ಕೆರಗೋಡು ಧ್ವಜಸ್ತಂಭದಲ್ಲಿ ಹಾರಿದ ರಾಷ್ಟ್ರಧ್ವಜ; ಪಕ್ಕದಲ್ಲೇ ಹನುಮ ಧ್ವಜ ಏರಿಸಿದ ಆರ್.ಅಶೋಕ್
ಹಿಂದೂ ಕಾರ್ಯಕರ್ತರು ಹಾಗೂ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ತ್ರೀವ್ರ ಪ್ರತಿಭಟನೆಯ ನಡುವೆ ಮಂಡ್ಯ ಜಿಲ್ಲಾಡಳಿತ ಕೆರೆಗೋಡು ಧ್ವಜಸ್ತಂಭದಿಂದ ಹನುಮ ಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಿದೆ. ವಿವಾದಿತ ಸ್ಥಳದ ಬಳಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಹನುಮ ಧ್ವಜ ಹಾರಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಕಾನೂನುಬಾಹಿರವಾಗಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಮಂದ್ಯ, ಜ.28: ಹಿಂದೂ ಕಾರ್ಯಕರ್ತರು ಹಾಗೂ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ತ್ರೀವ್ರ ಪ್ರತಿಭಟನೆಯ ನಡುವೆ ಮಂಡ್ಯ (Mandya) ಜಿಲ್ಲಾಡಳಿತ ಕೆರಗೋಡು ಧ್ವಜಸ್ಥಂಬದಿಂದ ಹನುಮ ಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಿದೆ. ಈ ವೇಳೆ ಬ್ಯಾರಿಕೇಡ್ ಎತ್ತಿ ಹಾಕಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಇದರಿಂದಾಗಿ ಕಾರ್ಯಕರ್ತರೊಬ್ಬರು ಗಾಯಗೊಂಡಿದ್ದಾರೆ. ಗ್ರಾಮಕ್ಕೆ ಆಗಮಿಸಿದ ವಿಪಕ್ಷ ನಾಯಕ ಆರ್.ಅಶೋಕ್ (R.Ashok), ವಿವಾದಿತ ಸ್ಥಳದ ಬಳಿ ಹನುಮ ಧ್ವಜ ಹಾರಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅಶೋಕ್, ಸಿದ್ದರಾಮಯ್ಯ ಅವರು ರಾಮ, ಹನುಮ ವಿರೋಧಿಯಾಗಿದ್ದಾರೆ. ಹಿಂದೂಗಳ ವಿರೋಧಿ ಸರ್ಕಾರ ಉಳಿಯಬಾರದು. ಹನುಮಧ್ವಜ ಇಳಿಸಲು ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ. ಹನುಮ ಹುಟ್ಟಿದ ನಾಡಲ್ಲಿ ಹನುಮನಿಗೆ ಈ ಸರ್ಕಾರ ಅವಮಾನ, ದ್ರೋಹ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
ಬೆಳಿಗ್ಗೆ 9 ಗಂಟೆಗೆ ಒಳಗೆ ರಾಷ್ಟ್ರ ಧ್ವಜಹಾರಿಸಬೇಕು ಎಂಬ ನಿಯಮವಿದೆ. ಆದರೆ ನಾನು ಬರುತ್ತೇನೆ ಎಂದು ಮಧ್ಯಾಹ್ನ ಮೂರು ಗಂಟೆಗೆ ವೇಳೆಗೆ ಧ್ವಜ ಹಾರಿಸಿದ್ದಾರೆ. ಪೊಲೀಸರು ಶೂ ಧರಿಸಿ ಧ್ವಜಾರೋಹಣ ನಡೆಸಿದ್ದಾರೆ. ಗೂಂಡಾಗಿರಿ, ದ್ರೌರ್ಜನ್ಯ ಎಸಗಿ, ಹನುಮ ಧ್ವಜ ಇಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ರಾಜಕೀಯ ತಿರುವು ಪಡೆದುಕೊಂಡ ಮಂಡ್ಯ ಕೇಸರಿ ಧ್ವಜ ವಿವಾದ; ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ. ಸರ್ಕಾರ, ಅಧಿಕಾರಿಗಳಿಗೆ ನಾಚಿಕೆ ಆಗಲ್ವಾ. ಕಳ್ಳರ ರೀತಿ ರಾತ್ರಿ ಹೊತ್ತು ಬಂದು ಧ್ವಜ ಇಳಿಸಿದ್ದಾರೆ. ದರೋಡೆ ಮಾಡುವವರ ರೀತಿ ಪೊಲೀಸರು ನಡೆದುಕೊಂಡಿದ್ದಾರೆ. ಇವತ್ತು ಮತ್ತೆ ಹನುಮ ಧ್ವಜ ಹಾರಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗ್ರಾಮ ಪಂಚಾಯಿತಿ ಅನುಮತಿ ಪಡೆದು ಹನುಮ ಧ್ವಜ ಹಾರಿಸಲಾಗಿತ್ತು. ಒಂದು ವಾರದ ಹಿಂದೆಯೇ ಹನುಮ ಧ್ವಜ ಹಾರಿಸಲಾಗಿತ್ತು. ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರನ್ನು ಕರೆದಿರಲಿಲ್ಲ. ಹೀಗಾಗಿ ಹನುಮ ಧ್ವಜ ತೆಗೆದು ಕಾನೂನು ಬಾಹಿರವಾಗಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ ಎಂದರು.
ಹನುಮ ಧ್ವಜ ತೆರವು ಪ್ರಶ್ನಿಸಿದ್ದಕ್ಕೆ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿ. ಮಧ್ಯಾಹ್ನ ರಾಷ್ಟ್ರಧ್ವಜ ಹಾರಿಸಿದ ಅಧಿಕಾರಿಯನ್ನು ಅಮಾನತುಗೊಳಿಸಲಿ. ಸ್ಥಳಕ್ಕೆ ಆಗಮಿಸುತ್ತಿದ್ದ ನನ್ನನ್ನು ಮಾರ್ಗಮಧ್ಯೆ ತಡೆಯಲು ಯತ್ನಿಸಿದರು. ಇವರ ಮನಸ್ಸಿನಲ್ಲಿ ಟಿಪ್ಪುಸುಲ್ತಾನ್ ಇದ್ದಾನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ