ಮಂಡ್ಯ ಜಿಲ್ಲೆಗೂ ವಿ.ವಿ ಮಂಜೂರು ಮಾಡಲಾಗುವುದು: ಸಚಿವ ಅಶ್ವತ್ಥನಾರಾಯಣ

| Updated By: ವಿವೇಕ ಬಿರಾದಾರ

Updated on: Jul 13, 2022 | 6:02 PM

ಮಂಡ್ಯದಲ್ಲಿರುವ ಏಕೀಕೃತ ವಿಶ್ವವಿದ್ಯಾಲಯನ್ನು ಮೇಲ್ದರ್ಜೆಗೇರಿಸಿ, ಇಡೀ ಮಂಡ್ಯ ಜಿಲ್ಲೆಯ ಪದವಿ ಕಾಲೇಜುಗಳನ್ನೆಲ್ಲ ಇದರ ವ್ಯಾಪ್ತಿಗೆ ತಂದು ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಂಡ್ಯ ಜಿಲ್ಲೆಗೂ ವಿ.ವಿ ಮಂಜೂರು ಮಾಡಲಾಗುವುದು: ಸಚಿವ ಅಶ್ವತ್ಥನಾರಾಯಣ
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ
Follow us on

ಮಂಡ್ಯ: ಮಂಡ್ಯದಲ್ಲಿರುವ ಏಕೀಕೃತ ವಿಶ್ವವಿದ್ಯಾಲಯನ್ನು ಮೇಲ್ದರ್ಜೆಗೇರಿಸಿ, ಇಡೀ ಮಂಡ್ಯ ಜಿಲ್ಲೆಯ ಪದವಿ ಕಾಲೇಜುಗಳನ್ನೆಲ್ಲ ಇದರ ವ್ಯಾಪ್ತಿಗೆ ತಂದು ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಪಾಂಡವಪುರ ತಾಲ್ಲೂಕು ಬಿಜೆಪಿ ಹಾಗೂ ಪಾಂಡವಪುರ ಪರಿವರ್ತನಾ ಟ್ರಸ್ಟ್ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಪಕ್ಷ ಒಂದಾದರೂ ವಿವಿ ಇರಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ಇದರಂತೆ, ಮಂಡ್ಯ ಜಿಲ್ಲೆಗೂ ವಿ.ವಿ.ಯನ್ನು ಮಂಜೂರು ಮಾಡಲಾಗುವುದು’ ಎಂದು ತಿಳಿಸಿದರು.

ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣವು ಸಾಧ್ಯವಾದಷ್ಟೂ ಹತ್ತಿರದಲ್ಲೇ ಮತ್ತು ಕೈಗೆಟುಕುವಂತೆ ಸಿಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಹೀಗಾಗಿ, ಮಂಡ್ಯದ ಏಕೀಕೃತ ವಿ.ವಿ.ಯನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯ ಕ್ರಮ ಕೈಗೊಂಡು, ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಇರುವ ಮಕ್ಕಳು, ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಹೋಗುವ ಪ್ರವೃತ್ತಿ ನಿಲ್ಲಬೇಕು. ಹೀಗಾಗಿಯೇ ಬಜೆಟ್​​ನಲ್ಲಿ ಈ ಬಾರಿ ಏಳು ನೂತನ ಮಾದರಿಯ ವಿ.ವಿ.ಗಳನ್ನು ಘೋಷಿಸಲಾಗಿದೆ. ಈ ಆಧುನಿಕ ಮಾದರಿಯ ವಿ.ವಿ.ಗಳಿಗೆ ಹೆಚ್ಚಿನ ಸಿಬ್ಬಂದಿಯಾಗಲಿ, ಸ್ಥಳವಾಗಲಿ ಬೇಕಾಗುವುದಿಲ್ಲ. ತಂತ್ರಜ್ಞಾನದ ಗರಿಷ್ಠ ಬಳಕೆಯಿಂದ ಸೀಮಿತ ಆವರಣದಿಂದಲೇ ಒಳ್ಳೆಯ ಶಿಕ್ಷಣ ಕೊಡಬಹುದು ಎಂದು ಅವರು ಹೇಳಿದರು.

ಮಂಡ್ಯ ಜಿಲ್ಲೆಯು ಕೃಷಿ ಆಧಾರಿತ ಪ್ರದೇಶವಾಗಿದೆ. ಇಲ್ಲಿ ಕೃಷಿ ಬಲವರ್ಧನೆ ಮಾಡುವಂತಹ ಕೋರ್ಸುಗಳು ಅಗತ್ಯವಾಗಿವೆ. ಇದರಿಂದ ಕೃಷಿ ಸಂಸ್ಕೃತಿಯ ಪುನರುತ್ಥಾನವೂ ಆಗುತ್ತದೆ. ಉದ್ದೇಶಿತ ವಿ.ವಿ.ಯಲ್ಲಿ ಇಂತಹ ಕೋರ್ಸುಗಳನ್ನು ಅಳವಡಿಸಲಾಗುವುದು ಎಂದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಾಂಡವಪುರ ತಾಲೂಕು ಬಿಜೆಪಿ ಮತ್ತು ಪರಿವರ್ತನಾ ಟ್ರಸ್ಟ್ ಜತೆಗೂಡಿ ನೀಡಿದ ಆಂಬುಲೆನ್ಸ್ ಅನ್ನು ಸಚಿವರು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.

ಈ ಬಗ್ಗೆ ಮಾತನಾಡಿದ ಅವರು, ಈ ಆಂಬುಲೆನ್ಸ್ ಪಾಂಡವಪುರ ತಾ.ನ ಜನತೆಗೆ ಉಪಯುಕ್ತವಾಗಲಿದೆ. ಇಂತಹ ಸಾಮಾಜಿಕ ಕಳಕಳಿ ಇಂದು ಅಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಇಂದ್ರೇಶ್ ಮುಂತಾದವರು ಉಪಸ್ಥಿತರಿದ್ದರು.

Published On - 6:02 pm, Wed, 13 July 22