ಟಿಪ್ಪು ಹತ್ಯೆ, ಉರಿಗೌಡ-ನಂಜೇಗೌಡರ ಬಗ್ಗೆ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖಿಸಿರುವುದೇನು?
2006ರಲ್ಲಿ ಪರಿಷ್ಕೃತ ಆವೃತ್ತಿಯ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ-ನಂಜೇಗೌಡರ ಹೆಸರು ದಾಖಲಾಗಿದೆ. ಆದ್ರೆ ಎಲ್ಲೂ ಅವರು ಟಿಪ್ಪುನನ್ನು ಕೊಂದರು ಎಂದು ಪ್ರಸ್ತಾಪಿಸಿಲ್ಲ.
ಮಂಡ್ಯ: ರಾಜ್ಯ ವಿಧಾನ ಸಭಾ ಚುನಾವಣೆ(Karnataka Assembly Elections 2023) ಕಾವು ಹೆಚ್ಚುತ್ತಿದ್ದಂತೆ ಉರಿಗೌಡ, ನಂಜೆಗೌಡರ ಹೆಸರು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ(Narendra Modi) ಮಂಡ್ಯಕ್ಕೆ ಆಗಮಿಸಿದ್ದ ವೇಳೆ ಉರಿಗೌಡ-ನಂಜೇಗೌಡ(Uri Gowda Nanje Gowda) ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿತ್ತು. ಟಿಪ್ಪು ಕೊಂದಿದ್ದ ಒಕ್ಕಲಿಗರ ಸೇನಾನಿಗಳು ಇವರು ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಇದಾದ ಬಳಿಕ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಉರಿಗೌಡ-ನಂಜೇಗೌಡ ಕಪೋಲ ಕಲ್ಪಿತ ಪಾತ್ರಗಳು ಎಂದಿದ್ದರು. ಈಗ ಮತ್ತೆ ಮಂಡ್ಯದಲ್ಲಿ ಉರಿಗೌಡ, ದೊಡ್ಡನಂಜೇ ಗೌಡ ವಿಚಾರ ಮುನ್ನಲೆಗೆ ಬಂದಿದೆ. 2006ರಲ್ಲಿ ಪರಿಷ್ಕೃತ ಆವೃತ್ತಿಯ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ-ನಂಜೇಗೌಡರ ಹೆಸರು ದಾಖಲಾಗಿದೆ.
ಪ್ರೊ ಜಯಪ್ರಕಾಶ್ ಗೌಡರ ಪರಿಶ್ಕೃತ ಆವೃತ್ತಿಯ ಸುವರ್ಣ ಮಂಡ್ಯ ಪುಸ್ತಕದಲ್ಲಿಉರಿಗೌಡ-ನಂಜೇಗೌಡರ ಹೆಸರು ಪ್ರಸ್ಥಾಪ ಮಾಡಲಾಗಿದೆ. ಡಾ.ದೇ ಜವರೇಗೌಡರ ಸಂಪಾದಕತ್ವದಲ್ಲಿ 2006ರಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ. 500 ಪುಟಗಳ ಗ್ರಂಥವಾಗಿರುವ ಇದು ಮಂಡ್ಯದ ಇತಿಹಾಸವನ್ನ ಸಾರುವ ಪುಸ್ತಕ.
ಇದನ್ನೂ ಓದಿ: ಟಿಪ್ಪುವನ್ನು ಉರಿಗೌಡ ನಂಜೇಗೌಡ ಕೊಂದ್ರಾ? ಯಾರಿವರು? ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿದ್ದಿಷ್ಟು
ಸುವರ್ಣ ಮಂಡ್ಯ ಪುಸ್ತಕದಲ್ಲಿ ಏನೀದೆ?
ಮಂಡ್ಯ ಜಿಲ್ಲೆ ರಚನೆಯಾಗಿ 1989 ಕ್ಕೆ 50 ವರ್ಷಗಳು ಕಳೆದ ಹಿನ್ನೆಲೆ ನಡೆದ ಮಹೋತ್ಸವದಲ್ಲಿ ಈ ಪುಸ್ತಕ ಮಂಡನೆಯಾಗಿತ್ತು. ಬಳಿಕ 1994 ರಲ್ಲಿ ನಡೆದ 63 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುವರ್ಣ ಮಂಡ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಪುಸ್ತಕದಲ್ಲಿ ಟಿಪ್ಪುವನ್ನ ಕೊಂದಿದ್ದು ಉರಿಗೌಡ ನಂಜೇಗೌಡ ಎಂಬ ವಿಚಾರ ಪ್ರಸ್ತಾಪವಾಗಿಲ್ಲ. ಟಿಪ್ಪು ವಿರುದ್ದ ಉರಿಗೌಡ ಮತ್ತು ನಂಜೇಗೌಡ ಸೆಟೆದು ನಿಂತರು ಎಂದು ಹೇಳಲಾಗಿದೆ.
ವಿವಾದದ ಹಿನ್ನೆಲೆ
ನರೇಂದ್ರ ಮೋದಿ ಮಂಡ್ಯಕ್ಕೆ ಬಂದ ವೇಳೆ ಅವರ ಸ್ವಾಗತಕ್ಕಾಗಿ ಮಾಡಿದ ದ್ವಾರ ಬಾಗಿಲಿಗೆ ಉರಿಗೌಡ, ನಂಜೇಗೌಡ ಹೆಸರು ಇಡಲಾಗಿತ್ತು. ಆದರೆ ಅಂದು ರಾತ್ರೋ ರಾತ್ರಿ ಅದನ್ನ ತೆರೆವು ಗೊಳಿಸಿ, ಬಾಲಗಂಗಾಧರನಾಥ ಸ್ವಾಮೀಜಿ ದ್ವಾರ ಬಾಗಿಲು ಅಂತಾ ಬದಲಾಯಿಸಲಾಗಿತ್ತು. ಇದಾದ ನಂತರ ಸಿ.ಟಿ. ರವಿ ಕೂಡ ಟಿಪ್ಪು ಕೊಂದದ್ದು ಉರಿಗೌಡ, ನಂಜೇಗೌಡ ಎಂದು ಹೆಸರು ಬಳಸಿ ಒಕ್ಕಲಿಗ ಅಸ್ತ್ರ ಹೂಡಿಸಿದ್ದರು. ಇದನ್ನೇ ಪ್ರತ್ಯಾಸ್ತ್ರ ಮಾಡಿಕೊಂಡ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಇದನ್ನು ಒಕ್ಕಲಿಗರ ಮೇಲೆ ಬಿಜೆಪಿ ವಕ್ರದೃಷ್ಟಿ ಎಂದು ಸಮರ ಸಾರಿದರು. ಬಿಜೆಪಿಯವರು ಇತಿಹಾಸದಲ್ಲೇ ಇಲ್ಲದ ವ್ಯಕ್ತಿಗಳನ್ನ ಸೃಷ್ಟಿಸಿ, ಒಕ್ಕಲಿಗ ಸಮುದಾಯಕ್ಕೆ ಅಗೌರವ ತೋರಿಸ್ತಿದ್ದಾರೆ. ಒಕ್ಕಲಿಗರು ಇದನ್ನ ಪ್ರತಿಭಟಿಸಬೇಕು ಎಂದಿದ್ದರು. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಒಕ್ಕಲಿಗರನ್ನು ಓಲೈಸುವ ಕೆಲಸದ ಮಾಡಿರೋ ಬಿಜೆಪಿ, ಇನ್ನೊಂದೆಡೆ ಟಿಪ್ಪು ಕೊಲೆಯ ಕಳಂಕವನ್ನು ಮೆತ್ತಿ, ಒಕ್ಕಲಿಗ ಸಮುದಾಯಕ್ಕೆ ಕಪ್ಪುಚುಕ್ಕೆ ಮೆತ್ತಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಟ್ವೀಟ್ನಲ್ಲೇ ಕಿಡಿ ಕಾರಿದ್ದರು. ನಂತರ ಬಿಜೆಪಿ ವಕ್ತಾರ ಸಿಟಿ ಮಂಜುನಾಥ್ ಮಂಡ್ಯದಲ್ಲೇ ಸ್ಪೋಟಕ ಸಾಕ್ಷ್ಯವನ್ನ ಬಿಡುಗಡೆ ಮಾಡಿದರು. 70 ವರ್ಷಗಳ ಹಿಂದಿನ ಲಾವಣಿ ಹಾಡನ್ನ ರಿಲೀಸ್ ಮಾಡಿದ್ದರು. ಅದರಲ್ಲಿ ಪರಂಪರಾಗತ ವೈರಿ ಗೌಡರು ತರಿದರು ಖಡ್ಗದಲ್ಲಿ ಎಂಬ ಪದ ಬಳಕೆ ಮಾಡಲಾಗಿತ್ತು. ಈ ಲಾವಣಿ ಹಾಡಿನ ಸಿಡಿಯನ್ನ ಕೆಪಿಸಿಸಿ ಕಚೇರಿ ಹಾಗೂ ಜೆಡಿಎಸ್ ಕೇಂದ್ರ ಕಚೇರಿಗೆ ಕೊರಿಯರ್ ಮಾಡುವುದರ ಮೂಲಕ ಟಕ್ಕರ್ ಕೊಟ್ಟಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:15 pm, Sat, 18 March 23