ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಇದೀಗ ಜರ್ನಾದನ ರೆಡ್ಡಿ ಸರದಿ: ಯಡಿಯೂರಪ್ಪ ಸುಳಿವು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಬಿಟ್ಟು ಹೋಗಿರುವ ಹಲವರನ್ನು ವಾಪಸ್ ಕರೆತರುವ ಪ್ರಯತ್ನಗಳು ನಡೆದಿವೆ. ಮೊನ್ನೇ ಅಷ್ಟೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆದ ಬೆನ್ನಲ್ಲೇ ಇದೀಗ ಗಾಲಿ ಜನಾರ್ದನ ರೆಡ್ಡಿ ಸರದಿ. ಈ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದೇನು ಎನ್ನುವುದನ್ನು ನೋಡಿ.
ಬಳ್ಳಾರಿ, (ಜನವರಿ 28): ಪಕ್ಷ ಬಿಟ್ಟು ಹೋಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಬಿಜೆಪಿಗೆ ಸೆಳೆಯಾಲಾಗಿದೆ. ಇದರ ಬೆನ್ನಲ್ಲೇ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವ ಕೆಲ ನಾಯಕರುಗಳನ್ನು ಘರ್ ವಾಪಸಿ ಮಾಡಿಕೊಳ್ಳಲು ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೆಆರ್ಪಿಸಿ ಸಂಸ್ಥಾಪಕ, ಶಾಸಕ ಜನಾರ್ದನ ರೆಡ್ಡಿಯನ್ನ (Gali Janardhana Reddy) ಮರಳಿ ಬಿಜೆಪಿಗೆ ಕರೆತರಲು ತೆರೆಮರೆ ಪ್ರಯತ್ನಗಳು ನಡೆದಿದ್ದು, ಗೆಳೆಯ ಶ್ರೀರಾಮುಲು ಮೂಲಕ ರೆಡ್ಡಿ ಘರವಾಪ್ಸಿ ಮಾಡುತ್ತಾರೆ ಎನ್ನುವ ಚರ್ಚೆಗಳು ನಡೆದಿವೆ. ಇನ್ನು ರೆಡ್ಡಿ ವಾಪಸ್ ಬಿಜೆಪಿಗೆ ಆಗಮನವಾಗುತ್ತಿರುವ ಬಗ್ಗೆ ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಸುಳಿವು ನೀಡಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ , ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ (Ayanur Manjunath) ಬಿಜೆಪಿಗೆ ವಾಪಸ್ ಆಗುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ಸಾಕಷ್ಟು ಜನ ಬಿಜೆಪಿಗೆ ಮತ್ತೆ ವಾಪಸ್ ಬರುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಯಾರು ಪಕ್ಷವನ್ನು ಬಿಟ್ಟು ಹೋಗಿದ್ದಾರೋ ಅವರು ಮತ್ತೆ ಪಕ್ಷ ಸೇರ್ಪಡೆಯಾಗುತ್ತಾರೆ. ಬಿಜೆಪಿಗೆ ಹೊಸಬರು ಕೂಡ ಬರುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರೆಡ್ಡಿ ಬಿಜೆಪಿ ಸೇರುವ ಬಗ್ಗೆ ಸಹೋದರ ಹೇಳಿದ್ದೇನು?
ಇನ್ನು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಸಹೋದರ ಸೋಮಶೇಖರ್ ರೆಡ್ಡಿ,TP, ZP ಎಲ್ಲ ಚುನಾವಣೆಗೆ ರೆಡ್ಡಿ ಬಂದ್ರೆ ಪ್ಲಸ್ ಆಗುತ್ತೆ. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷಕ್ಕೆ ಜರ್ನಾದನ ರೆಡ್ಡಿ ಬರುತ್ತಾರೆ. ನಾನು ಜರ್ನಾದನ ರೆಡ್ಡಿಯನ್ನ ಸಂಪರ್ಕ ಮಾಡಿಲ್ಲ. ದೊಡ್ಡ ದೊಡ್ಡ ನಾಯಕರು ಜರ್ನಾದನ ರೆಡ್ಡಿಯನ್ನ ಸಂಪರ್ಕ ಮಾಡಿದ್ದಾರೆ. ಶೀಘ್ರದಲ್ಲಿ ಪಕ್ಷಕ್ಕೆ ಬರುವ ನಿರೀಕ್ಷೆ ಇದೆ ಎಂದು ಸುಳಿವು ನೀಡಿದರು.
ಜರ್ನಾದನ ರೆಡ್ಡಿ ಬಿಜೆಪಿಗೆ ಬಂದ್ರೆ ಮತ್ತೆ ಪಕ್ಷಕ್ಕೆ ಬಲ ಬರುತ್ತೆ. ಪಕ್ಷ ಬೇರೆ ಮಾಡಿದಕ್ಕೆ ಮಾತ್ರ ಜರ್ನಾದನ ರೆಡ್ಡಿಯನ್ನ ವಿರೋಧ ಮಾಡಿದ್ದೆವೆ. ವೈಯಕ್ತಿಕ ದ್ವೇಷ ಇಲ್ಲ. ಜರ್ನಾದನ ರೆಡ್ಡಿ ಮರಳಿ ಬಿಜೆಪಿಗೆ ಬಂದ್ರೆ ಖುಷಿ ಆಗುತ್ತೆ. ಬಿಜೆಪಿ ಪಕ್ಷ ದೊಡ್ಡ ಮಟ್ಟಕ್ಕೆ ಬೆಳಿಬೇಕು. ರೆಡ್ಡಿ ಬಂದ್ರೆ ಮುಂಬರುವ ಲೋಕಸಭಾ ಚುನಾವಣೆಗೆ ಪ್ಲಸ್ ಆಗುತ್ತೆ ಎಂದರು.
ಇನ್ನು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿದ್ದು, ವರಿಷ್ಠರ ಜೊತೆ ನಾನು ಚರ್ಚೆ ಮಾಡಿಲ್ಲ. ವರಿಷ್ಠರ ಜತೆ ಚರ್ಚಿಸಿ ಈ ವಿಚಾರದಲ್ಲಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.