ಮಂಡ್ಯ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಗ್ರಾಮದಲ್ಲಿ (Gejjalagere Mega Dairy) ಶುಕ್ರವಾರ (ಡಿ 30) ಮೆಗಾಡೇರಿಗೆ ಚಾಲನೆ ನೀಡಿದರು. ಸುಮಾರು 5 ಎಕರೆಯಲ್ಲಿ ನಿರ್ಮಾಣವಾಗಿರುವ ಮೆಗಾಡೇರಿಯಲ್ಲಿ ಹಾಲಿನ ಪುಡಿ ಉತ್ಪಾದನಾ ಘಟಕ, ಹಾಲು ಸಂಸ್ಕರಣಾ ಘಟಕಗಳಿವೆ. ಡೇರಿ ನಿರ್ಮಾಣಕ್ಕಾಗಿ ₹ 260 ಕೋಟಿ ವೆಚ್ಚವಾಗಿದ್ದು, ಕಟ್ಟಡದ ಹೊರಭಾಗದಲ್ಲಿ ಒಟ್ಟು 6 ಲಕ್ಷ ಲೀಟರ್ ಸಾಮರ್ಥ್ಯದ 4 ಬೃಹತ್ ಹಾಲು ಸಂಗ್ರಹಣಾ ಟ್ಯಾಂಕ್‌ಗಳಿವೆ. ಪ್ರತಿ ಟ್ಯಾಂಕ್ಗಳಲ್ಲಿ ತಲಾ 1.5 ಲಕ್ಷ ಲೀಟರ್ ಹಾಲು ಸಂಗ್ರಹ ಸಾಧ್ಯವಿದೆ. ಇದು ರಾಜ್ಯದ ಎರಡನೇ ಅತಿ ದೊಡ್ಡ ಮೆಗಾ ಡೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೆಗಾಡೇರಿಗೆ 10 ರಿಂದ 14 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯ, 30 ಮೆಟ್ರಿಕ್ ಟನ್ ಹಾಲಿನ ಪುಡಿ ಉತ್ಪಾದಿಸುವ ಸಾಮರ್ಥ್ಯ ಇದೆ. 2 ಲಕ್ಷ ಲೀಟರ್ ಯುಎಚ್‌ಡಿ ಹಾಲನ್ನು ಪ್ಯಾಕ್ ಮಾಡಲು ಇಲ್ಲಿ ಅವಕಾಶವಿದೆ. ಇದರ ಜೊತೆಗೆ ಬೆಣ್ಣೆ, ತುಪ್ಪ, ಪೇಡ, ಬರ್ಫಿ, ಕೋವಾ, ಲಾಡು, ಬೆಲ್ಲದ ಬರ್ಫಿ, ಮೊಸರು, ಮಜ್ಜಿಗೆ ತಯಾರಿಕಾ ಘಟಕಗಳೂ ಇವೆ. ಮೆಗಾಡೇರಿಯಿಂದ ಮಂಡ್ಯ ಜಿಲ್ಲೆಯ ಸುಮಾರು 1 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ರೈತರು ಪಾಲ್ಗೊಂಡಿದ್ದಾರೆ.
Inaugurating the Mega dairy project by Mandya District Cooperative Milk Producers Union Ltd in Mandya.
ಮಂಡ್ಯದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮೆಗಾ ಡೇರಿ ಉದ್ಘಾಟನೆ. https://t.co/ou95GbXHzP
— Amit Shah (@AmitShah) December 30, 2022
ಜನಸಂಕಲ್ಪ ಕಾರ್ಯಕ್ರಮಕ್ಕೆ ಕ್ಷಣಗಣನೆ
ಮದ್ದೂರು ತಾಲ್ಲೂಕಿನಲ್ಲಿ ಮೆಗಾಡೇರಿ ಉದ್ಘಾಟನಾ ಕಾರ್ಯಕ್ರಮ ಒಂದು ಹಂತಕ್ಕೆ ಬಂದಿದ್ದು, ಮತ್ತೊಂದೆಡೆ ಮಂಡ್ಯದಲ್ಲಿ ಬಿಜೆಪಿ ಜನ ಸಂಕಲ್ಪ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ವೇದಿಕೆ ಮೇಲೆ ಅಮಿತ್ ಶಾ ಜೊತೆ 27 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಾರ್ಯಕ್ರಮ ಆರಂಭವಾಗುವ ಮೊದಲು ವೇದಿಕೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ದಿವಂಗತ ಹೀರಾಬೆನ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ವೇದಿಕೆಗೆ ಹೀರಾಬೆನ್ ಅವರ ಭಾವಚಿತ್ರವನ್ನು ಕಾರ್ಯಕರ್ತರು ತಂದಿಟ್ಟಿದ್ದಾರೆ.
ಭಾರೀ ಜನಸ್ತೋಮ
ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾವೇಶಕ್ಕಾಗಿ ರಾಜ್ಯದ ವಿವಿಧೆಡೆಯಿಂದ ತಂಡೋಪತಂಡವಾಗಿ ಸಾವಿರಾರು ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಪ್ರತಿ ಗೇಟ್ಗಳಿಗೂ 6 ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಪ್ರತಿ ದ್ವಾರಕ್ಕೂ 20 ಪುರುಷ, 10 ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಮಿತ್ ಶಾ ಜೊತೆಗೆ ಬಿಜೆಪಿ ನಾಯಕರ ಮಾತುಕತೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಕರ್ನಾಟಕ ಬಿಜೆಪಿಯ ಹಲವು ನಾಯಕರು ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ., ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ ನಡೆದ ಇತ್ತೀಚೆಗಿನ ವಿಧಾನಸಭಾ ಚುನಾವಣೆಗಳಲ್ಲಿ ಯಾವ ಚುನಾವಣೆಯಲ್ಲಿ ಯಾರಿಗೆ ಯಾವ ಅಂಶ ಕೈ ಹಿಡಿಯಿತು ಎಂಬ ಬಗ್ಗೆ ಮಾತುಕತೆಯ ವೇಳೆ ಅಮಿತ್ ಶಾ ಮಾಹಿತಿ ಪಡೆದರು. ಜನತಾ ಪರಿವಾರಕ್ಕೆ ಅಧಿಕಾರ ಸಿಕ್ಕಿದ ಹಿನ್ನೆಲೆ, ದೇವೇಗೌಡ ಮತ್ತು ಎಸ್.ಎಂ.ಕೃಷ್ಣ ಸಿಎಂ ಆದ ಹಿನ್ನೆಲೆಯ ಬಗ್ಗೆಯೂ ಮುಖ್ಯಮಂತ್ರಿಯಿಂದ ಅವರು ಮಾಹಿತಿ ಪಡೆದರು. ಬಿಜೆಪಿ ಮೊದಲ ಚುನಾವಣೆಯಲ್ಲಿ ಎರಡು ಸ್ಥಾನ ಪಡೆದಿದ್ದ ಬಗ್ಗೆ ಕೂಡಾ ವಿವರಣೆ ಕೇಳಿದರು. ಪಕ್ಷ ಈಗ ಸಾಗುತ್ತಿರುವ ರೀತಿ ಮತ್ತು ವೇಗವರ್ಧನೆಗೆ ಇರುವ ಅವಕಾಶಗಳ ಬಗ್ಗೆ ಸಲಹೆ ನೀಡಿದರು. 25 ನಿಮಿಷಗಳ ಸಮಾಲೋಚನೆ ವೇಳೆ ನಾಯಕರು ಹೇಳಿದ್ದನ್ನು ಕೇಳಿಸಿಕೊಂಡರು. ತಾವು ಹೆಚ್ಚು ಮಾತನಾಡಲಿಲ್ಲ.
Published On - 12:43 pm, Fri, 30 December 22