ಮಂಡ್ಯ, ಜು.26: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ(Srirangapatna) ತಾಲೂಕಿನ ಕೆಆರ್‌ಎಸ್ ಅಣೆಕಟ್ಟು (KRS Dam) ಭರ್ತಿಯಾಗಿದೆ. ಇನ್ನು ಡ್ಯಾಂನಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ಇದರಿಂದ ನಾಡಿನ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕಾವೇರಿ ನದಿಯ ರುದ್ರ ರಮಣೀಯ ದೃಶ್ಯ ನೋಡುಗರ ಕಣ್ಣಿಗೆ ಮುದ ನೀಡುವಂತಿದೆ.
ಒಂದು ಕಡೆ ಕಾವೇರಿ ಪ್ರಕೃತಿಯ ಮಡಿಲಲ್ಲಿ ಸೌಂದರ್ಯ ದೇವತೆ ಹಾಗೆ ಕಾಣುತ್ತಿದ್ದರೆ, ಇನ್ನೊಂದೆಡೆ ಇದೇ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿದು ನದಿ ಪಾತ್ರದಲ್ಲಿ ಪ್ರವಾಹದ ಆತಂಕವನ್ನು ತಂದಿದೆ. ಇದರಿಂದ ಕಾವೇರಿ ಕೊಳ್ಳದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಅಂದಹಾಗೆ ಕೆಆರ್‌ಎಸ್ ಡ್ಯಾಂನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಹಲವು ಘಟನೆಗಳು ಜರುಗಿವೆ. ಒಂದು ಕಡೆ ಕಾವೇರಿ ನದಿ ಪಕ್ಕದ ಅಕ್ಕಪಕ್ಕದ
ಜಮೀನುಗಳು ಜಲಾವೃತಗೊಂಡು ಅಲ್ಲಿನ ಬೆಳೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಇದನ್ನೂ ಓದಿ:ಕಾವೇರಿ ನದಿಯಲ್ಲಿ ಮುಳುಗಡೆಯಾಯ್ತು ದೋಣಿ ಕಡವು ಗ್ರಾಮ; ಪ್ರಾಣ ಕೈಯಲ್ಲಿ ಹಿಡಿದು ಪ್ರವಾಹ ದಾಟುತ್ತಿರೋ ಜನರು
ಈ ಹಿನ್ನಲೆ ನದಿಗೆ ಇಳಿಯಲು ಭಕ್ತರಿಗೆ ನಿಷೇಧ ಹೇರಲಾಗಿದೆ. ಶ್ರೀರಂಗಪಟ್ಟಣ ಕೋಟೆ ಗಣಪತಿ ದೇವಸ್ಥಾನ ಕಾವೇರಿ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದು, ವಿಘ್ನೇಶ್ವರನಿಗೆ ಪೂಜೆ ಇಲ್ಲದ ಹಾಗೆ ಆಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸುಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಕಂಟಕ ಎದುರಾಗಿದೆ. ಅಪಾರ ಪ್ರಮಾಣದ ನೀರು ಬರುತ್ತಿರುವ ಹಿನ್ನೆಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟಿನ 25 ನಡುಗಡ್ಡೆಗಳ ಪೈಕಿ ಬಹುತೇಕ ನಡುಗಡ್ಡೆಗಳು ಮುಳುಗಡೆಯಾಗಿವೆ. ಇದರಿಂದ ಇಲ್ಲಿನ ಪಕ್ಷಿ ಸಂಕುಲಗಳಿಗೂ ಸಂಕಷ್ಟ ಎದುರಾಗಿದೆ.
ಇದಲ್ಲದೇ ರಂಗನತಿಟ್ಟಿನ ವಾಕಿಂಗ್ ಪಾಥ್ ಸಹ ನೀರಿನಲ್ಲಿ ಮುಳುಗಡೆಯಾಗಿದೆ. ಈಗಾಗಲೇ ಬೋಟಿಂಗ್ ವ್ಯವಸ್ಥೆ ಸ್ಥಗಿತ ಮಾಡಲಾಗಿದ್ದು, ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹದಿಂದ ಆಗಿರುವ ಸಮಸ್ಯೆಗಳ ಸ್ಥಳಕ್ಕೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಡಿಸಿ ಡಾ.ಕುಮಾರ, ಜಿಪಂ ಸಿಇಓ ತನ್ವೀರ್ ಸೇಠ್ ಆಸೀಫ್ ಭೇಟಿ ನೀಡಿದರು. ಮುಂದೆ 1.50 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಮುಂದೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜೊತೆಗೆ ಬೆಳೆ ಹಾನಿ ಪರಿಹಾರಸ ಬಗ್ಗೆ ಚಿಂತನೆ ಮಾಡಲಾಯಿತು. ಒಟ್ಟಾರೆ ಕಾವೇರಿ ನದಿ ಭೋರ್ಗರೆತವಾಗಿ ಹರಿಯುತ್ತಿರೋದು ಒಂದು ಕಡೆ ಸಂತಸವಾದರೆ, ಇನ್ನೊಂದೆಡೆ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿಯಿಂದ ಪ್ರವಾಹದ ಸಮಸ್ಯೆಯನ್ನು ಕಾವೇರಿ ಕೊಳ್ಳದ ಜನರು ಎದುರಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ