ರಾತ್ರಿ ವೇಳೆ ನಡುರಸ್ತೆಯಲ್ಲೇ ಝಳಪಿಸಿದ ಲಾಂಗ್: ಖಾರದ ಪುಡಿ ಎರಚಿ ರೌಡಿ ಶೀಟರ್ನ ಭೀಕರ ಹತ್ಯೆ
ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿ 15 ಕೇಸ್‌ಗಳ ರೌಡಿ ಶೀಟರ್ ಓರ್ವನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ 6 ಮಂದಿ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಬಂಡೇಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಆತನ ಐವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು, ಜನವರಿ 14: 1 ನಟೋರಿಯಸ್ ರೌಡಿ ಶೀಟರ್ನ ಹಳೇ ದ್ವೇಷದ ಹಿನ್ನೆಲೆ ವೈರಿಗಳು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಂಡೆಪಾಳ್ಯ ಠಾಣಾ ವ್ಯಾಪ್ತಿಯ ಮಂಗಮ್ಮನಪಾಳ್ಯದಲ್ಲಿ ನಡೆದಿದೆ. 6 ಜನ ದುಷ್ಕರ್ಮಿಗಳ ತಂಡ ನಡೆಸಿದ ಅಟ್ಟಹಾಸಕ್ಕೆ 28 ವರ್ಷದ ಮೊಹಮ್ಮದ್ ಶಬ್ಬೀರ್ ಎಂಬಾತ ನಡು ರಸ್ತೆಯಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ. ಆರೋಪಿಗಳು ಹೊಂಚು ಹಾಕಿ ದಾಳಿ ನಡೆಸಿರುವ ವಿಚಾರ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.
ಕೋರಮಂಗಲ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಮಂಗಮ್ಮನಪಾಳ್ಯ ನಿವಾಸಿ ಮೊಹಮ್ಮದ್ ಶಬ್ಬೀರ್ ಮತ್ತು ಐವರು ಸೋಮವಾರ ರಾತ್ರಿ ತಮ್ಮ ಸ್ನೇಹಿತನ್ನ ಮಾತಾಡಿಸಿ ಆಟೋದಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಮಂಗಮ್ಮನಪಾಳ್ಯ ಮುಖ್ಯ ರಸ್ತೆಯ ತಿರುವಿನಲ್ಲಿ ಎದುರಾದ ಆರು ಮಂದಿ ದುಷ್ಕರ್ಮಿಗಳು ಏಕಾಏಕಿ ಆಟೋದಲ್ಲಿದ್ದವರ ಮೇಲೆ ಖಾರದ ಪುಡಿ ಎರಚಿ ಮಚ್ಚು, ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಟಾರ್ಗೆಟ್ ಆಗಿದ್ದ ಮೊಹಮ್ಮದ್ ಶಬ್ಬೀರ್ ಮೇಲೆಯೆ ತೀವ್ರ ದಾಳಿ ನಡೆಸಿದ್ದರಿಂದ ಆತ ಸ್ಥಳದಲ್ಲೇ ಉಸಿರು ಚೆಲ್ಲಿದ್ದರೆ, ಉಳಿದ ಐವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನೂ ಓದಿ: ಲಕ್ಷ ಲಕ್ಷ ಹಣ, ಒಡವೆ ಗಿಫ್ಟ್ ಕೊಟ್ರೂ ಮತ್ತೊಬ್ಬನ ಜತೆ ಚಕ್ಕಂದ; ಹಂತಕನ ಡೆತ್ ನೋಟ್ನಲ್ಲಿ ಮಹಿಳೆ ಕೊಲೆ ರಹಸ್ಯ ಬಯಲು
ಜನ ಓಡಾಡೋ ಜಾಗದಲ್ಲಿ ಈ ಕೃತ್ಯ ನಡೆದಿರುವ ಕಾರಣ ಪರಿಚಯಸ್ಥರೇ ಅರೋಪಿಗಳು ಎನ್ನುವುದು ಪೊಲೀಸರಿಗೆ ಗೊತ್ತಾಗಿದ್ದು, ದಾಳಿ ವೇಳೆ ಗಾಯಗೊಂಡ ವ್ಯಕ್ತಿ ನೀಡಿದ ದೂರಿನ ಮೇಲೆ 6 ಜನರ ವಿರುದ್ಧ ಬಂಡೇಪಾಳ್ಯ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಪ್ರಕರಣ ಸಂಬಂಧ ಸದ್ಯ ಇಬ್ಬರನ್ನ ವಶಕ್ಕೆ ಪಡೆದಿರುವ ಖಾಕಿ ವಿಚಾರಣೆ ನಡೆಸ್ತಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಿದೆ. ಇನ್ನು ಕೊಲೆಯಾದ ಶಬ್ಬೀರ್ ಕೂಡ ಸಾಮಾನ್ಯ ರೌಡಿಯಲ್ಲ. ಈತನ ವಿರುದ್ಧ ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊಲೆ ಯತ್ನ, ರಾಬರಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಿವೆ ಎನ್ನಲಾಗಿದೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
