AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ ತಿರುವು ಪಡೆದುಕೊಂಡ ಮಂಡ್ಯ ಕೇಸರಿ ಧ್ವಜ ವಿವಾದ; ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಪ್ರತಿಭಟನೆ

ಕೆರೆಗೋಡು ಧ್ವಜಸ್ಥಂಬದಿಂದ ಹನುಮ ಧ್ವಜ ತೆರವುಗೊಳಿಸಿರುವುದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳದಲ್ಲಿ ಉದ್ವಿಘ್ನತೆ ಸ್ಥಿತಿ ಉಂಟಾಗಿದೆ, ಹಿಂದೂಪರ ಸಂಘಟನೆಗಳ ಪ್ರತಿಭಟನೆಯ ಸಾಕಷ್ಟು ತೀವ್ರತೆ ಪಡೆದುಕೊಳ್ಳುತ್ತಿರುವ ನಡುವೆ ಪ್ರತಿಭಟನೆಗೆ ಬಿಜೆಪಿ ಹಾಗೂ ಜೆಡಿಎಸ್ ಸಾಥ್ ನೀಡಿದೆ. ವಿಪಕ್ಷಗಳ ಕಾರ್ಯಕರ್ತರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾರು ಏನಂದ್ರು ಇಲ್ಲಿದೆ ನೋಡಿ.

ರಾಜಕೀಯ ತಿರುವು ಪಡೆದುಕೊಂಡ ಮಂಡ್ಯ ಕೇಸರಿ ಧ್ವಜ ವಿವಾದ; ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ರಾಜಕೀಯ ತಿರುವು ಪಡೆದುಕೊಂಡ ಮಂಡ್ಯದ ಕೆರೆಗೋಡು ಧ್ವಜಸ್ಥಂಬದಿಂದ ಹನುಮ ಧ್ವಜ ತೆರವು ವಿವಾದ
TV9 Web
| Updated By: Rakesh Nayak Manchi|

Updated on: Jan 28, 2024 | 3:09 PM

Share

ಬೆಂಗಳೂರು, ಜ.28: ಮಂಡ್ಯ (Mandya) ಜಿಲ್ಲೆಯ ಕೆರೆಗೋಡು ಧ್ವಜಸ್ಥಂಬದಿಂದ ಹನುಮ ಧ್ವಜ ತೆರವುಗೊಳಿಸಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರೀ ಪ್ರತಿಭಟನೆ ನಡೆಯುತ್ತಿದೆ. ಮಹಿಳೆಯರು, ಮಕ್ಕಳು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಕೇಸರಿ ಧ್ವಜ ವಿವಾದ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ (Protest) ಭಾಗಿಯಾಗಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹನುಮ ಧ್ವಜ ತೆರವು ಖಂಡಿಸಿ ಟ್ವೀಟ್ ಮಾಡಿದ ರಾಜ್ಯ ಬಿಜೆಪಿ ಘಟಕ, ಜನ ಹಬ್ಬಗಳನ್ನು ಆಚರಿಸದಂತೆ, ನಮ್ಮ ಸಂಸ್ಕೃತಿ ಸಂಭ್ರಮಿಸದಂತೆ ಅಧಿಕಾರಿಗಳು ಮತ್ತು ಪೊಲೀಸರನ್ನು ಹಳ್ಳಿ ಹಳ್ಳಿಗಳಿಗೆ ಕಳಿಸಿ ಬ್ರಿಟಿಷ್ ಸರ್ಕಾರ ದಬ್ಬಾಳಿಕೆ ಮಾಡುತ್ತಿತ್ತು. ಬ್ರಿಟಿಷರ ಸಂಜಾತರಾಗಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಈಗ ಅದನ್ನು ಹಿಂದೂಗಳ ವಿರುದ್ಧ ಮಾಡುತ್ತಿದೆ. ಸಿದ್ದರಾಮಯ್ಯ ಅವರೇ.. ಹಿಂದೂಗಳ ಭಕ್ತಿಯ ಮೇಲೆ ನಿಮಗೆ ಏಕಿಷ್ಟು ಕೋಪ? ದಮನಕಾರಿ ನೀತಿ ನಿಮ್ಮ ಸರ್ಕಾರಕ್ಕೂ ಒಳ್ಳೆಯದಲ್ಲ, ನಮ್ಮ ಸಮಾಜಕ್ಕೂ ಶ್ರೇಯಸ್ಸಲ್ಲ. ನಮ್ಮತನ ಕಾಪಾಡಿಕೊಳ್ಳಲು ಮಹಿಳೆಯರು ಮಧ್ಯರಾತ್ರಿ ಎದ್ದು ಕಾಯುವಂತೆ ಮಾಡಿದ್ದೀರಿ, ಅವರ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದಿದೆ.

ಮಂಡ್ಯದಲ್ಲಿನ ಘಟನೆ ಹಿಂದೂ ವಿರೋಧಿ ನೀತಿ

ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಮಂಡ್ಯದಲ್ಲಿ ಅನುಮತಿ ಪಡೆದು 108 ಅಡಿ ಎತ್ತರದ ಧ್ವಜ ಹಾಕಿದ್ದರು. ಹನುಮಂತನ ಬಾವುಟ ಕಿತ್ತು ಹಾಕಿರುವುದಕ್ಕೆ ಕಾಂಗ್ರೆಸ್ ಕಾರಣ. ಬಾಯಲ್ಲಿ ಶ್ರೀರಾಮ ಇದ್ದರೆ ಸಾಲದು, ಮನಸ್ಸಿನಲ್ಲೂ ಇರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಿನಲ್ಲಿ ಟಿಪ್ಪು‌ಸುಲ್ತಾನ್ ಇದ್ದಾರೆ. ಮಂಡ್ಯದಲ್ಲಿನ ಘಟನೆ ಹಿಂದೂ ವಿರೋಧಿ ನೀತಿ ಎಂದರು.

ಹನುಮನ ವಿಚಾರದಲ್ಲಿ ಕಾಂಗ್ರೆಸ್ ದ್ವೇಷದ ರಾಜಕೀಯ ಮಾಡುತ್ತಿದೆ. ಅಮಾಯಕರ ಮೇಲೆ ಲಾಠಿಚಾರ್ಜ್ ಮಾಡಿ 144 ಸೆಕ್ಷನ್ ಹಾಕಿದ್ದಾರೆ. ಕುಕ್ಕರ್​ನಲ್ಲಿ ಬಾಂಬ್ ಇಟ್ಟುಕೊಂಡು ಬಂದವರನ್ನು ಭಾಯ್ ಅಂತಾರೆ. ಇಂತಹ ಕೃತ್ಯ ಮಾಡಿದವರಿಗೆ ಏನು ಹೇಳಬೇಕು ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ, ಅದೇ ಜಾಗದಲ್ಲಿ ಮತ್ತೆ ಧ್ವಜ ಹಾರಿಸುತ್ತೇವೆ ಎಂದರು.

ಮಂಡ್ಯ ಬೆಳವಣಿಗೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಸಿದ್ದರಾಮಯ್ಯ ಮುಸಲ್ಮಾನರ ತುಷ್ಟೀಕರಣ ಮಾಡುವ ವ್ಯಕ್ತಿ. ಸಿದ್ದರಾಮಯ್ಯ ಒಬ್ಬ ಹಿಂದೂ ವಿರೋಧಿ ಎಂದರು.

ಇದನ್ನೂ ಓದಿ: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರುವು: ಗ್ರಾಮಸ್ಥರು-ಸರ್ಕಾರದ ನಡುವೆ ಜಟಾಪಟಿ ಏಕೆ? ಇಲ್ಲಿದೆ ಕಾರಣ

ರಾಯಚೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ರಾಘವೇಂದ್ರ, ಗ್ರಾಮ ಪಂಚಾಯಿತಿ ನಿರ್ಣಯ ಮಾಡಿ‌ ಹನುಮನ ಧ್ವಜ ಹಾಕಿದೆ. ರಾಜ್ಯ ಸರ್ಕಾರ ಗೂಂಡಾ ವರ್ತನೆ ತೋರಿಸಿದೆ. ದಬ್ಬಾಳಿಕೆ ಮಾಡಿ ಪೊಲೀಸರ ಮೂಲಕ ಧ್ವಜ ಇಳಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಮಾತು ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿಯೂ ಹಲವು ಕಡೆ ಅಡೆ ತಡೆ ಆಗಿವೆ, ಅರೆಸ್ಟ್ ಮಾಡಲಾಗಿದೆ. ಎಲ್ಲಾ ಕಡೆ ಸಮಸ್ಯೆ ಆಗುತ್ತಿದೆ ಎಂದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ಬಾಹೀರ ಚಟುವಟಿಕೆ ಮಾಡೋರಿಗೆ ರಕ್ಷಣೆ ಕೊಡಲಾಗುತ್ತಿದೆ. ಸರ್ಕಾರದ ಉದ್ದೇಶವೇ ಓಲೈಕೆ ರಾಜಕಾರಣ. ದಲಿತ ಮಹಿಳೆ ಮೇಲೆ, ಅಲ್ಪ ಸಂಖ್ಯಾತ ಮಹಿಳೆ ಮೇಲೆ ದೌರ್ಜನ್ಯ ಆದರೂ ಕ್ರಮ ಆಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳು ಶೇ.30 ರಷ್ಟು ಹೆಚ್ಚಳ ಆಗಿದೆ. ಕಾನೂನು ಕೈಗೆತ್ತಿಕೊಂಡವರು ನಿರ್ಭಿಡೆಯಿಂದ ವ್ಯವಹಾರ ಮಾಡುತ್ತಿದ್ದಾರೆ. ಬಿಹಾರ್ ತರ ಜಂಗಲ್ ರಾಜ್ ನಮ್ಮ ರಾಜ್ಯದಲ್ಲಿಯೂ ಉಂಟಾಗಿದೆ ಎಂದರು.

ಹನುಮ ಧ್ವಜ ಕಟ್ಟಿದ್ದಕ್ಕೆ ಸ್ಥಳೀಯ ಅಧಿಕಾರಿಗಳು ವಿವಾದ ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶಾಸಕ ಸುನೀಲ್​ ಕುಮಾರ್​ ಹೇಳಿದ್ದಾರೆ. ಗ್ರಾಮಸ್ಥರು ಹಾಕಿದ ಧ್ವಜವನ್ನು ಕೆಳಗಿಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಸಿದ್ದರಾಮಯ್ಯಗೆ ಕೇಸರಿ ಕಂಡರೆ ಆಗಲ್ಲ ಅನ್ನೋದನ್ನು ಅವರೇ ಉಲ್ಲೇಖಿಸಿದ್ದರು ಎಂದರು.

ರಾಮಮಂದಿರ ಉದ್ಘಾಟನೆ ವೇಳೆ ಸಂಭ್ರಮದ ವಾತಾವರಣ ಇತ್ತು. ಪ್ರತಿ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಕೇಸರಿ ಕಂಡ ಕಡೆ ಹೀಗೆ ಮಾಡಿದರೆ ಹೇಗೆ? ಹಸಿರು ಧ್ವಜ ಬೇಕಾದ ಕಡೆ ಹಾಕುತ್ತಿದ್ದಾರೆ ಅದನ್ನು ತೆಗೆಯುತ್ತೀರಾ? ಇಡೀ ಕೆರಗೋಡು ಗ್ರಾಮದ ಜನ ಒಂದಾಗಿ ಹನುಮ‌ ಧ್ವಜ ಹಾಕಿದ್ದಾರೆ. ಸರ್ಕಾರದ ನಿಲುವನ್ನು ಖಂಡಿಸುತ್ತೇವೆ. ಒಂದು ಕೇಸರಿ ಧ್ವಜವನ್ನು ತೆಗೆದರೆ, ಸಾವಿರ ಕೇಸರಿ ಧ್ವಜ ಹಾರಾಡುತ್ತದೆ ಎಂದರು.

ವಿವಾದ ಕೇಂದ್ರವಾಗಿ ಮಾಡುತ್ತಿರುವ ಅಧಿಕಾರಿಗಳು

ಹಸಿರು ಧ್ವಜ ಬೇಕಾದ ಕಡೆ ಹಾಕುತ್ತಿದ್ದಾರೆ ಅದನ್ನ ನೀವು ತೆಗೆಯುತ್ತೀರಾ? ಎಲ್ಲೆಲ್ಲಿ ಗೋರಿ ನಿರ್ಮಾಣ ಆಗಿದೆ ಅಂತ ತೋರಿಸುತ್ತೇವೆ ಅದನ್ನೆಲ್ಲ ತೆಗೆಯುತ್ತೀರಾ? ಕೇಸರಿ ಕಂಡ ಕಡೆಗಳೆಲ್ಲ ಹೀಗೆ ಮಾಡಿದರೆ ಹೇಗೆ? ರಾಮ ಮಂದಿರದ ಉದ್ಘಾಟನೆಗೆ ಹೋಗಲ್ಲ ಅಂತ ಕಾಂಗ್ರೆಸ್ ಹೇಳಿತ್ತು. ಈಗ ಜನರ‌ ಆಚರಣೆಗಳನ್ನೂ ಸಹಿಸುವುದಿಲ್ಲ ಅಂದರೆ ಏನು ಹೇಳೋದು ಎಂದು ಪ್ರಶ್ನಿಸಿದರು.

ಟ್ವೀಟ್ ಮಾಡಿದ ಬಿಜೆಪಿ ನಾಯಕ ಸಿಟಿ ರವಿ, ಮಂಡ್ಯದ ಕೆರಗೋಡು ಗ್ರಾಮದಲ್ಲಿ ಅಯೋಧ್ಯ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಹಾರಿಸಲಾಗಿದ್ದ ಹನುಮ ಧ್ವಜ ಇಳಿಸಿದ ಕಾಂಗ್ರೆಸ್ ಸರ್ಕಾರ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ಹನುಮ ಧ್ವಜವನ್ನು ನಿಷೇಧಿಸಿದೆಯೇ? ನಿಷೇಧ ಮಾಡದಿದ್ದರೆ, ಅನುಮತಿ ಪಡೆದು ಧ್ವಜ ಸ್ಥಂಭಕೆ ಕಟ್ಟಿದ ಹನುಮಧ್ವಜವನ್ನು ಕಿತ್ತು ಹಾಕಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನೆನಪಿಗಾಗಿ ಹಾರಿಸಲಾದ ಹನುಮ ಧ್ವಜ ತೆರವಿಗೆ ಗ್ರಾಮಸ್ಥರ ವಿರೋಧ, ಲಾಠಿ ಚಾರ್ಜ್​​​​

ಅಧಿಕಾರಿಗಳ ಉದ್ಧಟನವಾದರೆ ಕೂಡಲೇ ಅವರನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಿ. ಆಳುವವರ ಮರ್ಜಿಗೆ ಅನುಗುಣವಾಗಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದರೆ, ನಿಮಗೆ ತಾನು ಹಿಂದೂ ಎಂದು ಕರೆದುಕೊಳ್ಳುವ ಯಾವ ನೈತಿಕತೆಯು ಉಳಿದಿಲ್ಲ. ನನ್ನ “ಹೆಸರಿನಲ್ಲಿ ರಾಮ ಇದ್ದಾನೆ, ನಾನೂ ಹಿಂದು” ಎಂದು ಹೇಳಿಕೊಳ್ಳುವ ಯಾವ ನೈತಿಕತೆಯೂ ಇಲ್ಲ ಎಂದಿದ್ದಾರೆ.

ನೀವು ಮಾಡಿರುವುದು ಜನರ ಭಾವನೆಗಳನ್ನು ಕೆಣಕುವ ಕೆಲಸ. ಅಧಿಕಾರದ ಬಲದಿಂದ, ಅಧಿಕಾರದ ಮದದಿಂದ ಆಡಳಿತ ಯಂತ್ರದ ದುರುಪಯೋಗ ಮಾಡಿ ಧ್ವಜ ಇಳಿಸಿರಬಹುದು. ಇದೆ ಜನ ನಿಮ್ಮನ್ನು ಅಧಿಕಾರದಿಂದ ಇಳಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಈ ಹಿಂದೂ ವಿರೋಧಿ ನೀತಿಯನ್ನು ಕಟುವಾಗಿ ಖಂಡಿಸುತ್ತೇನೆ. ಮನೆ ಮನೆಯಲ್ಲೂ ಹನುಮ ಧ್ವಜ ಹಾರಿಸುವ ಅಭಿಯಾನದ ಮೂಲಕ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಬೇಕಾಗಿ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಸಿಟಿ ರವಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ರಾಮ ಹನುಮ ಆಗಲ್ಲ, ಟಿಪ್ಪು ಅಂದ್ರೆ ಪ್ರೀತಿ

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಎಂಎಲ್​ಸಿ ರವಿ ಕುಮಾರ್, ಈ ಸರ್ಕಾರಕ್ಕೆ ರಾಮ, ಹನುಮ, ಸಾವರ್ಕರ್ ಅಂದರೆ ಆಗಲ್ಲ, ಟಿಪ್ಪು ಸುಲ್ತಾನ್ ಕಂಡ್ರೆ ಪ್ರೀತಿ. ಗೋಹತ್ಯೆ ನಿಷೇಧ ಕಾಯ್ದೆ ಕಾನೂನನ್ನ ಜಾರಿಗೊಳಿಸಿ ಅಂದರೆ ಮಾಡಲ್ಲ. ಹಿಂದೂಗಳ ಅಂದರೆ ಆಗಲ್ಲ. ವಿನಾಯಕಾಲೆ ವಿಪರೀತ ಬುದ್ಧಿ ಅನ್ನೋ ಹಾಗಿದೆ ಎಂದರು.

ಟಿಪ್ಪು ಜಯಂತಿಯನ್ನ ವಿಜೃಂಭಣೆಯಿಂದ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯಗೆ ಕುಂಕುಮ, ವಿಭೂತಿ ಹಚ್ಚಿಕೊಂಡು ಬಂದರೆ ಆಗಲ್ಲ. ರಾಮನ ದೇವಸ್ಥಾನಕ್ಕೆ ಯಾಕೆ ಹೋಗಬೇಕು ಅಂತ ಸರ್ಕಾರ ಕೇಳುತ್ತದೆ. ಕೂಡಲೇ ಮಂಡ್ಯದಲ್ಲಿ ಧ್ವಜ ಹಾರಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಶ್ರೀರಾಮ ದೇವಸ್ಥಾನಗಳ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ಹಿಂದೂಗಳನ್ನ ಅವಹೇಳನ ಮಾಡುವ ನೀತಿ ಇದಾಗಿದೆ. ಅಲ್ಪಸಂಖ್ಯಾತರ ಮತಗಳಿಗಾಗಿ ಹೀಗೆ ಮಾಡುತ್ತಿದ್ದಾರೆ. 144 ಸೆಕ್ಷನ್ ನ ಕೂಡಲೇ ತೆಗೆದು ಹಾಕಬೇಕು. ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ