ಹೈಕಮಾಂಡ್ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆ: ಜಗದೀಶ್ ಶೆಟ್ಟರ್
ಬಿಜೆಪಿಗೆ ಮರಳಿ ಸೇರ್ಪಡೆಯಾದ ನಂತರ ಜಗದೀಶ್ ಶೆಟ್ಟರ್ ಅವರು ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದು, ಅದ್ದೂರಿ ಸ್ವಾಗತ ದೊರೆಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿದ ಶೆಟ್ಟರ್, ಜಿಲ್ಲೆಯಲ್ಲಿ ಯಾವ ಬಣನೂ ನಿರ್ಮಾಣ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ತಾನು ಯಾವುದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿಲ್ಲ. ಸ್ಪರ್ಧೆ ಮಾಡಿ ಎಂದರೆ ಲೋಕಸಭೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಹುಬ್ಬಳ್ಳಿ, ಜ.28: ತಾನು ಯಾವ ಲೋಕಸಭೆ ಕ್ಷೇತ್ರದ ಮೇಲೂ ಕಣ್ಣಿಟ್ಟಿಲ್ಲ. ಅಕಸ್ಮಾತ್ ಸ್ಪರ್ಧೆ ಮಾಡು ಅಂತ ಸೂಚಿಸಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಸ್ಪಷ್ಟನೆ ನೀಡಿದರು. ಬಿಜೆಪಿಗೆ ಮರಳಿ ಸೇರ್ಪಡೆಯಾದ ನಂತರ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಶೆಟ್ಟರ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮೂರು ನಾಲ್ಕು ತಿಂಗಳಿಂದ ನಾನು ಪ್ರವಾಸ ಮಾಡಿದಾಗ ಅನೇಕರು ಬಿಜೆಪಿಗೆ ವಾಪಸ್ ಬರಬೇಕು ಅಂತ ಸಲಹೆ ನೀಡುತ್ತಿದ್ದರು. ಎಲ್ಲಿ ಪ್ರವಾಸ ಮಾಡಿದರೂ ನಮಗೆ ಒತ್ತಡ ಬರುತ್ತಿತ್ತು. ಹಿರಿಯರಾಗಿ ಮನೆಗೆ ಬರಬೇಕು ಎಂದು ಹೇಳುತ್ತಿದ್ದರು. ಮುಂದೆ ವಿಜಯೇಂದ್ರ ಅಧ್ಯಕ್ಷರಾದ ಮೇಲೆ ನನ್ನ ಜೊತೆ ಮಾತನಾಡಿದ್ದರು ಎಂದರು.
ರಾಷ್ಟ್ರೀಯ ನಾಯಕರು ಮನಸು ಮಾಡಿದ ಮೇಲೆ ನಾನು ದೆಹಲಿಗೆ ಹೋಗಿದ್ದೆ. ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ಭೇಟಿಯಾದಾಗ ಹಿಂದೆ ಆಗಿರೋದನ್ನ ಮರೆತು ಬಿಡಿ ಎಂದಿದ್ದರು. ನಿಮಗೆ ಗೌರವ ಕೊಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಬಿಜೆಪಿ ಸೇರಿದ್ದೇನೆ. ನಿನ್ನೆ ಕಾರ್ಯಕಾರಿಣಿ ಸಭೆಯಲ್ಲಿ ಅನೇಕರು ಸಿಕ್ಕಿದ್ದರು. ಎಲ್ಲರೂ ಪ್ರೀತಿ ವಿಶ್ವಾಸ ತೋರಿದರು. ನಂಗೂ ಬಹಳ ಖುಷಿಯಾಯ್ತು ಎಂದರು.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಇದೀಗ ಜರ್ನಾದನ ರೆಡ್ಡಿ ಸರದಿ: ಯಡಿಯೂರಪ್ಪ ಸುಳಿವು
ತುಮಕೂರ, ದಾವಣಗೇರಿಯಲ್ಲಿ ನನಗೆ ಸ್ವಾಗತ ಮಾಡಿದರು. ಎಲ್ಲ ಕಡೆ ಕಾರ್ಯಕರ್ತರು ಪ್ರೀತಿ ತೋರಿದರು. ಹಾವೇರಿ ಜಿಲ್ಲೆಯಲ್ಲಿ ಅನೇಕರು ನಮಗೆ ಏನೋ ಒಂದು ಕಳೆದುಕೊಂಡ ಹಾಗೆ ಆಗಿತ್ತು. ನೀವು ಬಂದಿರೋದು ಖುಷಿಯಾಯ್ತು ಎಂದರು. ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದರು. ಮುನೇನಕೊಪ್ಪ ಕೂಡಾ ಜೊತೆಗಿದ್ದರು. ಅನೇಕ ಕಾರ್ಯಕರ್ತರು ಸ್ವಾಗತ ಮಾಡಿಕೊಂಡರು ಎಂದರು.
ಜಿಲ್ಲೆಯಲ್ಲಿ ಯಾವ ಬಣ ಇಲ್ಲ, ಜೋಶಿ ಬಣ ಇಲ್ಲ,ಶೆಟ್ಟರ್ ಬಣ ಇಲ್ಲ. ಬಿಜೆಪಿಯೊಂದೇ ಬಣ. ನನ್ನನ್ನು ಪಕ್ಷದ ಕಚೇರಿಕೆ ಕರೆದಿದ್ದಾರೆ. ನಾನು ಪಕ್ಷದ ಕಚೇರಿಗೆ ಹೋಗುತ್ತೇನೆ. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಇದೆಲ್ಲವೂ ಆಗಿದ್ದು, ಯಡಿಯೂರಪ್ಪ ಮಾರ್ಗದರ್ಶನ ಇದರಲ್ಲಿ ಆಗಿದೆ. ರಾಷ್ಟ್ರೀಯ ನಾಯಕರ ಜೊತೆ ಮಾತಾಡೋವಾಗ ಯಡಿಯೂರಪ್ಪ, ವಿಜಯೇಂದ್ರ ಮುನೇನಕೊಪ್ಪ ಇದ್ದರು. ಅಲ್ಲಿ ಯಾರ ವಿರೋಧದ ಬಗ್ಗೆ ಚರ್ಚೆ ಆಗಿಲ್ಲ ಎಂದರು.
ನಾನು ರಾಮಣ್ಣ ಲಮಾಣಿ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದೆವು. ಇನ್ನು ಕೆಲವರು ಆ ಪಕ್ಷಕ್ಕೆ ಹೋಗುವವರಿದ್ದರು. ಆದರೆ ನಾನು ಇದೀಗ ಬಿಜೆಪಿ ಸೇರಿದ್ದೇನೆ. ನಾನ ಕಾಂಗ್ರೆಸ್ ನಾಯಕರನ್ನು ಎಲ್ಲೂ ಬ್ಲೇಮ್ ಮಾಡಿಲ್ಲ. ನನ್ನಿಂದ ಲಾಭ ಏನಾಗಿದೆ ಅನ್ನೋದ ಅವರಿಗೆ ಗೊತ್ತು. ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದರು.
ಕಚೇರಿಗೆ ಶೆಟ್ಟರ್ ಸ್ವಾಗತಿಸಿದ ಮುಖಂಡರು
ಪಕ್ಷ ಸೇರಿದ ಬಳಿಕ ಮೊದಲ ಬಾರಿ ನಗರದ ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಶೆಟ್ಟರ್ ಅವರಿಗೆ ಕಾರ್ಯಕರ್ತರು ಸ್ವಾಗತ ಕೋರಿದರು. ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ, ಶಾಸಕ ಮಹೇಶ ಟೆಂಗಿನಕಾಯಿ ಮತ್ತಿತರರು ಸ್ವಾಗತಕೊರಿದರು. ಶೆಟ್ಟರ್ ಪರ ಕಾರ್ಯಕರ್ತರು ಘೋಷಣೆ ಕೂಗಿದರು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಅರವಿಂದ ಬೆಲ್ಲದ್ ಗೈರಾಗಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ