ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ
ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಬಳಿ ಮೈದಾನದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇನೆ. ಲೋಪದೋಷ ಇದ್ದರೆ ತಜ್ಞರ ಸಲಹೆ ಪಡೆಯುತ್ತೇನೆ. ಕಾಂತರಾಜು ಸಮಿತಿ ಮಾಡಿದ್ದು ನಾನೇ. ನಾನು ಸಿಎಂ ಸ್ಥಾನದಿಂದ ಇಳಿಯುವಾಗ ವರದಿ ಪೂರ್ಣ ಆಗಿರಲಿಲ್ಲ ಎಂದು ಹೇಳಿದ್ದಾರೆ.
ಚಿತ್ರದುರ್ಗ, ಜನವರಿ 28: ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನಗರದ ಮಾದಾರ ಚನ್ನಯ್ಯ ಮಠದ ಬಳಿ ಮೈದಾನದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂತರಾಜು ಸಮಿತಿ ಮಾಡಿದ್ದು ನಾನೇ. ನಾನು ಸಿಎಂ ಸ್ಥಾನದಿಂದ ಇಳಿಯುವಾಗ ವರದಿ ಪೂರ್ಣ ಆಗಿರಲಿಲ್ಲ. ಮಾಜಿ ಸಿಎಂಗಳಾದ ಹೆಚ್ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ವರದಿ ಪಡೆಯಲಿಲ್ಲ. ಈಗ ಜಯಪ್ರಕಾಶ್ ಹೆಗ್ಡೆ ವರದಿ ಕೊಡುತ್ತಾರೆ. ನೀವು ವರದಿ ಕೊಡಿ ಅಂತ ನಾನು ಹೇಳಿದ್ದೇನೆ. ಲೋಪದೋಷ ಇದ್ದರೆ ತಜ್ಞರ ಸಲಹೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ರಾಹುಲ್ ಗಾಂಧಿ ಕೂಡ ಹೇಳಿದ್ದಾರೆ ಪಕ್ಷ ಅಧಿಕಾರಕ್ಕೆ ಬಂದ್ದರೆ ಎಲ್ಲ ರಾಜ್ಯಗಳಲ್ಲಿ ಮಾಡುತ್ತೇವೆ ಅಂದಿದ್ದಾರೆ. ನೀವು ಕೊಟ್ಟ ಎಲ್ಲ ಬೇಡಿಕೆಗಳಿಗೆ ಸಹಮತ ಇದೆ. ಕ್ಯಾಬಿನೆಟ್ನಲ್ಲಿ ಇಟ್ಟು ತೀರ್ಮಾನ ಮಾಡುತ್ತೇವೆ. ನಾನು ಯಾವಾಗಲೂ ನಿಮ್ಮ ಪರ ಇರುತ್ತೇನೆ. ದ್ರೌಪದಿ ಮುರ್ಮ ಅವರನ್ನ ಪಾರ್ಲಿಮೆಂಟ್ ಉದ್ಘಾಟನೆಗೆ ಕರೆಯಲಿಲ್ಲ. ರಾಮಂದಿರ ಉದ್ಘಾಟನೆಗೂ ಕರೆಯಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕೆಲವು ಶಕ್ತಿಗಳು ನನ್ನನ್ನು ವಿರೋಧ ಮಾಡುತ್ತಿವೆ
ಇದೊಂದು ಐತಿಹಾಸಿಕ ಸಮಾವೇಶ. ಶೋಷಣೆ ನಡೆಯುತ್ತಲೇ ಇದೆ, ಇದಕ್ಕೆ ಜಾತಿ ವ್ಯವಸ್ಥೆಯೇ ಕಾರಣ. ಈ ಜಾತಿ ವ್ಯವಸ್ಥೆಯಿಂದ ನಿರಂತರವಾಗಿ ಶೋಷಣೆ ನಡೆದಿದೆ. ಸಂವಿಧಾನದಿಂದಾಗಿ ಶೋಷಣೆ ಕಡಿಮೆಯಾಗಿದೆ. ಮೀಸಲಾತಿಯನ್ನ ಆರ್ಎಸ್ಎಸ್, ಬಿಜೆಪಿ ವಿರೋಧ ಮಾಡುತ್ತಿದೆ. ಕೆಲವು ಶಕ್ತಿಗಳು ನನ್ನನ್ನು ವಿರೋಧ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ತಲ್ಲಣ ಸೃಷ್ಟಿಸಿದ ಶಮನೂರು ಶಿವಶಂಕರಪ್ಪ ಹೇಳಿಕೆ, ಕ್ರಮಕ್ಕೆ ಒತ್ತಾಯ
ಕುರಿ ಕಾಯುವವನ ಮಗ ಸಿಎಂ ಆದ ಅಂತಾ ವಿರೋಧ ಮಾಡುತ್ತಾರೆ. 14 ಬಜೆಟ್ ಮಂಡಿಸಿದವನು ನಾನು. ಅನ್ನಭಾಗ್ಯ, ಶೂಭಾಗ್ಯ, ಪಶು ಭಾಗ್ಯ ಕೊಟ್ಟಿದ್ದು ತಪ್ಪೇ? ಇವತ್ತು ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದು ತಪ್ಪೇ? ಇದಕ್ಕೆ ನನ್ನನ್ನ ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದು ಸರ್ಕಾರ, ಪಕ್ಷದ ಕಾರ್ಯಕ್ರಮವಲ್ಲ. ಸಮಾಜದಲ್ಲಿ ಶೋಷಿತರು ಸಿಂಹಪಾಲಿದ್ದಾರೆ. ಶತಶತಮಾನಗಳಿಂದ ಶೋಷಣೆಗೊಳಗಾಗಿದ್ದಾರೆ. ಶತಮಾನಗಳಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ಸಮಾಜದಲ್ಲಿ ಶೋಷಣೆ ನಡೆಯುತ್ತಲೇ ಇದೆ. ಇದಕ್ಕೆ ಕಾರಣ ಜಾತಿ ವ್ಯವಸ್ಥೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಹಾಗಾಗಿ ಸಮಾಜದಲ್ಲಿ ಅಸಮಾನತೆ ಕಾಣುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ? ಸುಳಿವು ನೀಡಿದ ಆರ್ ಅಶೋಕ್
ಈ ಜಾತಿ ವ್ಯವಸ್ಥೆಯಿಂದ ನಿರಂತರ ಶೋಷಣೆ ನಡೆದಿದೆ. ಈಗಲೂ ನಡೆದಿರುವುದನ್ನ ಮರೆಯಲು ಸಾಧ್ಯವಿಲ್ಲ. ಅಂಬೇಡ್ಕರ್ ಸಂವಿಧಾನವನ್ನ ಕೊಟ್ಟರು. ಸರ್ವರಿಗೂ ಸಮಪಾಲು ಅಂತ ಕೊಟ್ಟರು. ಜಾತಿ ವ್ಯವಸ್ಥೆಯಿಂದಾಗಿ ಶೋಷಣೆ ಹೆಚ್ಚಾಗಿದೆ. ಇದನ್ನ ತಡೆಯುವುದಕ್ಕೆ ಅಂಬೇಡ್ಕರ್ ಮುಂದಾದರು. ಸಂವಿಧಾನದಿಂದಾಗಿ ಶೋಷಣೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.