ಪಕ್ಷದಲ್ಲಿ ಯಾವುದೇ ಬಣಗಳಿಲ್ಲ: ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಸ್ಪಷ್ಟನೆ

ಬಿಜೆಪಿಗೆ ಘರ್ವಾಪ್ಸಿ ಆದ ನಂತರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮೊದಲ ಬಾರಿಗೆ ಹುಬ್ಬಳ್ಳಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಶಾಸಕ ಮಹೇಶ್ ಟೆಂಗಿನಕಾಯಿ ಮತ್ತಿತರ ಬಿಜೆಪಿ ನಾಯಕರು ಸ್ವಾಗತ ಕೋರಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅರವಿಂದ್ ಬೆಲ್ಲದ್ ಗೈರಾಗಿದ್ದರು. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಜೋಶಿ ಬಣ, ಶೆಟ್ಟರ್ ಬಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಹೇಶ್ ಟೆಂಗಿನಕಾಯಿ ಸ್ಪಷ್ಟನೆ ನೀಡಿದ್ದಾರೆ.

ಪಕ್ಷದಲ್ಲಿ ಯಾವುದೇ ಬಣಗಳಿಲ್ಲ: ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಸ್ಪಷ್ಟನೆ
ಮಹೇಶ್ ಟೆಂಗಿನಕಾಯಿ ಮತ್ತು ಜಗದೀಶ್ ಶೆಟ್ಟರ್
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: Rakesh Nayak Manchi

Updated on:Jan 28, 2024 | 9:40 PM

ಹುಬ್ಬಳ್ಳಿ, ಜ.28: ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಕೇಂದ್ರದ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಸ್ಪಷ್ಟನೆ ನೀಡಿದ್ದಾರೆ. ಪಕ್ಷಕ್ಕೆ ಘರ್​ವಾಪ್ಸಿ ಆದ ನಂತರ ಮೊದಲ ಬಾರಿಗೆ ಹುಬ್ಬಳ್ಳಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಶಾಸಕರು, ಜಿಲ್ಲಾಧ್ಯಕ್ಷರು ಸೇರಿದಂತೆ ಅನೇಕರು ಸ್ವಾಗತಕೋರಿದರು. ಆದರೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹಾಗೂ ಅರವಿಂದ್ ಬೆಲ್ಲದ್ ಗೈರಾಗಿದ್ದರು.

ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಪಕ್ಷದ ಸೂಚನೆ ಪ್ರಕಾರ ಶೆಟ್ಟರ್ ಅವರು ಪಕ್ಷದ ಕಚೇರಿಗೆ ಆಗಮಿಸುವಂತೆ ತಿಳಿಸಲಾಗಿತ್ತು. ಪಕ್ಷದ ಕಚೇರಿಯಲ್ಲೇ ಅವರನ್ನ ಸ್ವಾಗತ ಮಾಡುವಂತೆ ಪಕ್ಷದ ನಾಯಕರ ತೀರ್ಮಾನವಾಗಿತ್ತು. ಪ್ರಲ್ಹಾದ್ ಜೋಶಿ ಹಾಗೂ ಬೆಲ್ಲದ್ ಅವರಿಗೆ ಪೂರ್ವಾಪರ ಕಾರ್ಯಕ್ರಮಗಳಿದ್ದವು, ಹೀಗಾಗಿ ಅಲ್ಲಿ ಹೋಗಿದ್ದರು. ಇವರ ಗೈರು ವಿಚಾರವನ್ನ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಪಕ್ಷದ ಅಧ್ಯಕ್ಷರ ತೀರ್ಮಾನದಂತೆ ಅದರ ಅನುಗುಣವಾಗಿ ನಾವು ಶೆಟ್ಟರ್ ಅವರನ್ನು ಸ್ವಾಗತ ಮಾಡಿದ್ದೇವೆ. ಪಕ್ಷದಲ್ಲಿ ಎಲ್ಲರೂ ಒಂದೇ ಇಲ್ಲಿ ಯಾವುದೇ ಬಣಗಳಿಲ್ಲ. ಈವರೆಗೂ ಜೋಶಿಯವರೊಬ್ಬರೇ ಇದ್ದರು. ಈಗ ಶೆಟ್ಟರ್ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಎಲ್ಲರ ನೇತೃತ್ವದಲ್ಲಿ ಮುನ್ನಡೆಯಲಿದ್ದೇವೆ ಎಂದರು.

ಮಾತನಾಡದೇ ಕಚೇರಿಯಿಂದ ವಾಪಸ್ ಆದ ಶೆಟ್ಟರ್

ಜಗದೀಶ್ ಶೆಟ್ಟರ್ ಅವರು ತಮ್ಮ ನಿವಾಸದಿಂದ ನೇರವಾಗಿ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಶಾಸಕ ಮಹೇಶ್ ಟೆಂಗಿನಕಾಯಿ ಮತ್ತು ಇತರೆ ಮುಖಂಡರು ಮಾತ್ರ ಇದ್ದರು. ನಂತರ ಶೆಟ್ಟರ್​ಗೆ ಮಹೇಶ್ ಟೆಂಗಿನಕಾಯಿ ಸನ್ಮಾನ ಮಾಡಿದರು. ಸನ್ಮಾನ ಮುಗಿಯುತ್ತಿದ್ದಂತೆಯೇ ಶೆಟ್ಟರ್ ಅವರು ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿ ಮಾತನಾಡುವ ಗೋಜಿಗೆ ಹೋಗದೆ ಕಚೇರಿಯಿಂದ ತೆರಳಿದರು.

ಇದನ್ನೂ ಓದಿ: ಹೈಕಮಾಂಡ್ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆ: ಜಗದೀಶ್ ಶೆಟ್ಟರ್

ಮರಳಿ ಬಿಜೆಪಿಗೆ ಸೇರ್ಪಡೆಯಾದ ನಂತರ ಮೊದಲ ಬಾರಿ ಹುಬ್ಬಳ್ಳಿಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಆದರೆ, ನಾಯಕ ಸ್ವಾಗತಕ್ಕೆ ಸ್ಥಳೀಯ ನಾಯಕರಾದ ಪ್ರಲ್ಹಾದ್ ಜೋಶಿ, ಬೆಲ್ಲದ್, ಮಹೇಶ್ ಟೆಂಗಿನಕಾಯಿ ಮತ್ತಿತರರು ಗೈರಾಗಿದ್ದರು. ಅಲ್ಲದೆ, ಶೆಟ್ಟರ್ ಸ್ವಾಗತ ಕೋರಲು ಹೊರ ಜಿಲ್ಲೆಗಳಿಂದ ಅವರ ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶೆಟ್ಟರ್​ಗೆ ಶಿಷ್ಯ ಮುನೇನಕೊಪ್ಪ ಸಾಥ್ ನೀಡಿದರು.

ಶೆಟ್ಟರ್ ಜಿಲ್ಲೆಗೆ ಆಗಮಿಸುವ ವಿಚಾರ ತಿಳಿದಕೂಡಲೇ ಜೋಶಿ ಕಚೇರಿಯಲ್ಲಿ ಮಹೇಶ್ ಟೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್, ಪಾಲಿಕೆ ಸದಸ್ಯರು ಸಭೆ ನಡೆಸಿದ್ದರು. ಶೆಟ್ಟರ್ ಮೆರವಣಿಗೆಯಲ್ಲಿ ಭಾಗಿಯಾಗಬೇಕೋ ಬೇಡವೋ ಅನ್ನೋ ವಿಚಾರವಾಗಿ ಚರ್ಚೆ ನಡೆಸಲಾಗಿತ್ತು. ಒಂದು ವೇಳೆ ಶೆಟ್ಟರ್ ಮೆರಣಿಗೆ ಬಿಟ್ಟು ಬಿಜೆಪಿ ಕಚೇರಿಗೆ ಭೇಟಿ ನೀಡಿದರೆ ಸ್ವಾಗತ ಮಾಡಲು ನಿರ್ಧಾರ ಮಾಡಲಾಗಿತ್ತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 pm, Sun, 28 January 24