ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್​​ನಲ್ಲಿ ಗೆಲುವು, ತಮಿಳುನಾಡಿನ ಅರ್ಜಿ ವಜಾ

ಕರ್ನಾಟಕ ಸರ್ಕಾರಕ್ಕೆ ಮೇಕೆದಾಟು ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಯೋಜನೆಗೆ 7 ವರ್ಷಗಳಿಂದ ಅಡ್ಡಗಾಲು ಹಾಕುತ್ತಾ ಬರುತ್ತಿದ್ದ ತಮಿಳುನಾಡಿಗೆ ಮುಖಭಂಗವಾಗಿದೆ. ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ, ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಮೊದಲ ಜಯ ಸಿಕ್ಕಂತಾಗಿದೆ.

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್​​ನಲ್ಲಿ ಗೆಲುವು, ತಮಿಳುನಾಡಿನ ಅರ್ಜಿ ವಜಾ
ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್​​ನಲ್ಲಿ ಗೆಲುವು (ಸಾಂದರ್ಭಿಕ ಚಿತ್ರ)
Updated By: Ganapathi Sharma

Updated on: Nov 13, 2025 | 1:52 PM

ನವದೆಹಲಿ, ನವೆಂಬರ್ 13: ಮೇಕೆದಾಟು ಯೋಜನೆಗೆ (Mekedatu Project) ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕದ (Karnataka) ಪರವಾಗಿ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದಿದೆ. ಯೋಜನೆ ವಿರೋಧಿಸಿ ನೆರೆಯ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಗುರುವಾರ ವಜಾಗೊಳಿಸಿದೆ. ಇದರೊಂದಿಗೆ, ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ದೊಡ್ಡ ಗೆಲುವು ಲಭಿಸಿದಂತಾಗಿದೆ. ಕಳೆದ ಏಳು ವರ್ಷಗಳಿಂದ ತಮಿಳುನಾಡು ಈ ಯೋಜನೆಗೆ ಅಡ್ಡಗಾಲು ಹಾಕುತ್ತಾ ಬಂದಿತ್ತಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಆ ಅರ್ಜಿಯನ್ನು ವಜಾಗೊಳಿಸಿದ ಹಿನ್ನಲೆಯಲ್ಲಿ ಯೋಜನೆಗೆ ಮುಂದುವರೆಯಲು ಕರ್ನಾಟಕಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

ಮೇಕೆದಾಟು ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರಿದ್ದ ಪೀಠ, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮೇಕೆದಾಟು ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ. ಹೀಗಾಗಿ ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದೆ.

ಈ ಹಂತದಲ್ಲಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಂಗೀಕರಿಸಿದ ಆದೇಶದ ಪ್ರಕಾರ ಮಾಡಲಾಗುತ್ತಿರುವುದು ಕೇವಲ ವಿಸ್ತೃತ ಯೋಜನಾ ವರದಿ ತಯಾರಿಕೆ ಅಷ್ಟೇ ಆಗಿದೆ. ಅದೂ ತಮಿಳುನಾಡಿನ ಆಕ್ಷೇಪಣೆಗಳನ್ನು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ತಜ್ಞರನ್ನು ಪರಿಗಣಿಸಿದ ನಂತರ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಡಿಪಿಆರ್ ಪರಿಗಣಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳ ಪೂರ್ವಾನುಮೋದನೆಯು ಪೂರ್ವಾಪೇಕ್ಷಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಆ ವಿಷಯದ ದೃಷ್ಟಿಯಿಂದ, ಪ್ರಸ್ತುತ ತಮಿಳುನಾಡಿನ ಅರ್ಜಿಯು ಅಪ್ರಸ್ತುತವಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡಿ; ಮೋದಿ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿ, ಸುಪ್ರೀಂ ಕೋರ್ಟ್​​​ನಲ್ಲಿ ಮೇಕೆದಾಟು ಯೋಜನೆ ಕುರಿತ ತಮಿಳುನಾಡಿನ ಅರ್ಜಿ ವಜಾ ಆಗಿರುವ ವರದಿ ಬಂದಿದೆ. ಸಂಪೂರ್ಣ ಮಾಹಿತಿ ಬಂದ ಮೇಲೆ ಮಾತನಾಡುತ್ತೇನೆ. ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Thu, 13 November 25