ಕೆರಗೋಡು ಕೇಸರಿ ಧ್ವಜ ತೆರವು: ಶಾಸಕ ರವಿ ಗಣಿಗ ನಿವಾಸದ ಮುಂದೆ ಕಾರ್ಯಕರ್ತರ ಪ್ರತಿಭಟನೆ
ಕೆರೆಗೋಡು ಧ್ವಜಸ್ತಂಭದಿಂದ ಹನುಮ ಧ್ವಜ ತೆರವುಗೊಳಿಸಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರ ನಿವಾಸದ ಮುಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ. ಧ್ವಜ ತೆರವು ಬಗ್ಗೆ ಮಾತನಾಡಿದ ಶಾಸಕರು, ಕೆರೆಗೋಡಿನಲ್ಲಿ ಬಿಜೆಪಿ, ಜೆಡಿಎಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ಕಾನೂನು ಉಲ್ಲಂಘಿಸಿ ತಪ್ಪು ಹೊರೆಸುತ್ತಿದ್ದಾರೆ ಎಂದಿದ್ದಾರೆ.
ಬೆಂಗಳೂರು, ಜ.28: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರ ಹಿಂದೂ ಸಂಘಟನೆಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ವಿಪಕ್ಷಗಳಾದ ಬಿಜೆಪಿ ಜೆಡಿಎಸ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ಈ ನಡುವೆ ಬೆಂಗಳೂರು (Bengaluru) ನಗರದ ಕಮಲಾನಗರದಲ್ಲಿರುವ ಕಾಂಗ್ರೆಸ್ ಶಾಸಕ ರವಿ ಗಣಿಗ (Ravi Ganiga) ನಿವಾಸದ ಮುಂದೆ ಜಮಾಯಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಹತ್ತಾರು ಬೈಕಿನಲ್ಲಿ ಬಂದ ಶ್ರೀರಾಮ ಸೇನೆ ಕಾರ್ಯಕರ್ತರು ಶಾಸಕ ರವಿ ಗಣಿಗ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಸವೇಶ್ವರ ಠಾಣೆಯ ಪೊಲೀಸರು, 15ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರುವು: ಗ್ರಾಮಸ್ಥರು-ಸರ್ಕಾರದ ನಡುವೆ ಜಟಾಪಟಿ ಏಕೆ? ಇಲ್ಲಿದೆ ಕಾರಣ
ಕೆರೆಗೋಡು ಧ್ವಜ ವಿವಾದದ ಬಗ್ಗೆ ಮಾತನಾಡಿದ ಶಾಸಕ ರವಿ ಗಣಿಗ, ಕೆರೆಗೋಡಿನಲ್ಲಿ ಬಿಜೆಪಿ, ಜೆಡಿಎಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ಕಾನೂನು ಉಲ್ಲಂಘಿಸಿ ತಪ್ಪು ಹೊರೆಸುತ್ತಿದ್ದಾರೆ. ಮೂಲತಃ ಅದು ಸರ್ಕಾರಿ ಜಾಗ, ಅಲ್ಲಿ ಬಸ್ ನಿಲ್ದಾಣ ಕಟ್ಟಲು ನಿರ್ಧರಿಸಿದ್ದೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ನಾನು ಸ್ಥಳವನ್ನೂ ಪರಿಶೀಲನೆ ಮಾಡಿದ್ದೆ. ಆಗ ಜೆಡಿಎಸ್ ಹುಡುಗರು ಬಂದು ಅಲ್ಲಿ ಗರುಡಗಂಬ ನೆಡುತ್ತೇವೆ, ಬಸ್ ನಿಲ್ದಾಣ ಕೆಲಸ ಶುರು ಆದಾಗ ಗರುಡಗಂಬ ಬೇರೆ ಕಡೆ ಇಡುತ್ತೇವೆ ಅಂದಿದ್ದರು ಎಂದರು.
ಇದನ್ನೂ ಓದಿ: ರಾಜಕೀಯ ತಿರುವು ಪಡೆದುಕೊಂಡ ಮಂಡ್ಯ ಕೇಸರಿ ಧ್ವಜ ವಿವಾದ; ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಗ್ರಾಮ ಪಂಚಾಯ್ತಿಗೆ ಪತ್ರ ಕೊಟ್ಟು ರಾಷ್ಟ್ರ ಧ್ವಜ ಅಥವಾ ರಾಜ್ಯ ಧ್ವಜ ನೆಡುತ್ತೇವೆ ಅಂತ ಅನುಮತಿ ಪಡೆದಿದ್ದರು. ಈಗ ರಾತ್ರೋರಾತ್ರಿ ಕೇಸರಿ ಧ್ವಜ ಹಾರಿಸಿ ಇಲ್ಲ ಸಲ್ಲದ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಬಿಜೆಪಿ, ಜೆಡಿಎಸ್ನವರು ರಾಷ್ಟ್ರ ಪ್ರೇಮಿಗಳಲ್ವಾ? ಯಾಕೆ ಅವರು ರಾಷ್ಟ್ರ ಧ್ವಜ ಹಾರಿಸಲಿಲ್ಲ? ರಾಷ್ಟ್ರ ಧ್ವಜ ಹಾರಿಸುವುದಾದರೆ ನಾನೇ ಎರಡು ಲಕ್ಷ ರೂಪಾಯಿ ಕೊಡುತ್ತೇನೆ. ಈಗ ಇವರಿಂದಾಗಿ ಬೇರೆ ಬೇರೆ ಸಂಘಟನೆಗಳೂ ತಮ್ಮ ಧ್ವಜ ಹಾರಿಸಲು ಅನುಮತಿ ಕೇಳಿದ್ದಾರೆ. ಬಿಜೆಪಿ, ಜೆಡಿಎಸ್ ಕ್ಷುಲ್ಲಕ ರಾಜಕೀಯ ಬಿಟ್ಟು, ತಮ್ಮ ಬೇಳೆ ಬೇಯಿಸಿಕೊಳ್ಳುವ ಬದಲು ಶಾಂತಿ ನೆಲೆಸಲು ಸಹಕರಿಸಲಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Sun, 28 January 24