ರಾಷ್ಟ್ರಪತಿಗೆ ಏಕವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಹುದ್ದೆಯಿಂದ ಕೂಡಲೇ ವಜಾ ಮಾಡುವಂತೆ ಕುಮಾರಸ್ವಾಮಿ ಆಗ್ರಹ
ಕರ್ನಾಟಕ ಶೋಷಿತ ಜಾತಿ-ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಚಿತ್ರದುರ್ಗದಲ್ಲಿ ಆಯೋಜಿಸಿದ್ದ “ಶೋಷಿತರ ಜಾಗೃತಿ ಸಮಾವೇಶವನ್ನು” ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಆರೋಪಿಸಿದ್ದು, ಕೂಡಲೇ ಸಿಎಂ ಹುದ್ದೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು, (ಜನವರಿ 28): ಗೌರವಾನ್ವಿತ ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆ ಆಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ (ಆ ಪದವನ್ನು ಬರೆಯಲಾರೆ) ಎಂದು ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯರನ್ನು(Siddaramaiah) ಮುಖ್ಯಮಂತ್ರಿ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ(HD Kumaraswamy) ಆಗ್ರಹಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನಿನ್ನೆಯ ದಿನ ಚಾಮರಾಜನಗರದಲ್ಲಿ ಇದೇ ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಏಕವಚನದಲ್ಲಿ ಪ್ರಶ್ನಿಸಿದರೆಂಬ ಕಾರಣಕ್ಕೆ ಪೊಲೀಸರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿ ದರದರನೇ ಎಳೆದುಕೊಂಡು ಹೋದರು. ಹಾಗಿದ್ದರೆ, ರಾಷ್ಟ್ರಪತಿಗಳನ್ನೇ ಏಕವಚನದಲ್ಲಿ ಸಂಬೋಧಿಸಿದ ಈ ಮುಖ್ಯಮಂತ್ರಿಗೇನು ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ.
ಈ ಡೋಂಗೀ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಕಳಚಿಬಿದ್ದಿದೆ. ಒಂದು ಕ್ಷಣವೂ ಮುಖ್ಯಮಂತ್ರಿ ಪದವಿಯಲ್ಲಿ ಇರಲು ಅವರು ಅರ್ಹರಲ್ಲ. ಕೂಡಲೇ ತಾವೆಸಗಿರುವ ಅಪಚಾರಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಥವಾ ಮಾನ್ಯ ರಾಜ್ಯಪಾಲರೇ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕಿತ್ತೆಸೆಯಬೇಕು. ಇದು ನನ್ನ ಆಗ್ರಹ.
ಗೌರವಾನ್ವಿತ ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆ ಆಗಿರುವ ಶ್ರೀಮತಿ ದ್ರೌಪದಿ ಮುರ್ಮು @rashtrapatibhvn ಅವರನ್ನು ಏಕವಚನದಲ್ಲಿ (ಆ ಪದವನ್ನು ಬರೆಯಲಾರೆ) ಎಂದು ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯ @siddaramaiah ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು.1/6 #ಆಚಾರಗೆಟ್ಟ_ಮುಖ್ಯಮಂತ್ರಿ pic.twitter.com/h6VCoT1B7Z
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 28, 2024
ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ. ಶೋಷಿತ ಬುಡಕಟ್ಟು ಸಮುದಾಯದಿಂದ ಬಂದ ದೇಶದ ಮೊತ್ತ ಮೊದಲ ರಾಷ್ಟ್ರಪತಿಗಳು, ಅದರಲ್ಲಿಯೂ ಮಹಿಳೆ.. ಶೋಷಿತರ ಜಾಗೃತಿ ಸಮಾವೇಶದಲ್ಲೇ ಅವರಿಗೆ ಮುಖ್ಯಮಂತ್ರಿ ಅಪಮಾನ ಎಸಗಿದ್ದಾರೆ
ವಕೀಲರಂತೆ, ಸ್ವಯಂಘೋಷಿತ ಸಂವಿಧಾನ ತಜ್ಞರಂತೆ.. ನಾಚಿಕೆಯಾಗಬೇಕು ಇವರಿಗೆ. ಸಾರ್ವಜನಿಕ ವೇದಿಕೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಮುಖ್ಯಮಂತ್ರಿಯೊಬ್ಬರು ಸಂಬೋಧಿಸುವ ರೀತಿಯೇ ಇದು. ಸಿದ್ದರಾಮಯ್ಯನವರ ನಡವಳಿಕೆ ಕರ್ನಾಟಕಕ್ಕೆ ಅಂಟಿದ ಅಳಿಸಲಾಗದ ಕಳಂಕ. ಅವರ ಈ ಕೀಳುಮಾತು ದೇಶಕ್ಕೆ, ಸಂವಿಧಾನಕ್ಕೆ ಆಗಿರುವ ಘೋರ ಅಪಚಾರ.
ಮಾತೆದ್ದಿದರೆ ಸಂವಿಧಾನ, ಪ್ರಜಾಪ್ರಭುತ್ವ, ವಕೀಲಿಕೆ ನಮ್ಮಪ್ಪನ ಮನೆ ಆಸ್ತಿ ಎಂದು ಜಾಗಟೆ ಹೊಡೆಯುವ ಸಿದ್ದರಾಮಯ್ಯನವರು ಮಾನ, ಮರ್ಯಾದೆ, ಮಹಿಳೆಯರ ಮೇಲೆ ಗೌರವ ಏನಾದರೂ ಇಟ್ಟುಕೊಂಡಿದ್ದರೆ, ಈ ಕ್ಷಣದಲ್ಲಿಯೇ ಸಿಎಂ ಕುರ್ಚಿಯನ್ನು ಖಾಲಿ ಮಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?
ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ ಸಿದ್ದರಾಮಯ್ಯ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಇವರ(ಬಿಜೆಪಿ) ಯೋಗ್ಯತೆಗೆ ಪಾಪಾ ದ್ರೌಪದಿ ಮುರ್ಮು ಶೋಷಿತ ವರ್ಗಕ್ಕೆ ಸೇರಿದವಳು. ಅವಳನ್ನ ಪಾರ್ಲಿಮೆಂಟ್ ಉದ್ಘಾಟನೆಗೆ ಕರೆದಿಲ್ಲ ಎಂದು ಏಕವಚನದಲ್ಲಿ ಸಂಭೋಧಿಸಿದ್ದಾರೆ. ಇದೀಗ ಈ ವಿಡಿಯೋವನ್ನು ವಿಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿವೆ.