ಸರ್ಕಾರಿ ಜಾಗದಲ್ಲಿ ಹನುಮಾನ್ ಧ್ವಜ ಹಾರಿಸಲು ಅವಕಾಶವಿಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್
ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ಕೆಳಗಿಳಿಸಿ ರಾಷ್ಟ್ರಧ್ವಜ ಹಾರಿಸುತ್ತಿದ್ದಂತೆ ಹೈಡ್ರಾವೇ ನಡೆದಿದೆ. ಈ ವಿಚಾರವಾಗಿ ತುಮಕೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ಶಾಂತಿ ಕಾಪಾಡುವಂತೆ ವಿನಂತಿ ಮಾಡಿದ್ದಾರೆ. ಬೇರೆ ಕಡೆ ಹನುಮಾನ್ ಧ್ವಜ ಹಾರಿಸಲು ಯಾರದ್ದೂ ತಕರಾರು ಇಲ್ಲ. ಆದರೆ ಸರ್ಕಾರಿ ಜಾಗದಲ್ಲಿ ಹನುಮಾನ್ ಧ್ವಜ ಹಾರಿಸಲು ಅವಕಾಶವಿಲ್ಲ ಎಂದಿದ್ದಾರೆ.
ತುಮಕೂರು, ಜನವರಿ 28: ಬೇರೆ ಕಡೆ ಹನುಮಾನ್ ಧ್ವಜ ಹಾರಿಸಲು ಯಾರದ್ದೂ ತಕರಾರು ಇಲ್ಲ. ಆದರೆ ಸರ್ಕಾರಿ ಜಾಗದಲ್ಲಿ ಹನುಮಾನ್ ಧ್ವಜ ಹಾರಿಸಲು ಅವಕಾಶವಿಲ್ಲ. ಹೀಗಾಗಿ ಶಾಂತಿ ಕಾಪಾಡುವಂತೆ ವಿನಂತಿ ಮಾಡುತ್ತೇನೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ (G. Parameshwara) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜ ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿ ನಿಂದ ಅನುಮತಿ ಪಡೆದಿದ್ದರು. ಆದರೆ ರಾಷ್ಟ್ರಧ್ವಜ ಬದಲು ಹನುಮ ಧ್ವಜ ಹಾರಿಸಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದರಿಂದ ತೆರವುಗೊಳಿಸಿದ್ದಾರೆ ಎಂದು ಇದಾದ ಬಳಿಕ ಕೆಲ ಪ್ರತಿಭಟನೆಗಳು, ಬೇರೆಲ್ಲಾ ಆಗಿವೆ ಎಂದು ಹೇಳಿದ್ದಾರೆ.
ಲಘು ಲಾಠಿಪ್ರಹಾರ ನಡೆಸಿ ರಾಷ್ಟ್ರೀಯ ಧ್ವಜವನ್ನ ಹಾರಿಸಲಾಗಿದೆ. ಸಮಾಜದಲ್ಲಿ ಇದು ಒಂದು ರೀತಿಯಲ್ಲಿ ಶಾಂತಿ ಕದಡುವ ಕೆಲಸವಾಗಿದೆ. ಕಾನೂನಿಗೆ ವಿರುದ್ಧವಾದ ಕೆಲಸವೆಂದು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ನಾವು ಕೂಡ ಹಿಂದೂಗಳೇ, ನಾವೇನು ಬೇರೆಯವರಲ್ಲ
ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ವಿಚಾರವಾಗಿ ಮಾತನಾಡಿದ ಅವರು, ಪದೇ ಪದೇ ಇದನ್ನ ಹೇಳುತ್ತಿದ್ದಾರೆ. ಅದಕ್ಕೇನು ಹೆಚ್ಚು ಅರ್ಥ ಕಲ್ಪಿಸುವುದು ಇಲ್ಲ. ಪದೇ ಪದೇ ಕಾಂಗ್ರೆಸ್ನವ್ರು, ರಾಜ್ಯ ಸರ್ಕಾರ ಹಿಂದೂ ವಿರೋಧಿಗಳು ಅಂತಾ ಹೇಳುತ್ತಿದ್ದಾರೆ. ಆದರೆ ನಾವು ಕೂಡ ಹೇಳುತ್ತಿದ್ದೇವೆ. ನಾವು ಕೂಡ ಹಿಂದೂಗಳೇ, ನಾವೇನು ಬೇರೆಯವರಲ್ಲ.
ಇದನ್ನೂ ಓದಿ: ರಾಷ್ಟ್ರಪತಿಗೆ ಏಕವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಹುದ್ದೆಯಿಂದ ಕೂಡಲೇ ವಜಾ ಮಾಡುವಂತೆ ಕುಮಾರಸ್ವಾಮಿ ಆಗ್ರಹ
ನೀವು ಕಾನೂನಿನ ಚೌಕಟ್ಟಿನಲ್ಲಿರಿ ಅಂತಾ ನಾವು ಹೇಳುತ್ತಿದ್ದೇವೆ ಅಷ್ಟೇ ವ್ಯತ್ಯಾಸ ನಮಗೂ, ಅವರಿಗೂ. ಈ ರಾಜ್ಯದಲ್ಲಿ ಕಾನೂನಿದೆ, ಕಾನೂನನ್ನ ಮುರಿಯುವ ಕೆಲಸ ಮಾಡಬೇಕಡಿ ಎಂದು ನಾವು ಹೇಳುತ್ತಿದ್ದೇವೆ. ಅವರು ರಾಜಕೀಯ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಇದು ಕೂಡ ಅಂಥದ್ದೇ ಒಂದು ಘಟನೆ. ಅದು ಪೂರ್ವನಿಯೋಜಿತನೋ, ಏನೋ ಅನ್ನೋದು ನನಗೆ ಗೊತ್ತಿಲ್ಲ. ಅವರು ಅನುಮತಿ ಪಡೆದಿದ್ದೆ ಬೇರೆಯದಕ್ಕೆ, ಮಾಡಿದ್ದೆ ಬೇರೆ ಎಂದಿದ್ದಾರೆ.
ರಾಷ್ಟ್ರಧ್ವಜ ಹಾಕುತ್ತೇವೆ ಎಂದು ಊರಿನವರೆಲ್ಲ ಹೇಳಿದ್ದು ಒಳ್ಳೆಯದೇ. ಆದರೆ ನಂತರ ಬೇರೆಯ ಧ್ವಜವನ್ನ ಹಾಕಿದ್ದಾರೆ. ಅದಾದ ಬಳಿಕ ಬೇರೆ ಬೇರೆಯವರು ಬೇರೆ ಧ್ವಜ ಹಾಕುತ್ತೇವೆ ಅಂತಾ ಹೇಳಿದ್ದಾರೆ. ಕೆಲವರು ಅಂಬೇಡ್ಕರ್, ಕೆಲವರು ಕೆಂಪೇಗೌಡ ಧ್ವಜ ಹಾರಿಸುತ್ತೇವೆ ಎಂದಿದ್ದಾರೆ. ಹೀಗಾಗಿ ಶಾಂತಿ ಕದಡುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ.
ಜಾತಿಗಣತಿ ಪರ ಬ್ಯಾಟ್ ಬೀಸಿದ ಸಚಿವ ಪರಮೇಶ್ವರ್
ಜಾತಿಗಣತಿ ವರದಿ ಸ್ವೀಕಾರ ಮಾಡ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ತುಮಕೂರಿನಲ್ಲಿ ಜಾತಿಗಣತಿ ಪರ ಸಚಿವ ಪರಮೇಶ್ವರ್ ಬ್ಯಾಟ್ ಬೀಸಿದ್ದಾರೆ. ಜಾತಿಗಣತಿ ವರದಿ ಸ್ವೀಕರಿಸುವಂತೆ ನಾವೆಲ್ಲಾ ಒತ್ತಾಯ ಮಾಡಿದ್ದೇವೆ. ಸರ್ಕಾರದಿಂದ ಜಾತಿಗಣತಿಗಾಗಿ 168 ಕೋಟಿ ರೂ. ಹಣ ಖರ್ಚು ಮಾಡಿದ್ದೇವೆ.
ಈಗ ಜಾತಿಗಣತಿ ವರದಿ ಕೊಟ್ಟಾಗ ಸರ್ಕಾರ ಸ್ವೀಕರಿಸಬೇಕು. ವಿಶ್ಲೇಷಣೆ, ಚರ್ಚೆ ಅದೆಲ್ಲವೂ ಆಮೇಲೆ. ವರದಿಯನ್ನೇ ತೆಗೆದುಕೊಳ್ಳಲ್ಲ ಅಂತಾ ಹೇಳೋಕಾಗಲ್ಲ. ಹಾಗಾಗಿ ನಾವು ಒತ್ತಾಯ ಮಾಡಿದ್ದೇವೆ, ಅದನ್ನೇ ಸಿಎಂ ಕೂಡ ಹೇಳಿದ್ದಾರೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.