ಬೆಂಗಳೂರು, ಸೆಪ್ಟೆಂಬರ್ 6: ಮಧ್ಯವರ್ತಿಯೊಬ್ಬರ ನೆರವಿನಿಂದ ಉದ್ಯೋಗ ಅರಸಿ ಕುವೈತ್‌ಗೆ (Kuwait) ತೆರಳಿ ವಂಚನೆಗೆ ಒಳಗಾಗಿದ್ದ ಕರ್ನಾಟಕದ ಇಬ್ಬರು ಯುವಕರನ್ನು ವಿದೇಶಾಂಗ ಸಚಿವಾಲಯ (MEA) ರಕ್ಷಿಸಿದೆ. ಬಬಲೇಶ್ವರ ತಾಲೂಕಿನ ವಿಜಯಪುರದ (Vijayapura) ಸಂಗಾಪುರ ಗ್ರಾಮದ ಯುವಕರಾದ ಸಚಿನ್ ಜಂಗಮಶೆಟ್ಟಿ (21) ಮತ್ತು ವಿಶಾಲ್ ಸೆಲಾರ್ (22) ವಂಚನೆಗೆ ಒಳಗಾದ ಯುವಕರು. ಮುಂಬೈ ಮೂಲದ ಏಜೆಂಟ್ ಒಬ್ಬರು ಹೆಚ್ಚಿನ ಸಂಬಳದ ಕೆಲಸ ಒದಗಿಸುವ ಭರವಸೆ ನೀಡಿ ಒಂದು ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಯುವಕರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಕುವೈತ್‌ನಲ್ಲಿ ತರಕಾರಿ ಪ್ಯಾಕಿಂಗ್ ಉದ್ಯಮದಲ್ಲಿ ತಿಂಗಳಿಗೆ 32,000 ರೂಪಾಯಿ ವೇತನದ ಉದ್ಯೋಗ ನೀಡುವ ಭರವಸೆಯನ್ನು ಆರು ತಿಂಗಳ ಹಿಂದೆ ಏಜೆಂಟ್ ನೀಡಿದ್ದರು. ಅದಕ್ಕಾಗಿ ಪಾಸ್‌ಪೋರ್ಟ್, ವೀಸಾ, ವಿಮಾನ ಟಿಕೆಟ್ ಮೊತ್ತ ಮತ್ತು ಕಮಿಷನ್ ಎಂದು ಒಂದು ಲಕ್ಷ ರೂ. ಪಡೆದಿದ್ದರು ಎಂದು ಯುಕವರು ದೂರಿದ್ದಾರೆ.
ಕುವೈತ್‌ಗೆ ತೆರಳಿದ ಬಳಿಕ ತರಕಾರಿ ಪ್ಯಾಕಿಂಗ್ ಕೆಲಸದ ಬದಲು ಒಂಟೆ ಸಾಕಣೆ ಕೆಲಸಕ್ಕೆ ಒತ್ತಾಯಿಸಲಾಯಿತು. ಅಷ್ಟೇ ಅಲ್ಲದೆ ನಮಗೆ ಸಂಬಳವನ್ನು ನೀಡಲಾಗಿಲ್ಲ. ಅವಮಾನ, ದೈಹಿಕ ಹಲ್ಲೆ, ಹಸಿವಿನಿಂದ ಇರುವಂತೆ ಮಾಡಿದ್ದರ ಜತೆಗೆ ಚಿತ್ರಹಿಂಸೆ ನೀಡಲಾಯಿತು ಎಂದು ಅವರು ಆರೋಪಿಸಿದ್ದಾರೆ. ದೌರ್ಜನ್ಯದ ವಿರುದ್ಧ ದೂರು ನೀಡಲು ಪ್ರಯತ್ನಿಸಿದಾಗ ನಮ್ಮ ಮೇಲೆ ಮತ್ತಷ್ಟು ಹಲ್ಲೆ ನಡೆಸಲಾಯಿತು. ನಮ್ಮ ಮನೆಗಳಿಗೆ ಕರೆ ಮಾಡಲು ಸಹ ನಮಗೆ ಅವಕಾಶವಿರಲಿಲ್ಲ ಎಂದು ಯುವಕರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಟ್ಟುತ್ತಲೆ ನಾನು ಕಾಂಗ್ರೆಸ್ ವಿರೋಧಿ: ಈಗ ಪಕ್ಷ ಚೇಂಜ್ ಮಾಡಿ ಮಾಡೋದೇನಿದೆ: ಸಂಸದ ರಮೇಶ ಜಿಗಜಿಣಗಿ
ಈ ವಿಚಾರ ಗಮನಕ್ಕೆ ಬಂದ ನಂತರ ಯುವಕರ ಕುಟುಂಬಸ್ಥರು ಬಿಜೆಪಿ ಮುಖಂಡ ಉಮೇಶ ಕೋಳಕೋರ ಅವರಿಗೆ ಮನವಿ ಸಲ್ಲಿಸಿದ್ದು, ಸಂಸದ ರಮೇಶ ಜಿಗಜಿಣಗಿ ನೆರವಿನೊಂದಿಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ನಾಲ್ಕು ದಿನಗಳ ಹಿಂದೆ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಮಾಡಲಾಗಿದೆ. ಮುಂಬೈ ಮೂಲದ ಏಜೆನ್ಸಿ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಯುವಕರು ಹೇಳಿದ್ದಾರೆ. ಬೇರೆ ದೇಶಗಳಲ್ಲಿನ ಇಂತಹ ಆಫರ್‌ಗಳಿಗೆ ಬಲಿಯಾಗಬೇಡಿ ಎಂದು ಅವರು ರಾಜ್ಯದ ಯುವಕರಿಗೆ ಕಿವಿಮಾತು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ