ಶೆಟ್ಟರ್ ಸ್ವಾಗತಕ್ಕೆ ಸ್ಥಳೀಯ ನಾಯಕರು ಗೈರು; ಎರಡು ಬಣಗಳಾಗಿ ಒಡೆದ ಹುಬ್ಬಳ್ಳಿ ಬಿಜೆಪಿ?
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್ನಿಂದ ಮಧುರಾ ಎಸ್ಟೇಟ್ನಲ್ಲಿರುವ ಶೆಟ್ಟರ್ ನಿವಾಸದವರೆಗೆ ಭರ್ಜರಿ ಮೆರವಣಿಗೆ ನಡೆಯಿತು. ಆದರೆ, ನಾಯಕನ ಸ್ವಾಗತಕ್ಕೆ ಸ್ಥಳೀಯ ನಾಯಕರು ಗೈರಾಗಿದ್ದು, ಹೊರಭಾಗದವರೇ ಹೆಚ್ಚಿನ ಭಾಗಿಯಾಗಿದ್ದರು.
ಹುಬ್ಬಳ್ಳಿ, ಜ.28: ಮರಳಿ ಬಿಜೆಪಿಗೆ ಸೇರ್ಪಡೆಯಾದ ನಂತರ ಮೊದಲ ಬಾರಿ ಹುಬ್ಬಳ್ಳಿಗೆ (Hubballi) ಆಗಮಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಕಾರ್ಯಕರ್ತರು ಭರ್ಜರಿ ಸ್ವಾಗತಕೋರಿದರು. ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್ನಿಂದ ಮಧುರಾ ಎಸ್ಟೇಟ್ನಲ್ಲಿರುವ ಶೆಟ್ಟರ್ ನಿವಾಸದವರೆಗೆ ಭರ್ಜರಿ ಮೆರವಣಿಗೆ ನಡೆಯಿತು. ಈ ವೇಳೆ ನಾಯಕನ ಸ್ವಾಗತಕ್ಕೆ ಹೊರ ಜಿಲ್ಲೆಯ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸೇರಿದಂತೆ ಅಸಮಾಧಾನಿತ ಸ್ಥಳೀಯ ನಾಯಕರು ಗೈರಾಗಿದ್ದರು.
ಜಗದೀಶ್ ಶೆಟ್ಟರ್ ಜಿಲ್ಲೆಗೆ ಆಗಮಿಸುವ ಮುನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಚೇರಿಯಲ್ಲಿ ಸ್ಥಳೀಯ ಶಾಸಕ ಮಹೇಶ್ ಟೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್, ಪಾಲಿಕೆ ಸದಸ್ಯರು ಸಭೆ ನಡೆಸಿದರು. ಶೆಟ್ಟರ್ ಮೆರವಣಿಗೆಯಲ್ಲಿ ಭಾಗಿಯಾಗಬೇಕೋ ಬೇಡವೋ ಅನ್ನೋ ವಿಚಾರವಾಗಿ ಚರ್ಚೆ ನಡೆಸಲಾಗಿತ್ತು. ಒಂದುವೇಳೆ ಶೆಟ್ಟರ್ ಮೆರಣಿಗೆ ಬಿಟ್ಟು ಬಿಜೆಪಿ ಕಚೇರಿಗೆ ಭೇಟಿ ನೀಡಿದರೆ ಸ್ವಾಗತ ಮಾಡಲು ನಿರ್ಧಾರ ಮಾಡಲಾಗಿತ್ತು.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಇದೀಗ ಜರ್ನಾದನ ರೆಡ್ಡಿ ಸರದಿ: ಯಡಿಯೂರಪ್ಪ ಸುಳಿವು
ಅದಾಗ್ಯೂ, ಬಿಜೆಪಿಗೆ ಮರಳಿದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಶೆಟ್ಟರ್ಗೆ ಅದ್ಧೂರಿ ಸ್ವಾಗತ ದೊರೆಯಿತು. ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್ನಿಂದ ಮಧುರಾ ಎಸ್ಟೇಟ್ನಲ್ಲಿರುವ ಶೆಟ್ಟರ್ ನಿವಾಸದವರೆಗೆ ಭರ್ಜರಿ ಮೆರವಣಿಗೆ ನಡೆಯಿತು. ತೆರದ ವಾಹನದಲ್ಲಿ, ಬೈಕ್ ರ್ಯಾಲಿ ಮೂಲಕ ಬೆಂಬಲಿಗರು ನಾಯಕನನ್ನು ಸ್ವಾಗತಿಸಿದರು. ಇದೇ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಕುಣಿದು ಕುಪ್ಪಳಿಸಿದರು.
ಸ್ಥಳೀಯ ಬಿಜೆಪಿ ನಾಯಕರಲ್ಲಿ ತಣ್ಣಗಾಗದ ಅಸಮಾಧಾನ
ಹುಬ್ಬಳ್ಳಿಗೆ ಆಗಮಿಸಿದ ಜಗದೀಶ್ ಶೆಟ್ಟರ್ ಅವರಿಗೆ ಶಿಷ್ಯ ಮುನೇನಕೊಪ್ಪ ಸಾಥ್ ನೀಡಿದರು. ಆದರೆ ಬಿಜೆಪಿಗೆ ಶೆಟ್ಟರ್ ಮರಳಿದ್ದರಿಂದ ಅಸಮಾಧಾನಗೊಂಡಿರುವ ಸ್ಥಳೀಯ ನಾಯಕರಲ್ಲಿ ಮುನಿಸು ಶಮನಗೊಂಡಿಲ್ಲ. ನಾಯಕನ ಸ್ವಾಗತಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಮತ್ತಿತರರು ಗೈರಾಗಿದ್ದಾರೆ. ಶೆಟ್ಟರ್ ಸ್ವಾಗತಕ್ಕೆ ಧಾರವಾಡ ಜಿಲ್ಲೆಗಿಂತ ಬೆಳಗಾವಿ, ಗದಗ, ಕೊಪ್ಪಳದಿಂದ ಬಂದಿರುವ ಸಮುದಾಯದ ಜನರೇ ಹೆಚ್ಚಾಗಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Sun, 28 January 24