ಮೈಸೂರು: ಜಿಲ್ಲೆಯ ಮೇಟಗಳ್ಳಿಯಲ್ಲಿರುವ ಕೊವಿಡ್ ಆಸ್ಪತ್ರೆಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದ್ದು, ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಿದ ನಂತರದಲ್ಲಿ ವೈದ್ಯಕೀಯ ಪರೀಕ್ಷೆ ಮುಂದೂಡಿಕೆ ಕುರಿತು ಮಾತನಾಡಿದ ಅವರು ಇಂದು ನಡೆಯಬೇಕಿದ್ದ ಸ್ನಾತಕೋತ್ತರ, ಪದವಿ ಸೇರಿ ಎಲ್ಲಾ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನ ಕೊವಿಡ್ ಕೆಲಸಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರೆಮ್‌ಡೆಸಿವಿರ್ ಲೈಫ್ ಸೇವಿಂಗ್ ಡ್ರಗ್ ಅಲ್ಲ
ವೈಜ್ಞಾನಿಕವಾಗಿ ರೆಮ್‌ಡೆಸಿವಿರ್ ಲೈಫ್ ಸೇವಿಂಗ್ ಡ್ರಗ್ ಅಲ್ಲ. ಜನ ಸಾಮಾನ್ಯರಲ್ಲಿ ಈ ರೀತಿಯ ಅಭಿಪ್ರಾಯ ಮೂಡಿದೆ ಅಷ್ಟೇ. ವಿಶ್ಚ ಆರೋಗ್ಯ ಸಂಸ್ಥೆಯ ಪಟ್ಟಿಯಲ್ಲೂ ರೆಮಿಡೆಸಿಯರ್ ಇಲ್ಲ. ಆದರೆ ರೆಮ್‌ಡೆಸಿವಿರ್ ಕೊರೊನಾ ಸಂಜೀವಿನಿ ಎಂದು ಬಿಂಬಿತವಾಗಿದೆ. ಅದಕ್ಕಿಂತ ಕಡಿಮೆ ದರದ ಪರ್ಯಾಯ ಔಷಧಗಳಿವೆ. ನಾನು ವೈದ್ಯನಾಗಿ ಹೇಳಬೇಕೆಂದರೆ ಅದರ ಬದಲು ಸ್ಟಿರಾಯ್ಡ್ ಪರಿಣಾಮಕಾರಿಯಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಕೊರೊನಾ ಕಡಿಮೆಯಾದ ಹಿನ್ನೆಲೆ ರೆಮ್ಡೆಸಿವರ್ ಉತ್ಪಾದನೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಕೊರೊನಾ ಜಾಸ್ತಿಯಾಗಿದೆ ಬೇಡಿಕೆ ಹೆಚ್ಚಾಗಿದೆ. ಸ್ವಲ್ಪ ದಿನದಲ್ಲಿ ರೆಮ್ಡೆಸಿವರ್ ಪೂರೈಕೆ ಸರಿಯಾಗುತ್ತದೆ. ದೇಶದಲ್ಲಿ 8 ರಿಂದ 9 ಕಂಪನಿಗಳು ಮಾತ್ರ ರೆಮ್ಡೆಸಿವರ್ ಉತ್ಪಾದನೆ ಮಾಡುತ್ತಿವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಮೈಸೂರು ವೈದ್ಯಕೀಯ ಸಂಶೋಧನಾಲಯದ ಡೀನ್ ಅನ್ನು ತರಾಟೆಗೆ ತೆಗೆದುಕೊಂಡ ಸುಧಾಕರ್
ಜಿಲ್ಲೆಯ ಮೇಟಗಳ್ಳಿಯಲ್ಲಿರುವ ಕೊವಿಡ್ ಆಸ್ಪತ್ರೆಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡಾ.ಕೆ.ಸುಧಾಕರ್‌ಗೆ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ನಾಗೇಂದ್ರ, ಡಿಸಿ ರೋಹಿಣಿ ಸಿಂಧೂರಿ ಸಾಥ್ ನೀಡಿದ್ದು, ಆಸ್ಪತ್ರೆಯಲ್ಲಿರುವ ಸಮಸ್ಯೆ ಬಗ್ಗೆ ಸಚಿವರಿಗೆ ಆಸ್ಪತ್ರೆ ಉಸ್ತುವಾರಿ ಡಾ.ರಾಜೇಶ್ವರಿ ದೂರು ನೀಡಿದ್ದಾರೆ. ಮೈಸೂರು ವೈದ್ಯಕೀಯ ಸಂಶೋಧನಾಲಯದ ಡೀನ್ ನಂಜರಾಜ ಅರಸ್ ಜೊತೆ ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಿಮ್ಮ ಭಿನ್ನಾಭಿಪ್ರಾಯಗಳನ್ನು ಕೆಲಸದಲ್ಲಿ ತೋರಿಸಬೇಡಿ. ಅದನ್ನು ನಾನು ಸಹಿಸಲು ಸಾಧ್ಯವಿಲ್ಲ. ಜಿಲ್ಲಾ ಕೊವಿಡ್ ಆಸ್ಪತ್ರೆ ಜತೆ ಹೊಂದಾಣಿಕೆ ಇರಬೇಕು, ಇಲ್ಲದಿದ್ದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು. ಇನ್ನು ಮುಂದೆ ಈ ರೀತಿ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ:
ಕೊರೊನಾ ತಡೆಗಟ್ಟಲು ಹೊಸ ನಿಯಮ ಜಾರಿ; ಹೋಟೆಲ್ ಮಾಲೀಕರಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
(Medical exam 2021 postponed and sudhakar says final year medical students will be taken to covid warrior work)
Published On - 2:14 pm, Thu, 22 April 21