ಮಂಗಳೂರು, ಫೆ.05: ಮಂಗಳೂರಿನ ಮಳಲಿ ಮಸೀದಿ (Malali Mosque) ವಿವಾದಕ್ಕೆ ಇಂದು ವಕ್ಫ್ ಬೋರ್ಡ್ (Waqf Board) ಅಧಿಕೃತ ಎಂಟ್ರಿ ಕೊಟ್ಟಿದೆ. ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಅಧಿಕೃತವಾಗಿ ವಕಾಲತ್ತು ದಾಖಲಿಸೋ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಮಳಲಿ ಮಸೀದಿ ವಕ್ಫ್ ಬೋರ್ಡ್ ಆಸ್ತಿ ಎಂದು ಪ್ರತ್ಯೇಕ ವಾದ ಮಂಡಿಸಲು ಮುಂದಾಗಿದೆ. ವಕೀಲರ ಮೂಲಕ ವಕಾಲತ್ತು ದಾಖಲಿಸಿ ಪ್ರಕರಣದಲ್ಲಿ ಅಧಿಕೃತ ಹೋರಾಟಕ್ಕೆ ವಕ್ಫ್ ಬೋರ್ಡ್ ಇಳಿದಿದೆ. ಸದ್ಯ ಹೈಕೋರ್ಟ್ ನಿಂದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ಗೆ ನಿರ್ದೇಶನ ಸಿಕ್ಕಿದೆ.
ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿ ಹೌದಾ? ಅಲ್ಲವಾ ಅಂತ ನಿರ್ಧರಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯ ಹೈಕೋರ್ಟ್ ಈಗಾಗಲೇ ತೀರ್ಪು ಪ್ರಕಟಿಸಿ ಆದೇಶ ಹೊರಡಿಸಿದೆ. ಹೀಗಾಗಿ ಹೈಕೋರ್ಟ್ ಆದೇಶ ತಲುಪಿದ ಕೂಡಲೇ ಮಂಗಳೂರು ಕೋರ್ಟ್ನಲ್ಲಿ ಮತ್ತೆ ವಿಚಾರಣೆ ಆರಂಭವಾಗಲಿದೆ. ಇಂದು ಆದೇಶ ತಲುಪಿದರೇ ವಾದ ಮಂಡಿಸಲು ವಿಎಚ್ಪಿ ಪರ ವಕೀಲರಿಂದಲೂ ಅರ್ಜಿ ಸಲ್ಲಿಕೆಯಾಗಲಿದೆ. ಇನ್ನು ಮತ್ತೊಂದೆಡೆ ವಿಎಚ್ಪಿ ಮತ್ತು ಮಳಲಿ ಮಸೀದಿ ಕಾನೂನು ಹೋರಾಟಕ್ಕೆ ವಕ್ಫ್ ಬೋರ್ಡ್ ಎಂಟ್ರಿಯಾಗಿದೆ. ಮಳಲಿ ಮಸೀದಿ ವಕ್ಫ್ ಆಸ್ತಿ ಎಂದು ದಾಖಲೆ ಸಲ್ಲಿಸಲು ದಕ್ಷಿಣ ಕನ್ನಡ ವಕ್ಫ್ ಬೋರ್ಡ್ ತಯಾರಿ ನಡೆಸಿದೆ. ಮಳಲಿ ಮಸೀದಿ ಮತ್ತು ವಿಎಚ್ಪಿಯಿಂದಲೂ ಈ ಸಂಬಂಧ ದಾಖಲೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಸದ್ಯ ಈಗ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮಳಲಿ ಮಸೀದಿ ವಿವಾದ ವೇದಿಕೆಯಾಗಿದೆ.
ಇದನ್ನೂ ಓದಿ: Arun Kumar Puthila: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಗೆ ಬಿಜೆಪಿ ಗಡುವು: ಇಂದೇ ಅಂತಿಮ ನಿರ್ಧಾರ ಸಾಧ್ಯತೆ
ಮಳಲಿ ಮಸೀದಿ ಭವಿಷ್ಯ ಮಂಗಳೂರು ಸಿವಿಲ್ ಕೋರ್ಟ್ ವಿಚಾರಣೆ ಮೇಲೆ ನಿಂತಿದೆ. ಮಳಲಿ ಮಸೀದಿ ವಕ್ಫ್ ಆಸ್ತಿ ಎಂದು ದಾಖಲೆ ಸಹಿತ ವಕ್ಫ್ ಬೋರ್ಡ್ ಮತ್ತು ಮಸೀದಿ ಆಡಳಿತ ವಾದ ಮಂಡಿಸಬೇಕು. ವಕ್ಫ್ ಆಸ್ತಿಯಲ್ಲ ಎಂದು ವಿಎಚ್ಪಿ ಕೂಡ ದಾಖಲೆ ಸಹಿತ ವಾದ ಮಂಡಿಸಬೇಕು. ಒಂದು ವೇಳೆ ವಕ್ಫ್ ಆಸ್ತಿ ಎಂದಾದರೆ ಇಡೀ ಪ್ರಕರಣ ವಕ್ಫ್ ಟ್ರಿಬ್ಯೂನಲ್ ಗೆ ಹೈಕೋರ್ಟ್ ವರ್ಗಾವಣೆ ಮಾಡುತ್ತೆ. ವಕ್ಫ್ ಆಸ್ತಿ ಅಲ್ಲ ಅಂತಾದ್ರೆ ಮುಂದಿನ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯೋ ಸಾಧ್ಯತೆ ಇದೆ. ಎಪ್ರಿಲ್ 22, 2022ರಂದು ಮಳಲಿ ಮಸೀದಿ ವಿವಾದ ಸಂಬಂಧ ವಿಎಚ್ಪಿ ಕೋರ್ಟ್ ಮೆಟ್ಟಿಲೇರಿತ್ತು. ವಿಎಚ್ಪಿ ಪರ ಧನಂಜಯ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಮೇ.25, 2022ರಂದು ವಿಎಚ್ಪಿಯಿಂದ ವಿವಾದ ಸಂಬಂಧ ತಾಂಬೂಲ ಪ್ರಶ್ನೆ ಕೇಳಲಾಗಿತ್ತು. ತಾಂಬೂಲ ಪ್ರಶ್ನೆಯಲ್ಲಿ ದೈವ ಸಾನಿಧ್ಯ ಇರೋದು ಪತ್ತೆಯಾಗಿತ್ತು. ಆದರೆ ಕಾನೂನು ಹೋರಾಟದ ಫಲಿತಾಂಶಕ್ಕಾಗಿ ವಿಎಚ್ಪಿ ಕಾಯುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ