ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ಚಿತ್ರೀಕರಣ: ಯೂಟ್ಯೂಬರ್ಗೆ ಶಾಕ್ ಕೊಟ್ಟ ಇಲಾಖೆ
ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಯೂಟ್ಯೂಬರ್ ಅಕ್ರಮ ಪ್ರವೇಶ ಮಾಡಿ, ಡ್ರೋನ್ ಬಳಸಿ ಚಿತ್ರೀಕರಣ ಮಾಡಿದ ಕಾರಣ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆರ್‌ಎಫ್‌ಒ , ಆರೋಪಿತ ವ್ಯಕ್ತಿ ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾನೆ . ಡ್ರೋನ್ ಹಾಗೂ ವಿಡಿಯೋ ಕ್ಯಾಮೆರಾವನ್ನು ತರಿಸಿ ಸಂಪೂರ್ಣ ಪರಿಶೀಲನೆ ನಡೆಸಿ ದೃಶ್ಯಗಳನ್ನು ಡಿಲೀಟ್ ಮಾಡುವಂತೆ ಇಲಾಖೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

ಉತ್ತರ ಕನ್ನಡ, ಜನವರಿ 16: ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅನುಮತಿ ಇಲ್ಲದೆ ತಂಗಿದ ಹಾಗೂ ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಯೂಟ್ಯೂಬರ್ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಇಲಾಖೆ ನೋಟಿಸ್ ನೀಡಿದರೂ, ಆತ ಸಂಪರ್ಕಕ್ಕೆ ಸಿಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ @sg_malenadu ಎಂಬ ಹೆಸರಿನಿಂದ ಪರಿಚಿತನಾಗಿರುವ ಯೂಟ್ಯೂಬರ್, ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಂಗಿದ್ದು ಮಾತ್ರವಲ್ಲದೆ ಡ್ರೋನ್ ಹಾಗೂ ವಿಡಿಯೋ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾನೆ ಎಂದು ಹೇಳಲಾಗಿದೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಒಳಗಿನ ಕುಮ್ಬಾರವಾಡದ ಪಥೆಗುಡಿ ಪ್ರದೇಶವು ಹುಲಿಗಳ ನಿರಂತರ ಸಂಚಾರವಿರುವ ಕೋರ್ ಟೈಗರ್ ರಿಸರ್ವ್ ಆಗಿದ್ದು, ನಿಯಮಾನುಸಾರ ಇದು ಪ್ರವಾಸೋದ್ಯಮಕ್ಕೆ ಸಂಪೂರ್ಣ ನಿಷೇಧಿತ ಪ್ರದೇಶವಾಗಿದೆ. ಆದರೆ ಕಳೆದ ನವೆಂಬರ್‌ನಲ್ಲಿ ಗಂಭೀರ ನಿಯಮ ಉಲ್ಲಂಘನೆ ನಡೆದಿದೆ. 2025ರ ನವೆಂಬರ್ 5ರಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಯೂಟ್ಯೂಬರ್, ಬೈಕ್ ಅನ್ನು ಆ ಪ್ರದೇಶದಲ್ಲಿ ಓಡಿಸಿದ್ದಾನೆ. ಚಿತ್ರೀಕರಣ ಮಾಡಿದ ವಿಡಿಯೋವನ್ನು 2025ರ ನವೆಂಬರ್ 21ರಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ.
ಇದನ್ನೂ ಓದಿ: ಕಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದ ಪೊಲೀಸರಿಗೆ ಕಾದಿತ್ತು ಶಾಕ್! ಕಳ್ಳತನ ಮಾಡಿದ್ದು ಅವನಲ್ಲ ಅವಳು!
ಅಪ್ಲೋಡ್ ಆದ ವಿಡಿಯೋವನ್ನು ಇಲಾಖೆ ಪರಿಶೀಲಿಸಿದ್ದು, ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ವಿವರಣೆ ಕೇಳಿ ನೋಟಿಸ್ ನೀಡಿದೆ. ಕುಮ್ಬಾರವಾಡ ರೇಂಜ್ ಫಾರೆಸ್ಟ್ ಕಚೇರಿಗೆ ಹಾಜರಾಗಿ ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದರೂ, ಆತ ಪ್ರತಿಕ್ರಿಯಿಸದ ಕಾರಣ ಡಿಸೆಂಬರ್ 2ರಂದು ಯೂಟ್ಯೂಬರ್ ವಿರುದ್ಧ ದೂರು ದಾಖಲು ಮಾಡಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕುಮ್ಬಾರವಾಡ ರೇಂಜ್ ಫಾರೆಸ್ಟ್ ಅಧಿಕಾರಿ (ಆರ್‌ಎಫ್‌ಒ) ಗಿರೀಶ್ ಚೌಗಲೆ , ಆರೋಪಿತ ವ್ಯಕ್ತಿ ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾನೆ . ಡ್ರೋನ್ ಹಾಗೂ ವಿಡಿಯೋ ಕ್ಯಾಮೆರಾವನ್ನು ತರಿಸಿ ಸಂಪೂರ್ಣ ಪರಿಶೀಲನೆ ನಡೆಸಿ ದೃಶ್ಯಗಳನ್ನು ಡಿಲೀಟ್ ಮಾಡುವಂತೆ ಇಲಾಖೆ ಸೂಚಿಸಿದೆ ಎಂದು ಅವರು ಹೇಳಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
