
ಬೆಂಗಳೂರು, ಜನವರಿ 21: ಬಂಡೆಪಾಳ್ಯ ಠಾಣಾ ವ್ಯಾಪ್ತಿಯ ಮಂಗಮ್ಮನಪಾಳ್ಯದಲ್ಲಿ ಹಳೇ ದ್ವೇಷದ ಹಿನ್ನೆಲೆ ನಟೋರಿಯಸ್ ರೌಡಿಶೀಟರ್ ಮೊಹಮ್ಮದ್ ಶಬ್ಬೀರ್ನ ವೈರಿಗಳು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಬರೋಬ್ಬರಿ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಮಂಗಮ್ಮನಪಾಳ್ಯ ನಿವಾಸಿ ಮೊಹಮ್ಮದ್ ಶಬ್ಬೀರ್ ಮತ್ತು ಐವರು ರಾತ್ರಿ ತಮ್ಮ ಸ್ನೇಹಿತನ್ನ ಮಾತಾಡಿಸಿ ಆಟೋದಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭ ದಾಳಿ ನಡೆಸಿದ್ದ ಆರೋಪಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.
ನೂರುಲ್ಲ, ನದೀಮ್, ಸಲ್ಮಾನ್ ಖಾನ್, ಮೊಹಮ್ಮದ್ ಅಲಿ, ಸೖಯದ್ ಇಸ್ಮಾಯಿಲ್, ಮೊಹಮ್ಮದ್ ಸಿದ್ದಿಕ್, ಸೖಯದ್ ಕಲೀಂ, ಉಮ್ರೇಜ್ ಬಂಧಿತ ಆರೋಪಿಗಳಾಗಿದ್ದು, ಹಳೆ ವೈಷ್ಯಮ್ಯ ಮತ್ತು ಹವಾ ಮಾಡೋ ವಿಚಾರಕ್ಕೆ ಶಬ್ಬೀರನನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಮೊದಲೇ ರೌಡಿ ಶೀಟರ್ ಆಗಿದ್ದ ಶಬ್ಬೀರ್ ಹಾವಳಿ ಏರಿಯಾದಲ್ಲಿ ಹೆಚ್ಚಾಗಿತ್ತು. ಇಡೀ ಏರಿಯಾದಲ್ಲಿ ಯಾರೂ ಶಬ್ಬೀರ್ನ ಮಾತು ಮೀರುವಂತಿರಲಿಲ್ಲ. ಯಾರೇ ರೌಡಿಸಂ ಮಾಡಿದ್ರೂ ಮೊದಲು ಶಬ್ಬೀರ್ಗೆ ವಿಚಾರ ಹೇಳಬೇಕಿತ್ತು. ಆತನ ಬಿಟ್ಟು ಯಾವುದೇ ವ್ಯವಹಾರ ಮಾಡುವಂತಿರಲಿಲ್ಲ. ಯಾರಾದ್ರೂ ತಾನು ಮಾಡ್ತಿದ್ದ ಬ್ಯುಸಿನೆಸ್ ಮಾಡಿದ್ರೆ, ಹಫ್ತಾ ವಸೂಲಿ, ಸೆಟ್ಲಮೆಂಟ್ ಮಾಡಿದ್ರೆ ಗರಂ ಆಗ್ತಿದ್ದ. ಕೂಡಲೇ ಅವರನ್ನು ಕರೆಸಿ ಬೆದರಿಕೆ ಹಾಕಿ ಹಲ್ಲೆ ಮಾಡ್ತಿದ್ದ. ಇಂತಹುದ್ದೇ ಕಾರಣದಿಂದ ಸುಮಾರು 10-15 ಜನ ಶಬ್ಬೀರ್ನಿಂದ ಹಲ್ಲೆಗೊಳಗಾಗಿದ್ರು. ಹೀಗಾಗಿ ಶಬ್ಬೀರ್ ಇದ್ರೆ ನಮ್ಮ ವ್ಯವಹಾರಗಳು ನಡೆಯಲ್ಲ, ನಮ್ಮ ಜೀವಕ್ಕೆ ಅಪಾಯ ಎಂದು ಎಲ್ಲ ಸೇರಿ ಆತನ ಕತೆಯನ್ನೇ ಮುಗಿಸಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ರಾತ್ರಿ ವೇಳೆ ನಡುರಸ್ತೆಯಲ್ಲೇ ಝಳಪಿಸಿದ ಲಾಂಗ್; ಖಾರದ ಪುಡಿ ಎರಚಿ ರೌಡಿ ಶೀಟರ್ನ ಭೀಕರ ಹತ್ಯೆ
ಇನ್ನು ಆರೋಪಿಗಳು ಈ ಹಿಂದೆಯೂ ಎರಡೆರಡು ಬಾರಿ ಶಬ್ಬೀರ್ನ ಮುಗಿಸಲೇ ಬೇಕು ಎಂದು ಹೊಂಚು ಹಾಕಿದ್ದರು. ಆದರೆ ಆತನ ಮೇಲಿನ ಭಯ ಇವರನ್ನು ಕೃತ್ಯದಿಂದ ಹಿಂದೆ ಸರಿಯುವಂತೆ ಮಾಡಿತ್ತು. ಅದಾದ ಬಳಿಕ ಮತ್ತೆ ಮೂರನೇ ಬಾರಿಗೆ ಸ್ಕೆಚ್ ಹಾಕಿದ್ದ ಗ್ಯಾಂಗ್, ಜ.12ರಂದು ಪಕ್ಕಾ ಪ್ಲ್ಯಾನ್ ಮಾಡಿ ಆಟೋದಲ್ಲಿ ಬರ್ತಿದ್ದ ಶಬ್ಬೀರ್ ಅಡ್ಡಗಟ್ಟಿ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿರುವ ಪೊಲೀಸರು, ಇನ್ನೂ ಕೆಲವರಿಗೆ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:10 pm, Wed, 21 January 26