ವಿಜಯಪುರ, ಮಾರ್ಚ್ 09: ಮುಂಬರುವ ದಿನಗಳಲ್ಲಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ಮುಖ್ಯಮಂತ್ರಿ ಆಗುತ್ತಾರೆ ಎಂದು ಜಮಖಂಡಿ ಆಲಗೂರಿನ ವೀರಶೈವ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. ಗುರುಪಾದೇಶ್ವರ ಮಠದ ಆಶೀರ್ವಾದ ಅವಶ್ಯವಾಗಿ ಇದೆ. ವಿಜಯಪುರ ಬರಗಾಲ ಬೀಡು ಅನ್ನಿಸಿಕೊಂಡಿತ್ತು. ಅದನ್ನ ಅಳಿಸಿ ಹಾಕಲು ನೀರಾವರಿ ಸಚಿವರಾಗಿ ತಮ್ಮ ಕರ್ತವ್ಯ ನಿರ್ವಹಿಸಿ ಅಭಿವೃದ್ಧಿ ಮಾಡಿದ್ದಾರೆ. ರೈತರ ಜೀವನವನ್ನು ಬಂಗಾರ ಮಾಡಿದ್ದಾರೆ ಎಂದು ಹಾಡಿಹೊಗಳಿದ್ದಾರೆ. ಎಂ.ಬಿ ಪಾಟೀಲ್ರಿಗೆ ಸಿದ್ದೇಶ್ವರ ಸ್ವಾಮೀಜಿ, ನಮ್ಮ ಮತ್ತು ಜನರ, ಮಹಿಳೆಯರ ಆಶೀರ್ವಾದ ಇದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಮೊದಲ ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್ ಮುಖಂಡ ರಾಜೂ ಆಲಗೂರಗೆ ಮೊದಲ ಟಿಕೆಟ್ ಘೋಷಣೆಯಾಗಿದೆ. ಶಿವರಾತ್ರಿಯ ಶುಭ ದಿನದಂದು ಘೋಷಣೆಯಾಗಿದೆ. ನಾವೆಲ್ಲ ಸೇರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ನೀರಿನ ಸಮಸ್ಯೆಯಿಂದ ಕಂಪನಿಗಳು ಬೆಂಗಳೂರು ಬರಲು ಹಿಂದೇಟು: ಆರ್ ಅಶೋಕ ಹೇಳಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು
ಜಿಲ್ಲೆಯ ಸಚಿವರು ಶಾಸಕರ ಒಟ್ಟಾಭಿಪ್ರಾಯದಂತೆ ರಾಜೂ ಆಲಗೂರ ಅಭ್ಯರ್ಥಿಯಾಗಿದ್ದಾರೆ. ದಲಿತ ಸಮಾಜದ ಬಲಗೈ ಬಲಕ್ಕೆ ಟಿಕೆಟ್ ನೀಡಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಅಂಬೇಡ್ಕರ್ ವಾದಿಗಳ ಬೇಡಿಕೆಯಾಗಿತ್ತು. ಹಾಗಾಗಿ ಎಲ್ಲರ ಆಶಯದಂತೆ ಟಿಕೆಟ್ ನೀಡಲಾಗಿದೆ. ನಿಶ್ಚಿತವಾಗಿ ಗೆಲುವು ನಮ್ಮದೇ ಎಂದರು.
ಇದನ್ನೂ ಓದಿ: ರಾಮಮಂದಿರಕ್ಕೆ ಬಾಂಬ್ ಬೆದರಿಕೆ ವಿಚಾರ: ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆಗೆ ಸೂಚಿಸುವೆ: ಸಚಿವ ರಾಮಲಿಂಗಾರೆಡ್ಡಿ
ರಾಜೂ ಆಲಗೂರ ಸಂಸದರಾಗುವುದರಲ್ಲಿ ಸಂಶಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾನು ವಿಜಯಪುರ ಜಿಲ್ಲೆಯ ಸಂಸದನಾಗಿದ್ದೇ ಕೊನೆಯಾಗಿತ್ತು. ಈಗ ರಾಜೂ ಆಲಗೂರ ಗೆಲ್ಲುವ ಮೂಲಕ ಗೆಲುವಿನ ಅಭಿಯಾನ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಸಚಿವ ಮಹಾದೇವಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ತಪ್ಪೇನಿಲ್ಲ. ದಲಿತರು ಸಿಎಂ ಆಗಬೇಕು. ಈಗ ಸಿಎಂ ಕುರ್ಚಿ ಖಾಲಿಯಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಸೂಕ್ತ ಸಂದರ್ಭ ಬಂದಾಗ ದಲಿತರು ಸಿಎಂ ಆಗುವುದರಲ್ಲಿ ತಪ್ಪೇನಿದೆ. ದಲಿತ ಸಿಎಂ ಆಗಲು ನಿಶ್ವಿತವಾಗಿ ನನ್ನ ಬೆಂಬಲವಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.