AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttara Kannada: ಮೋಜು ಮಸ್ತಿಗಾಗಿ ಅರಣ್ಯ ಅಧಿಕಾರಿಗಳಿಂದಲೇ ಮರಗಳ ಮಾರಣ ಹೋಮ? ತನಿಖೆಗೆ ಆದೇಶ

ಉತ್ತರ ಕನ್ನಡದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳೇ ಮೋಜು ಮಸ್ತಿಗಾಗಿ ಅಕ್ರಮವಾಗಿ ಮರ ಕಡಿದು ಪ್ಯಾರಾಗೋಲಾ ನಿರ್ಮಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ವನ್ಯಜೀವಿ ಸಂರಕ್ಷಣಾಕಾಯ್ದೆ-1972ರ ಉಲ್ಲಂಘಿಸಿ ಮರಗಳ ಮಾರಣ ಹೋಮ ಮಾಡಲಾಗಿರುವ ಕಾರಣ, ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಿರಿಯ ಅರಣ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ.

Uttara Kannada: ಮೋಜು ಮಸ್ತಿಗಾಗಿ ಅರಣ್ಯ ಅಧಿಕಾರಿಗಳಿಂದಲೇ ಮರಗಳ ಮಾರಣ ಹೋಮ? ತನಿಖೆಗೆ ಆದೇಶ
ನಿರ್ಮಾಣ ಮಾಡಲಾಗಿರುವ ಪ್ಯಾರಾಗೋಲಾ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Jan 21, 2026 | 5:34 PM

Share

ಉತ್ತರ ಕನ್ನಡ, ಜನವರಿ 21: ಮೋಜು ಮಸ್ತಿ, ಪಾರ್ಟಿ ಮಾಡಲು ಅರಣ್ಯ ಅಧಿಕಾರಿಗಳೇ ಮರಗಳ ಮಾರಣ ಹೋಮ ಮಾಡಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ಯಾರಾಗೋಲಾ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಅರಣ್ಯ ವಲಯ ಪ್ರದೇಶದಲ್ಲಿ ಪ್ಯಾರಾಗೋಲಾ ನಿರ್ಮಿಸಲಾಗುತ್ತಿದ್ದು, ಅರಣ್ಯ ಸಂಪತ್ತನ್ನು ಉಳಿಸ ಬೇಕಿದ್ದ ಅಧಿಕಾರಿಗಳೇ ಕಾಡು ನಾಶ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ದಟ್ಟ ಅರಣ್ಯ ಮಧ್ಯ ಎರಡರಿಂದ ಮೂರು ಮರಗಳ ಕಟಾವು ಶಂಕೆ ವ್ಯಕ್ತವಾಗಿದ್ದು, ಅಕ್ಕ ಪಕ್ಕದ ಬೃಹತ್ ಗಾತ್ರದ ಮರಗಳ ಕೊಂಬೆಗು ಕೊಡಲಿ ಪೆಟ್ಟು ನೀಡಿದ್ದಾರೆ ಎನ್ನಲಾಗಿದೆ.

ಹುಲಿ ಸಂರಕ್ಷಿತ ಪ್ರದೇಶಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಬರುತ್ತವೆ. ಈ ಕಾಯ್ದೆಯ ಪ್ರಕಾರ ಒಂದೇ ಒಂದು ಮರ ಕಡಿಯುವುದಕ್ಕೂ, ಯಾವುದೇ ಅರಣ್ಯ ಸಂಪನ್ಮೂಲ ಬಳಸುವುದಕ್ಕೂ ನಿಷೇಧವಿದೆ. ಇಂತಹ ಅಕ್ರಮಗಳನ್ನು ತಡೆಯುವ ಸಲುವಾಗಿ ಅರಣ್ಯ ಇಲಾಖೆಯೇ ಸಂರಕ್ಷಿತ ಪ್ರದೇಶಗಳೊಳಗೆ ತಂತ್ರಾತ್ಮಕ ಸ್ಥಳಗಳಲ್ಲಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಥಾಪಿಸಿ, ದಿನದ 24 ಗಂಟೆ ಗಸ್ತು ವ್ಯವಸ್ಥೆ ನಡೆಸುತ್ತಿದೆ. ಹೀಗಿರುವಾಗ ಗುಂದ ಅರಣ್ಯ ವಲಯದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕೇಂದ್ರ ವಲಯದಲ್ಲಿರುವ ಚಪೇರಾ ಕಳ್ಳಬೇಟೆ ತಡೆ ಶಿಬಿರದ ಬಳಿ ಈ ಪ್ಯಾರಾಗೋಲಾ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಕಿತ್ತಳೆ ಮಾರ್ಗಕ್ಕಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಮುಂದಾದ BMRCL; ಸಿಡಿದೆದ್ದ ಪರಿಸರ ಪ್ರೇಮಿಗಳು

ಸಂಪೂರ್ಣವಾಗಿ ಟೀಕ್ ಮರ ಬಳಸಿ ಪ್ಯಾರಾಗೋಲಾ ನಿರ್ಮಿಸಲಾಗಿದ್ದು, ಹುಲಿ ಸಂರಕ್ಷಿತ ಪ್ರದೇಶದೊಳಗೆ ಪರ್ಗೊಲಾ ಏಕೆ ಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಇಲ್ಲಿ ಮನರಂಜನೆಗೆ ಯಾವುದೇ ಅವಕಾಶವಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬರು ಒಂದಿಷ್ಟು ಕಟ್ಟಿಗೆ ಕೊಂಡೊಯ್ದರೂ ಕಿರುಕುಳ ನೀಡುವ ಅರಣ್ಯ ಅಧಿಕಾರಿಗಳು, ಮರಗಳನ್ನು ಕಡಿದು ಪ್ಯಾರಾಗೋಲಾ ನಿರ್ಮಿಸಿದ್ದಾದರು ಏಕೆ? ಎಂಬ ಮಾತುಗಳು ಪರಿಸರ ಪ್ರೇಮಿಗಳಿಂದ ಕೇಳಿಬಂದಿವೆ. ಈ ಕುರಿತು ಪ್ರತಿಕ್ರಿಯಿಸಿದ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಶಾಂತ್ ಕುಮಾರ್, ಈ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿಕೊಟ್ಟು ವರದಿ ನೀಡುವಂತೆ ಡಿಸಿಎಫ್​​ಗೆ ಸಿಸಿಎಫ್ ಸೂಚನೆ ಕೂಡ ನೀಡಿರುವ ಹಿನ್ನೆಲೆ ಪ್ರಕರಣ ಮಹತ್ವ ಪಡೆದುಕೊಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.