ಬೆಂಗಳೂರು, ಮೇ 27: ಜನ ಸಾಮಾನ್ಯರು ಓಡಾಡುವ ರಸ್ತೆಗಳಲ್ಲಿ ಸವಾರರಿಗೆ ನರಕಯಾತನೆ ತಪ್ಪಿದ್ದಲ್ಲ. ಆದರೆ ಸಿಎಂ, ಸಚಿವರು, ಶಾಸಕರು ನಿತ್ಯ ಓಡಾಡುವ ರಸ್ತೆಗಳು ಅದೆಷ್ಟು ಅಧ್ವಾನ ಆಗಿವೆ ಅನ್ನೋದನ್ನ ಇತ್ತೀಚೆಗೆ ಟಿವಿ9 ರಿಯಾಲಿಟಿ ಚೆಕ್ ಮೂಲಕ ನಿಮ್ಮ ಮುಂದಿಟ್ಟಿತ್ತು. ನಗರದಲ್ಲಿ ರಸ್ತೆಗುಂಡಿಗಳ (potholes) ಬಗ್ಗೆ ಟಿವಿ9 ನಿರಂತರ ವರದಿ ಬೆನ್ನೆಲ್ಲೇ ಬಿಬಿಎಂಪಿ (BBMP) ಮುಖ್ಯ ಆಯುಕ್ತರು ಎಚ್ಚೆತ್ತುಕೊಂಡಿದ್ದು, ಮೇ 31ರೊಳಗೆ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಡೆಡ್‌ಲೈನ್ ನೀಡಲಾಗಿದೆ.
5500 ಗುಂಡಿಗಳಿವೆ ಅದರಲ್ಲಿ 1200 ಗುಂಡಿಗಳು ಮುಚ್ಚಿದ್ದಾರೆ. 4500 ಗುಂಡಿಗಳು ಮುಚ್ಚಬೇಕಿದೆ. ಹೀಗಾಗಿ ಬಿಬಿಎಂಪಿ 6 ವಲಯಗಳಲ್ಲಿ ಮೇ 31ರೊಳಗೆ ರಸ್ತೆಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ದಾಸರಹಳ್ಳಿ, ರಾಜರಾಜೇಶ್ವರಿ ವಲಯಗಳಲ್ಲಿ ಜೂ.4ರೊಳಗೆ ಮುಚ್ಚಲು ಸೂಚಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಮಳೆಯಿಂದಾಗಿ ಮತ್ತೆ ಬಾಯ್ದೆರೆದ ರಸ್ತೆಗುಂಡಿಗಳು, 15 ದಿನದ ಮಳೆಗೆ 5,500 ರಸ್ತೆಗುಂಡಿ ಸೃಷ್ಟಿ
ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಸ್ತೆಗುಂಡಿಗಳನ್ನ ಮುಚ್ಚಲು ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಪಾಲಿಕೆಯ ವಲಯಗಳಲ್ಲಿ ವಲಯವಾರು ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಆಯಾ ವಲಯಗಳ ವಲಯ ಆಯುಕ್ತರ ಮೇಲ್ವಿಚಾರಣೆ ಮಾಡುತ್ತಾರೆ.
ಸಾವಿರಾರು ಬಸ್ಗಳು, ವಾಹನಗಳು ಸಂಚರಿಸುವ ನಗರದ ಹೃದಯ ಭಾಗ ಮೆಜೆಸ್ಟಿಕ್ ಬಸ್ ನಿಲ್ದಾಣದ ಮಾರ್ಗದಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದಿವೆ. ಕಾರ್, ಬೈಕ್ ಸವಾರರು ಇರಲಿ, ಬಿಎಂಟಿಸಿ ಚಾಲಕರು ಸಹಾ ಇಲ್ಲಿ ಬಸ್ ಚಲಾಯಿಸಲು ಹೆಣಗಾಡುವಂತಾಗಿದೆ.
ಇದನ್ನೂ ಓದಿ: ಕೆಡೆರ್ ಬೇಸ್ ಪಾರ್ಟಿ ಮಾಡಲು ನಿರ್ಧಾರ, ಇದು ಕಾಂಗ್ರೆಸ್ ಕುಟುಂಬ: ಡಿಕೆ ಶಿವಕುಮಾರ್ ಘರ್ಜನೆ
ಮಳೆಗಾಲಕ್ಕೂ ಮುನ್ನವೇ ನಗರದಲ್ಲಿ 5800ಕ್ಕೂ ಹೆಚ್ಚು ರಸ್ತೆಗುಂಡಿಗಳು ಬಿದ್ದಿವೆ. ಸವಾರರನ್ನು ಕಾಡುತ್ತಿರುವ ಈ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡುವ ಮೂಲಕ, ಸವಾರರಿಗೆ ಅಧಿಕಾರಿಗಳು ನೆಮ್ಮದಿ ನೀಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.