ಮೇಕೆದಾಟು ಯೋಜನೆಗೆ ಅನುಮತಿ ನೀಡಿ; ಮೋದಿ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪ್ರಸಿದ್ಧ ಜಲಪಾತವಾದ ಗಗನಚುಕ್ಕಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಿದ್ದ ಗಗನಚುಕ್ಕಿ ಜಲಪಾತೋತ್ಸವ-2025ಕ್ಕೆ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಉತ್ತಮವಾಗಿ ಮಳೆಯಾಗಿರುವುದರಿಂದ ಎಲ್ಲ ಜಲಾಶಯಗಳೂ ಭರ್ತಿಯಾಗಿ ಜಲಪಾತಗಳು ಕಳೆಗಟ್ಟಿವೆ. ಈ ವರ್ಷ ವಿದ್ಯುತ್ ಅಭಾವ ಉಂಟಾಗುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಮಂಡ್ಯ, ಸೆಪ್ಟೆಂಬರ್ 13: ಮೇಕೆದಾಟು ಯೋಜನೆ ಜಾರಿಯಾದರೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೂ ಅನುಕೂಲವಾಗುತ್ತದೆ. ಹೀಗಾಗಿ, ಈ ವಿಷಯದಲ್ಲಿ ರಾಜಕೀಯವನ್ನು ಬೆರೆಸದೆ ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಿವನಸಮುದ್ರದ ಬಳಿ ಗಗನಚುಕ್ಕಿ ಜಲಪಾತೋತ್ಸವಕ್ಕೆ (Gaganachukki Jalapathotsava) ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ (CM Siddaramaiah) ಮಾತನಾಡಿದರು.
ಕೆಆರ್ಎಸ್ ಡ್ಯಾಂ ನಿರ್ಮಾಣವಾದ ನಂತರ 94 ವರ್ಷಗಳ ಇತಿಹಾಸದಲ್ಲಿ ಇದೇ ಮೊದ ಬಾರಿಗೆ ಜೂನ್ನಲ್ಲಿ ಡ್ಯಾಂ ಭರ್ತಿಯಾಗಿದೆ. 120 ಟಿಎಂಸಿ ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದುಹೋಗಿದೆ. ತಮಿಳುನಾಡಿಗೆ ವರ್ಷಕ್ಕೆ 177.25 ಟಿಎಂಸಿ ನೀರು ಬಿಡಬೇಕೆಂದು ನಿರ್ಧಾರವಾಗಿದೆ. ಮಳೆಕೊರತೆ ಉಂಟಾದರೆ ಸಂಕಷ್ಟ ಸೂತ್ರ ಪಾಲಿಸಬೇಕಾಗುತ್ತದೆ. ಉತ್ತಮ ಮಳೆಯಿಂದ ನಮ್ಮ ರಾಜ್ಯದಲ್ಲಿ ಎಲ್ಲ ಜಲಾಶಯಗಳು ಈ ವರ್ಷ ಭರ್ತಿಯಾಗಿವೆ. ಹೀಗಾಗಿ, ಈ ವರ್ಷ ವಿದ್ಯುತ್ ಅಭಾವ ಉಂಟಾಗುವುದಿಲ್ಲ. ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ವಿವಾದ ಬರುವುದಿಲ್ಲ. ಮಳೆ ಸರಿಯಾಗಿ ಆದರೆರೆ ನೀರಿನ ಸಮಸ್ಯೆ ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಹಾಸನ ಅಪಘಾತ: 10 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸಿದ ಬಿಜೆಪಿ, ಸಿಎಂ ಸಿದ್ದರಾಮಯ್ಯ ಏನಂದ್ರು ನೋಡಿ
ಜನ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಳ್ಳಲಿ ಎಂದು ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಪಂಚ ಗ್ಯಾರಂಟಿಗಳಿಂದ ಮಂಡ್ಯ ಜಿಲ್ಲೆಯಲ್ಲಿ 3200 ಕೋಟಿ ರೂ. ಖರ್ಚಾಗಿದೆ. ಸಮಾಜದಲ್ಲಿರುವ ಅಸಮಾನತೆ ಹೋಗಲಿ, ಮಹಿಳೆಯರನ್ನ ಸ್ವಾವಲಂಬನೆ ಮಾಡಬೇಕು ಅನ್ನೋದೇ ಇದರ ಉದ್ದೇಶ. 2013-18ರ ಅವಧಿಯಲ್ಲಿ ಕೊಟ್ಟ 165ರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಈ ಅವಧಿಯಲ್ಲಿ ಕೊಟ್ಟ 492ರಲ್ಲಿ 242 ಭರವಸೆ ಈಡೇರಿಸಿದ್ದೇವೆ. ನಮ್ಮ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿ, ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ @siddaramaiah ಅವರು ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ “ಗಗನ ಚುಕ್ಕಿ ಜಲಪಾತೋತ್ಸವ – 2025” ಅನ್ನು ಉದ್ಘಾಟಿಸಿ, ಶುಭ ಕೋರಿದರು. pic.twitter.com/XmIAyYaCUL
— CM of Karnataka (@CMofKarnataka) September 13, 2025
ನಾವು ಅಧಿಕಾರಕ್ಕೆ ಬಂದಾಗಿನಿಂದ ಮಂಡ್ಯದ ಮೈಶುಗರ್‌ಗೆ 113 ಕೋಟಿ ಕೊಟ್ಟಿದ್ದೇವೆ. ಮಂಡ್ಯದ ಶುಗರ್ ಫ್ಯಾಕ್ಟರಿ ಮುಚ್ಚಲು ಸಾಧ್ಯವಿಲ್ಲ. ಅದನ್ನು ಲಾಭದಾಯಕವಾಗಿ ಮಾಡಲು ಎಲ್ಲರೂ ಶ್ರಮಿಸಬೇಕು. ಜಿಲ್ಲಾ ಮಂತ್ರಿ, ಶಾಸಕರು ಎಲ್ಲರೂ ಒಟ್ಟಾಗಿ ಫ್ಯಾಕ್ಟರಿ ಅಭಿವೃದ್ಧಿಯತ್ತ ಕೆಲಸ ಮಾಡಿ. ಬಾಯ್ಲಿಂಗ್ ಹೌಸ್ ಒಂದು ಮಾಡಿಕೊಟ್ಟರೆ ನಷ್ಟದಲ್ಲಿ ಇರಲ್ಲ ಅಂತಿದ್ದಾರೆ. ಅದನ್ನು ಕೂಡ ಮಾಡಿಕೊಡೋಣ ಎಂದಿದ್ದಾರೆ.
ಇದನ್ನೂ ಓದಿ: ನಾನೂ ಹಿಂದೂ, ನನ್ನ ಹೆಸರಲ್ಲೇ 2 ದೇವರಿದ್ದಾರೆ: ಸಿದ್ದರಾಮಯ್ಯ
ಪ್ರವಾಸೋದ್ಯಮ ಇರುವ ಕಡೆ ಅಭಿವೃದ್ಧಿಗೆ ನಮ್ಮ ಆದ್ಯತೆ. 1902ರಲ್ಲೇ ವಿದ್ಯುತ್ ಉತ್ಪಾದನೆ ಮಾಡಿದ್ದು ಇದೇ ಶಿವನಸಮುದ್ರ. ಇಲ್ಲಿಂದಲೂ ರಾಜ್ಯಕ್ಕೆ ವಿದ್ಯುತ್ ಬಳಸಿಕೊಳ್ಳುತ್ತಿದ್ದೇವೆ. ಈ ವರ್ಷ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. 5 ಲಕ್ಷಕ್ಕೂ ಹೆಚ್ಚು ಪ್ರದೇಶದಲ್ಲಿ ಮಳೆ ಹಾನಿಯಾಗಿದೆ. ಮಳೆ ಹಾನಿಯಾದ ಎಲ್ಲರಿಗೂ ಪರಿಹಾರ ಕೊಡ್ತೇವೆ. ವಿಡಿಯೋ ಕಾನ್ಫರೆನ್ಸಿನ ಮೂಲಕ ಡಿಸಿ, ಸಿಇಓಗೆ 10 ದಿನಗಳಲ್ಲಿ ಜಂಟಿ ವರದಿ ನೀಡಲು ಸೂಚನೆ ನೀಡಲಾಗಿದೆ. ದುಡ್ಡಿನ ಅಭಾವ ಇಲ್ಲ. ಮಳೆ ಹಾನಿ ಪರಿಹಾರ ಶೀಘ್ರ ಕೊಡ್ತೇವೆ. ಗ್ಯಾರಂಟಿಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ ಅಂತಾ ವಿಪಕ್ಷಗಳು ಅಪಪ್ರಚಾರ ಮಾಡ್ತಾರೆ. ಇಲ್ಲಿವರೆಗೆ ಗ್ಯಾರಂಟಿ ಯೋಜನೆಗಳಿಗೆ 99 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




