕು ಎಂದು ಪ್ರಶ್ನಿಸಿದ್ದಾರೆ. ಹಿಂದೂ ವಿರೋಧಿ ನೀತಿ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಜೆಡಿಎಸ್ ಸಹ ಭಾಗಿಯಾಗುತ್ತದೆ. ದತ್ತಪೀಠ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಕೆರಗೋಡು ಧ್ವಜಸ್ತಂಭದಲ್ಲಿ ಹಾರಿದ ರಾಷ್ಟ್ರಧ್ವಜ; ಪಕ್ಕದಲ್ಲೇ ಹನುಮ ಧ್ವಜ ಏರಿಸಿದ ಆರ್.ಅಶೋಕ್
ಕೈಯಲ್ಲಿ ಹನುಮ ಧ್ವಜವನ್ನು ಹಿಡಿದುಕೊಂಡು ಧ್ವಜಸ್ತಂಬದ ಬಳಿ ತೆರಳಿ ರಾಷ್ಟ್ರ ಧ್ವಜ ಇಳಿಸಲು ಬಿಜೆಪಿ ನಾಯಕರು ಮುಂದಾಗಿದ್ದು, ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ಪೊಲೀಸರನ್ನ ತಳ್ಳಿ ಒಳಗೆ ಹೋಗಲು ಯತ್ನಿಸುತ್ತಿದ್ದಾರೆ.
ನಾಳೆ ಮಂಡ್ಯಲ್ಲಿ ಪ್ರತಿಭಟನೆಗೆ ಹಿಂದೂರ ಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ. ಕೆರಗೋಡಿನಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Sun, 28 January 24